ಲೋಕಾಯುಕ್ತ ಅಧಿಕಾರಿಗಳಿಂದ ಭ್ರಷ್ಟರಿಗೆ ಶಾಕ್

2 years ago

#Shock Lokayukta #officials #corrupt

ಬೆಂಗಳೂರು: ನಿಗದಿತ ಆದಾಯ ಮೂಲ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿಪಾಸ್ತಿ ಗಳಿಸಿರುವ ಭ್ರಷ್ಟ ಅಧಿಕಾರಿಗಳ  ಬೇಟೆಯನ್ನು ತೀವ್ರಗೊಳಿಸಿರುವ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ಸೇರಿ ರಾಜ್ಯದ ಅನೇಕ ಕಡೆ ದಾಳಿ ಮಾಡಿ  ಹಲವು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

ಹಲವು ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಹಚ್ಚಿದ್ದಾರೆ.

ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಏಕಕಾಲದಲ್ಲಿಯೇ ಬೆಂಗಳೂರು, ಚಿತ್ರದುರ್ಗ, ಕಲಬುರಗಿ, ರಾಯಚೂರು, ಹಾಸನ, ಬೀದರ್, ದೇವದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ  ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಬೆಂಗಳೂರಿನಲ್ಲಿ 11 ಕಡೆ ದಾಳಿ:
ನಗರದ 11 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೆಆರ್‌ ಪುರದಲ್ಲಿನ ಎಆರ್ ಓ ಚಂದ್ರಪ್ಪ ಬಿರಜ್ಜನವರ್ಗೆ ಸಂಬಂಧಪಟ್ಟ ಮೂರು ಕಡೆ ದಾಳಿ ಮಾಡಲಾಗಿದೆ.

ಬಿಬಿಎಂಪಿ ಹೆಗ್ಗನಹಳ್ಳಿ ವಾರ್ಡ್ ನ ಆರ್.ಆರ್.ನಗರ ವಲಯಾಧಿಕಾರಿ ಚಂದ್ರಪ್ಪ ಅವರ ಕೆ.ಆರ್.ಪುರಂ ನಿವಾಸದಲ್ಲಿ ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ಈ ಹಿಂದೆ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದ ಎಆರ್ ಓ ಚಂದ್ರಪ್ಪ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಬೆಳಗಾವಿಯಲ್ಲಿ ಶೋಧ: ಬೆಳಗಾವಿಯಲ್ಲಿ ಪಂಚಾಯತ್ ರಾಜ್ ಇಲಾಖೆ ಎಇಇ ಎಂ.ಎಸ್ ಬಿರಾದಾರ ಅವರ ವಿಶ್ವೇಶ್ವರಯ್ಯ ನಗರದ ಶ್ರದ್ಧಾ ಅಪಾರ್ಟಮೆಂರ್ಟ್ನಲ್ಲಿರುವ ಫ್ಲಾಟ್ ಮೇಲೆ ದಾಳಿ ಮಾಡಿದ್ದು, ಲೋಕಾಯುಕ್ತ ಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.

ಚಿತ್ರದುರ್ಗದಲ್ಲಿ ದಾಳಿ: ಭ್ರಷ್ಟಚಾರದ ಆರೋಪ ಹೊತ್ತಿರುವ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಸೂರ್ಯೋದಯಕ್ಕೂ ಮುನ್ನವೇ ವಾಹನಗಳಲ್ಲಿ ಪ್ರತ್ಯೇಕ ತಂಡವಾಗಿ ಆಗಮಿಸಿದ ಅಧಿಕಾರಿಗಳಿಂದ ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಚಿತ್ರದುರ್ಗದ ಲೋಕಾಯುಕ್ತ ಎಸ್ಪಿ ವಾಸುದೇವ ರಾವ್ ನೇತೃತ್ವದಲ್ಲಿ ಈ ಎರಡೂ ದಾಳಿ ನಡೆಸಲಾಗಿದೆ.

ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಅವರಿಗೆ ಸೇರಿದ ಹಿರಿಯೂರು ನಗರದ ಚಂದ್ರಾ ಲೇಔಟ್ ನಲ್ಲಿರುವ ಮನೆಗೆ ಒಂದು ತಂಡ, ತವಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಗೆ ಎರಡನೇ ತಂಡ ಹೋಗಿದೆ. ಅಷ್ಟೇ ಅಲ್ಲ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರ ಹಿರಿಯೂರು ಪಟ್ಟಣದ ಕುವೆಂಪು ನಗರದ ಮನೆಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ.

ಹಾಸನದಲ್ಲೂ ಶೋಧಕಾರ್ಯ: ಹಾಸನದ ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಎಚ್ ಇ.ನಾರಾಯಣ ಎಂಬುವವರ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್‌ಪಿ ಮಲ್ಲಿಕ್, ಡಿವೈಎಸ್‌ಪಿ ತಿರುಮಲೇಶ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ನೇತೃತ್ವದಲ್ಲಿ ಹಾಸನ ಹೊರವಲಯದ ಬೊಮ್ಮನಾಯಕನಹಳ್ಳಿರುವ ನಾರಾಯಣ ಅವರ ನಿವಾಸ ಹಾಗೂ ಗೊರೂರಿನಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಹಾವೇರಿಯಲ್ಲಿ ದಾಳಿ: ಹಾವೇರಿ ಆರ್ ಎಫ್ ಒ ಪರಮೇಶಪ್ಪ ಪೇರಲನವರ್ ಹಾಗೂ ನ್ಯಾಮತಿ ಆರ್ ಎಫ್ಒ ಮಾಲತೇಶ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಏಕಕಾಲಕ್ಕೆ 9 ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ಶಿವಾಜಿನಗರ, ದಾನೇಶ್ವರಿ ಪಾರ್ಕ್, ದಾನಮ್ಮ ದೇವಿ ದೇವಸ್ಥಾನ ಬಳಿ ಇರುವ ಮನೆಗಳಲ್ಲಿ ಶೋಧ ನಡೆಸಿದ್ದಾರೆ.

ಕಲಬುರಗಿಯಲ್ಲಿ ಶೋಧ: ಬೀದರ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಮತ್ತು ದೇವದುರ್ಗದ ಕೆಬಿಜೆಎನ್ ಎಲ್ ಇಇ ತಿಪ್ಪಣ್ಣ ಅನ್ನದಾನಿ ಮನೆಗಳ ಮೇಲೆ ದಾಳಿಯಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆಯ ಆರೋಪ ಹಿನ್ನಲೆ ಲೋಕಾಯುಕ್ತ ಎಸ್ಪಿ ಎಸ್.ಎಸ್.ಕರ್ನೂಲ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಬಲೆಗೆ ಬಿದ್ದ ಅಧಿಕಾರಿಗಳು:

ತಿಪ್ಪಣ್ಣಗೌಡ ಕಾರ್ಯನಿರ್ವಾಹಕ ಅಭಿಯಂತರರು, ಕೃಷ್ಣಾ ಭಾಗ್ಯ ಜಲ ನಿಗಮ  ದೇವದುರ್ಗ.
* ಬಸವರಾಜ ತಂದೆ ಶ್ರೀಶೈಲ ಡಾಂಗೆ ವಲಯ ಅರಣ್ಯಾಧಿಕಾರಿ, ಬೀದರ್
* ಮಹಾಂತೇಶ ತಂದೆ ಸದಾನಂದ ನ್ಯಾಮತಿ ವಲಯ ಅರಣ್ಯಾಧಿಕಾರಿ, ಹಾವೇರಿ ಉಪ ವಿಭಾಗ.
* ಪರಮೇಶಪ್ಪ ತಂದೆ ಹನುಮಂತಪ್ಪ ಪೆಲ್ನಾವರ ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ವಿಭಾಗ, ಕೃಷಿ ಘಟಕ, ಹಾವೇರಿ.
* ಎಂ.ಪಿ. ನಾಗೇಂದ್ರ ನಾಯ್ಕ್ ತಂದೆ ಪಾಪನಾಯಕ್, ಎಸಿಎಫ್, ಸಾಮಾಜಿಕ ಅರಣ್ಯ ಕಛೇರಿ, ಚಿತ್ರದುರ್ಗ.
* ಬಾಲರಾಜು ಎನ್.ಪಿ‌ ಮುಖ್ಯ ಇಂಜಿನಿಯರ್, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು.
* ಕೆ.ಮಂಜುನಾಥ್ ತಂದೆ ಕೆ.ಬಸಣ್ಣ ಕಂದಾಯ ನಿರೀಕ್ಷಕರು, ಬಳ್ಳಾರಿ
* ಶರಣಬಸಪ್ಪ ಪಟ್ಟೇಡ್ ನಿರ್ದೇಶಕರು, ಯೋಜನೆ, ಕ್ಯಾಶ್ಯೂಟೆಕ್ ನಿರ್ಮಿತಿ ಕೇಂದ್ರ, ಶಕ್ತಿ ನಗರ, ರಾಯಚೂರು.
* ಎಂ.ನಾಗೇಂದ್ರಪ್ಪ ತಂದೆ ಮಾರಯ್ಯ, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಿರಾ, ತುಮಕೂರು.
*ವಿ.ಕೃಷ್ಣಮೂರ್ತಿ ತಂದೆ ದಿವಂಗತ ವೆಂಕಟಪ್ಪ, ಸಹಾಯಕ ನಿರ್ದೇಶಕ, ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ
*ಅಪ್ಪಾಸಾಹೇಬ ಸಿದ್ಲಿಂಗ್ ಕಾಂಬಳೆ ಜಂಟಿ ನಿರ್ದೇಶಕರು, ನಗರ ಯೋಜನೆ, ಗುಲ್ಬರ್ಗ.
*ಚಂದ್ರಪ್ಪ ಕೆ.ವಿ ಎಆರ್ ಒ, ಹೆಗ್ಗನಹಳ್ಳಿ,ಬಿಬಿಎಂಪಿ  ಬೆಂಗಳೂರು
* ಹೆಚ್.ರಾಜೇಶ್ ತಂದೆ ಹಮ್ಮಣ್ಣ ನಾಯಕ್, ಬೇಲೇಕೇರಿ. ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ. ಉಡುಪಿ.
* ನಾರಾಯಣ ಹೆಚ್ ಇ ತಂದೆ ಈರೇಗೌಡ ಜೂನಿಯರ್ ಇಂಜಿನಿಯರ್, ಕೆಪಿಟಿಸಿಎಲ್, ಗೊರೂರು, ಹಾಸನ.
* ಮಹಾದೇವ ತಂದೆ ಸಣ್ಣಪ್ಪ ಬೀರದಾರ ಪಾಟೀಲ್. ಎಇಇ, ಪಂಚಾಯತ್ ರಾಜ್ ಉಪವಿಭಾಗ, ಬೆಳಗಾವಿ.
* ಶಶಿಕುಮಾರ್ ಟಿ ಎಂ ತಂದೆ ಮಾದಯ್ಯ ಟಿ ಸಿ ಎಕ್ಸಿಕ್ಯೂಟಿವ್ ಇಂಜಿನಿಯರ್, ಟೌನ್ ಪ್ಲಾನಿಂಗ್, ಕೆಐಎಡಿಬಿ ಬೆಂಗಳೂರು.
*ಶ್ರೀನಿವಾಸ್ ಎಸ್.ಆರ್ ತಂದೆ ರಾಮಣ್ಣ ಡಿ. ಬಾಯ್ಲರ್ ಫಾರ್ ಉಪನಿರ್ದೇಶಕರು, ದಾವಣಗೆರೆ.

Leave a Reply