ಸಿಎಂ ಸಿದ್ದರಾಮಯ್ಯ ರಾಮಮಂದಿರ ಉದ್ಘಾಟನೆಗೆ ಹೋಗುವ ವಿಷಯದ ಕುರಿತು ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಯಲ್ಲಿ ಅವರು ಹೇಳಿದ್ದೇನು? ಮತ್ತು ಸಿದ್ದರಾಮಯ್ಯ ಅವರು ಕೊಟ್ಟ ಉತ್ತರ ಇಲ್ಲಿದೆ.
ಕುಮಟಾದಲ್ಲಿ ನಡೆದಿದ್ದ ಕಾರ್ಯಕ್ರಮ ಒಂದರಲ್ಲಿ ಮಾತಾಡಿದ್ದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ, ಸಿದ್ದರಾಮಯ್ಯ ಅವರು ಮೊದಲು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯ ಆಹ್ವಾನ ಬಂದಿಲ್ಲ ಎಂದು ಹೇಳಿದರು. ಆಹ್ವಾನ ಬಂದ ಮೇಲೆ ನಾನು ಹೋಗುವುದಿಲ್ಲ ಎಂದು ಹೇಳೀದರು. “ನೀನು ಬಾ ಅಥವಾ ಬಿಡು. ಆದರೆ, ರಾಮ ಜನ್ಮಭೂಮಿಯಲ್ಲಿ ನಡೆಯೋದು ಏನೂ ನಿಲ್ಲೋದಿಲ್ಲ ಮಗನೇ” ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಈ ಹಿಂದೆ ಅಯೋಧ್ಯೆಗೆ ಹೋಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯ, ಬಳಿಕ, ಜನವರಿ 22ರ ಬಳಿಕ ಯಾವಾಗಲಾದರೂ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು ಎಂದು ಹೇಳಿದ್ದರು.
ಆದರೆ ಇದು ವಾಸ್ತವ ಸಂಗತಿಯಲ್ಲ. ಅನಂತಕುಮಾರ ಹೆಗಡೆಯವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನಾನು ಅಯೋಧ್ಯೆಗೆ ಹೋಗಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪ್ರತಿಮೆ ಸ್ಥಾಪನೆಗೆ ನಮ್ಮದೇನೂ ವಿರೋಧವಿಲ್ಲ. ಆದರೆ ರಾಜಕೀಯ ಮಾಡಬಾರದು. 22ರಂದು ದೇವಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ರಾಜಕೀಯವಾಗಿ ಬಳಸಲು ಹೊರಟಿದ್ದಾರೆ. ಅದನ್ನು ನಾವು ವಿರೋಧಿಸುತ್ತೇವೆಯೇ ಹೊರತು ಶ್ರೀ ರಾಮಚಂದ್ರನ ವಿರೋಧಿಗಳಲ್ಲ. ನಾನು ಎಲ್ಲಿಯೂ ಅಯೋಧ್ಯೆಗೆ ಹೋಗುತ್ತೇನೆ ಅಥವಾ ಹೋಗುವುದಿಲ್ಲ ಎಂದು ಹೇಳಿಲ್ಲ ಎಂದು ಹೇಳಿದ್ದಾರೆ.




