ಅಂಬುಜ ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ ಶ್ರೀನಿ
ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾ ಪೂಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ಧರಾಗಿದ್ದಾರೆ.
2018ರಲ್ಲಿ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟಿಸಿ ಪ್ರೇಕ್ಷಕರನ್ನು ಗಮನ ಸೆಳೆದ “ಕೆಲವು ದಿನಗಳ ನಂತರ” ಸಿನಿಮಾದ ನಿರ್ದೇಶಕ ಶ್ರೀನಿ ಇದೀಗ ಹೊಸತೊಂದು ಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಶ್ರೀನಿ ಭರವಸೆಯ ಯುವ ನಿರ್ದೇಶಕ ಎನ್ನುವುದನ್ನು ಕೆಲವು ದಿನಗಳ ನಂತರ ಸಿನಿಮಾದಲ್ಲಿ ಸಾಬೀತುಮಾಡಿದ್ದಾರೆ. ಕಣ್ಣಿಗೆ ಕಟ್ಟುವ ಕಥೆಯನ್ನು ಸೃಷ್ಟಿ ಮಾಡುವುದರಲ್ಲಿ ಶ್ರೀನಿ ಎತ್ತಿದ ಕೈ. ಹೊಸ ಆಲೋಚನೆಯ ಜೊತೆಗೆ ಭಿನ್ನತೆಯನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬ ಹಂಬಲ ಹೊತ್ತ ಭರವಸೆಯ ನಿರ್ದೇಶಕನ ಹೊಸ ಸಿನಿಮಾ ಅಂಬುಜದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ನಾಳೆ ಬಿಡುಗಡೆ ಮಾಡಲಿದೆ.
ಶುಭಾ ಪೂಂಜಾ ಅಂಬುಜ ಚಿತ್ರದಲ್ಲಿ ಒಂದು ವಿಶೇಷ ಗೆಟಪ್ ನಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ ಹಾಗೂ ಇವರ ಜೊತೆಗೆ ಪದ್ಮಜಾ ರಾವ್, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ, ಸಂದೇಶ್ ಶೆಟ್ಟಿ ಆಜ್ರಿ, ಮಜಾಭಾರತದ ಪ್ರಿಯಾಂಕ ಕಾಮತ್, ಬೇಬಿ ಆಕಾಂಕ್ಷ ಹಾಗೂ ಇನ್ನಿತರರು ಅಭಿನಯಿಸಿ ಚಿತ್ರದ ಮೆರುಗು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ.
ಮುರಳೀಧರ್ ಕ್ಯಾಮೆರಾ ವರ್ಕ್ ಹಾಗೂ ಸಂಗೀತವನ್ನು ಪ್ರಸನ್ನ ಕುಮಾರ್ ಹಾಗೂ ಹಿನ್ನೆಲೆ ಸಂಗೀತವನ್ನು ಎಂ.ಎಸ್ ತ್ಯಾಗರಾಜ ಅವರು ಮಾಡಲಿದ್ದು, ಚಿತ್ರ ಮುಂದಿನ ತಿಂಗಳು ಚಿತ್ರೀಕರಣಕ್ಕೆ ಹೋಗಲು ಸಕಲ ಸಿದ್ಧತೆ ಮಾಡಿಕೊಂಡಿದೆ.



