ಬೆಂಗಳೂರು: “ಆಗಿದ್ದೆಲ್ಲಾ ಒಳ್ಳೆಯದಾಗಿದೆ, ಮುಂದೆಯೂ ಒಳ್ಳೆಯದಾಗಲಿದೆ” ಇದು ಸಿಎಂ ಮತ್ತು ಡಿಸಿಎಂ ಆಯ್ಕೆ ಕುರಿತು ಹೈಕಮಾಂಡ್ ನಿರ್ಧಾರ ಹೊರಬೀಳುತ್ತಿದ್ದಂತೆ ಡಿ.ಕೆ.ಶಿವಕುಮಾರ್ ನೀಡಿದ ಮೊದಲ ಪ್ರತಿಕ್ರಿಯೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವೂ ಒಳ್ಳೆಯದಾಗಿದೆ, ಮುಂದೆಯೂ ಒಳ್ಳೆಯದಾಗಲಿದೆ.ನಿನ್ನೆ ರಾತ್ರಿ ಒಂದು ಗಂಟೆಗೆ ನಾನೇ ಅಧಿಕೃತವಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ನಾಡಿದ್ದು 12.30ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಹುದ್ದೆಗೆ ಒಪ್ಪಿಕೊಂಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡದಾಗಿ ಅಧಿಕಾರ ನೀಡಿದ್ದಾರೆ. ಜನರಿಗೆ ನಾವು ಋಣ ತೀರಿಸಬೇಕಿದೆ. ಶಾಸಕಾಂಗ ಸಭೆಯಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಒಂದು ಸಾಲಿನ ನಿರ್ಣಯ ಮಾಡಿದ್ದೇವು. ಅದರಂತೆ ನಡೆದುಕೊಳ್ಳುತ್ತೇವೆ ಎಂದರು.
ಕಾದುನೋಡಿ:
ಇದರ ಬೆನ್ನಲ್ಲೇ ಸುದ್ದಿಗಾರರ ಜತೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಪ್ರಸ್ತುತ ವಿದ್ಯಮಾನಗಳು ತಮಗೆ ಪೂರ್ಣ ಸಂತೋಷ ನೀಡಿಲ್ಲ. ಆದರೆ, ರಾಜ್ಯದ ಜನರಿಗೆ ನಾವು ನೀಡಿರುವ ಭರವಸೆಗಳನ್ನು ಈಡೇರಿಸಬೇಕಿದೆ. ಅದಕ್ಕಾಗಿ ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು
ಡಿ.ಕೆ.ಶಿವಕುಮಾರ್ ಹಾಗೂ ಪಕ್ಷ ಮುಂದೆ ದೀರ್ಘಕಾಲದ ಪ್ರಯಾಣ ಮಾಡಬೇಕು. ತಮ್ಮ ಸಹೋದರ ಮುಖ್ಯಮಂತ್ರಿಯಾಗಬೇಕು ಎಂಬ ಆಕಾಂಕ್ಷೆ ತಮಗೂ ಇತ್ತು. ಆದರೆ ಅದು ಆಗಿಲ್ಲ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಿ ಎಂದಿದ್ದಾರೆ.




