20 ಕೆಜಿ ಕಾಸ್ಟ್ಯೂಮ್ ಧರಿಸಿ ಲಂಬಾಣಿ ಯುವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಮೋಹಕ ತಾರೆ ಶುಭಾ ಪೂಂಜಾ

5 years ago

ಅಂಬುಜ ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ ಶ್ರೀನಿ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾ ಪೂಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ಧರಾಗಿದ್ದಾರೆ.

2018ರಲ್ಲಿ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟಿಸಿ ಪ್ರೇಕ್ಷಕರನ್ನು ಗಮನ ಸೆಳೆದ “ಕೆಲವು ದಿನಗಳ ನಂತರ” ಸಿನಿಮಾದ ನಿರ್ದೇಶಕ ಶ್ರೀನಿ ಇದೀಗ ಹೊಸತೊಂದು ಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಶ್ರೀನಿ ಭರವಸೆಯ ಯುವ ನಿರ್ದೇಶಕ ಎನ್ನುವುದನ್ನು ಕೆಲವು ದಿನಗಳ ನಂತರ ಸಿನಿಮಾದಲ್ಲಿ ಸಾಬೀತುಮಾಡಿದ್ದಾರೆ. ಕಣ್ಣಿಗೆ ಕಟ್ಟುವ ಕಥೆಯನ್ನು ಸೃಷ್ಟಿ ಮಾಡುವುದರಲ್ಲಿ ಶ್ರೀನಿ ಎತ್ತಿದ ಕೈ. ಹೊಸ ಆಲೋಚನೆಯ ಜೊತೆಗೆ ಭಿನ್ನತೆಯನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬ ಹಂಬಲ ಹೊತ್ತ ಭರವಸೆಯ ನಿರ್ದೇಶಕನ ಹೊಸ ಸಿನಿಮಾ ಅಂಬುಜದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಶುಭಾ ಪೂಂಜಾ ಅಂಬುಜ ಚಿತ್ರದಲ್ಲಿ ಒಂದು ವಿಶೇಷ ಗೆಟಪ್ ನಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ ಹಾಗೂ ಇವರ ಜೊತೆಗೆ ಪದ್ಮಜಾ ರಾವ್, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ,  ಸಂದೇಶ್ ಶೆಟ್ಟಿ ಆಜ್ರಿ, ಮಜಾಭಾರತದ ಪ್ರಿಯಾಂಕ ಕಾಮತ್, ಬೇಬಿ ಆಕಾಂಕ್ಷ ಹಾಗೂ ಇನ್ನಿತರರು ಅಭಿನಯಿಸಿ ಚಿತ್ರದ ಮೆರುಗು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ.

ಅಂಬುಜ ಸಿನಿಮಾದ ಕಥೆ ಏನು ಹೇಳುತ್ತದೆ !?

ಸಮಾಜದಲ್ಲಿ ಆಗುವ ಕೆಲವು ಅವಘಡಗಳು ಹೇಗೆ ಸಾಮಾನ್ಯ ಜನರ ಬದುಕನ್ನು ಹಾಳು ಮಾಡುತ್ತವೆ ಹಾಗೂ ಅವರು ಅನುಭವಿಸುವ ತೊಂದರೆಗಳೇನು? ಅವರ ಅಸಹಾಯಕತೆಯನ್ನು ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ? ಜ್ಞಾನ-ವಿಜ್ಞಾನ-ಅಜ್ಞಾನಗಳ ಒಟ್ಟು ಚಿತ್ರಣವೇ ಅಂಬುಜ ಸಿನಿಮಾದ ಹೈಲೆಟ್ಸ್ ಆಗಿದೆ.

ಅಂಬುಜ ಒಂದು ಮಹಿಳಾ ಪ್ರಧಾನ ಹಾಗೂ ನೈಜ ಘಟನೆಯಾಧಾರಿತ  ಚಿತ್ರವಾಗಿದೆ. ಈ ಚಿತ್ರದಲ್ಲಿ ಬರುವ ಲಂಬಾಣಿ ಪಾತ್ರದ ವಸ್ತ್ರ ಹಾಗೂ ಆಭರಣಗಳನ್ನು ರೆಡಿ ಮಾಡಲು ಚಿತ್ರತಂಡ ನಾಲ್ಕು ತಿಂಗಳು ತೆಗೆದುಕೊಂಡಿದೆ. ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡಾದಲ್ಲಿ ಸುಮಾರು 4 ತಿಂಗಳು ಇದನ್ನು ತಯಾರು ಮಾಡಲು ಸಮಯ ನೀಡಿದ್ದೇವೆ ಎಂದು ನಿರ್ದೇಶಕ ಶ್ರೀನಿ ಮತ್ತು ನಿರ್ಮಾಪಕ ಕಾಶೀನಾಥ್ ಮಡಿವಾಳರ್ ಹೇಳಿದರು.

ಲಂಬಾಣಿ ವಸ್ತ್ರಾಲಂಕಾರದ  ತೂಕ ಬರೋಬ್ಬರಿ – 20KG ಇದೆ. ಇದನ್ನು ಇಡೀ ಸಿನಿಮಾದಲ್ಲಿ ಶುಭಾ ಪೂಂಜಾ ಹಾಕಿಕೊಂಡು ಚಿತ್ರೀಕರಣ ಮಾಡುವುದೇ ದೊಡ್ಡ ಸಾಹಸ ಎಂದು ಚಿತ್ರತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದೀಗ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಅಕ್ಟೋಬರ್ ತಿಂಗಳಲ್ಲಿ ಒಂದೇ ಶೆಡ್ಯೂಲ್ ನಲ್ಲಿ ಚಿತ್ರತಂಡ ಚಿತ್ರೀಕರಣ ಶುರು ಮಾಡಲಿದೆ. ಚಿತ್ರದ ಚಿತ್ರೀಕರಣ ಬೆಂಗಳೂರು, ಗದಗ ಹಾಗೂ ಚಿಕ್ಕಮಗಳೂರು, ಉಡುಪಿ, ಕುಂದಾಪುರ ಭಾಗಗಳಲ್ಲಿ ನಡೆಯಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ಕಥೆಯನ್ನು ಬರೆದು, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸಾಮಾಜಿಕ ಕಳಕಳಿಯ ಚಿತ್ರ ನಿರ್ದೇಶಿಸಿದ್ದ ಶ್ರೀನಿ ಹನುಮಂತರಾಜು ಚಿತ್ರಕಥೆ-ನಿರ್ದೇಶನ ಮಾಡಲಿದ್ದು ಹೊಸ ಭರವಸೆ ಸೃಷ್ಟಿಸಲು ಹೊರಟಿದ್ದಾರೆ.

ಮುರಳೀಧರ್ ಕ್ಯಾಮೆರಾ ವರ್ಕ್ ಹಾಗೂ ಸಂಗೀತವನ್ನು ಪ್ರಸನ್ನ ಕುಮಾರ್  ಹಾಗೂ  ಹಿನ್ನೆಲೆ ಸಂಗೀತವನ್ನು ಎಂ.ಎಸ್ ತ್ಯಾಗರಾಜ ಅವರು ಮಾಡಲಿದ್ದು, ಚಿತ್ರ ಮುಂದಿನ ತಿಂಗಳು ಚಿತ್ರೀಕರಣಕ್ಕೆ ಹೋಗಲು ಸಕಲ ಸಿದ್ಧತೆ ಮಾಡಿಕೊಂಡಿದೆ.

Leave a Reply