ಬೆಂಗಳೂರು: ಉಪ ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ನಿವಾಸದ ಕಾಂಪೌಂಡ್ ಗೋಡೆಗೆ ಆಶ್ಲೀಲ ಬರಹ ಪೋಸ್ಟರ್ ಗಳನ್ನು ಅಂಟಿಸಲಾಗಿದೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕುರಿತು ಪುಕ್ಕಲ, ಮೋಸಗಾರ, ಸಿಡಿ ಮಾಸ್ಟರ್, ಮಾಜಿ ಮಂತ್ರಿಯಾಗುತ್ತಾರೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಶಿವಕುಮಾರ್ ಅನಗತ್ಯವಾಗಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಹಿಂದೆಯೂ ಅವರು ಇದೇ ರೀತಿ ಮಾಡಿದ್ದರಿಂದ ತಾನೇ ಮುಂದೆ ನಿಂತು ಅಂದಿನ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದೆ. ಆ ಸರ್ಕಾರವನ್ನು ಪತನಗೊಳಿಸುವಲ್ಲಿ ಬಿಜೆಪಿಯ ಯಾವುದೇ ಕೈವಾಡ ಇರಲಿಲ್ಲ. ತಾನೇ ಮುಂದೆ ನಿಂತು ಸರ್ಕಾರ ಪತನಗೊಳಿಸಿದ್ದಾಗಿ ತಿಳಿಸಿದ್ದರು.
ಅಲ್ಲದೆ ಈಗಲೂ ಕೂಡ ಶಿವಕುಮಾರ್ ಅವರು ಅನಗತ್ಯವಾಗಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅದೇ ಕಾರಣದಿಂದ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ. ಶಿವಕುಮಾರ್ ಮಾಜಿ ಆಗಲಿದ್ದಾರೆ ಎಂದು ಭವಿಷ್ಯ ನಡೆದಿದ್ದರು.
ಇದರಿಂದ ಆಕ್ರೋಶಗೊಂಡ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು ಎನ್ನಲಾದ ಕೆಲವರು ಬೆಂಗಳೂರಿನ ಸದಾಶಿವನಗರದಲ್ಲಿರುವ ರಮೇಶ್ ಜಾರಕಿಹೊಳಿ ಮನೆಯ ಗೋಡೆಗಳಿಗೆ ಅವಾಚ್ಯ ಬರಹಗಳಿರುವ ಪೋಸ್ಟರ್ ಅಂಟಿಸಿ ಪರಾರಿಯಾಗಿದ್ದಾರೆ.
ಡಿ.ಕೆ. ಶಿವಕುಮಾರ್ ಮನೆಯ ಹಿಂಭಾಗದಲ್ಲಿರುವ ರಮೇಶ್ ಜಾರಕಿಹೊಳಿ ಮನೆ ಗೋಡೆಗಳಿಗೆ ಅಶ್ಲೀಲ ಬರಹಗಳಿರುವ ಪೋಸ್ಟರ್ ಅಂಟಿಸಿದ್ದಾರೆ. ಕೆಲವೊಂದು ಉಲ್ಲೇಖಿಸಲಾಗದ ಪದಗಳ ಜತೆಗೆ ಇದೇ ನಿನ್ನ ಸಂಸ್ಕೃತಿ ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ.
ಅಶ್ಲೀಲ ಬರಹಗಳ ಪೋಸ್ಟರ್ ಅಂಟಿಸಿದ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಕೂಡಲೇ ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಶೇಷಾದ್ರಿಪುರಂ ಉಪ ವಿಭಾಗ ಎಸಿಪಿ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು. ಮುಂಜಾಗ್ರತಾ ಕ್ರಮವಾಗಿ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಬಿಗಿಭದ್ರತೆ ಒದಗಿಸಿದ್ದಾರೆ.




