ಬಸವಾದಿ ಪ್ರಮಥರಿಗೆ ಭಾರೀ ಅನ್ಯಾಯವಾಗಿದೆ ಎಂದು ಶರಣ ಬಸವ ದೇವರು ಅಭಿಪ್ರಾಯಪಟ್ಟಿದ್ದಾರೆ. ಇಡೀ ಜಗತ್ತಿಗೆ ಬೆಳಕಾಗಬೇಕಾದ ಲಿಂಗಾಯತ ಧರ್ಮವನ್ನು ಸೀಮಿತಗೊಳಿಸಲಾಗಿದೆ. ಎಲ್ಲ ಜಾತಿಗಳನ್ನು ಒಂದುಗೂಡಿಸಿ, ವಿಚಾರಗಳಿಂದ ವ್ಯಕ್ತಿ ದೊಡ್ಡವನಾಗುತ್ತಾನೆ ಎಂದು ಬಸವಣ್ಣ ಹೇಳಿದ್ದರು. ಅನುಭವ ಮಂಟಪದಲ್ಲಿ ಎಲ್ಲರಿಗೂ ಸಮಾನತೆಯನ್ನು ಕೊಡುವ ಮೂಲಕ ಪ್ರಗತಿಪಥದತ್ತ ಕೊಂಡೊಯ್ದರು ಎಂದು ಅವರು ಹೇಳಿದ್ದಾರೆ.
https://youtu.be/duos2Ll74NY
900 ವರ್ಷಗಳ ಹಿಂದೆ ಅತ್ಯಂತ ಕೆಳಸ್ತರದ ಹೆಣ್ಣುಮಕ್ಕಳ ಕೈಯಲ್ಲಿ ಲೆಕ್ಕಣಿಕೆ ಕೊಟ್ಟು ವಿದ್ಯೆಗಿಂತ ಅನುಭಾವ ದೊಡ್ಡದು ಎಂದು ಹೇಳಿದವರು ಬಸವಣ್ಣ ಎಂದು ಅವರು ಹೇಳಿದ್ದಾರೆ.
ಬಸವಣ್ಣನವರ ಕ್ರಾಂತಿ ಇಷ್ಟಕ್ಕೆ ನಿಲ್ಲುವುದಿಲ್ಲ. ಶತಶತಮಾನಗಳಿಂದ ತುಳಿತಕ್ಕೊಳಗಾಗಿರುವ ಭಾರತೀಯ ಪರಂಪರೆಗೆ ಅಸ್ತಿತ್ವ, ಜೀವಂತಿಕೆ ಕಳೆ ಬರಬೇಕಾದರೆ ಬಸವಣ್ಣನಿಗೆ ಪ್ರಾತಿನಿಧ್ಯ ಸಿಗಬೇಕಾಗುತ್ತದೆ. ಪ್ರಜೆಗಳ ಮಾತಿಗೆ ಬೆಲೆಯೇ ಇಲ್ಲದಂತಹ ಕಾಲದಲ್ಲಿ ಪ್ರಜಾಪ್ರಭುತ್ವಕ್ಕೆ ದೊಡ್ಡ ಘನತೆಯನ್ನು ತಂದುಕೊಟ್ಟರು ಎಂದಿದ್ದಾರೆ.
ಮಾದಾರ ಚೆನ್ನಯ್ಯನ ಮನೆಯ ಮಗ, ಡೋಹರ ಕಕ್ಕಯ್ಯನ ಮನೆಯ ಮಗಳು, ಇವರು ಬೆರಣಿಗೆ ಹೋಗಿ ಸಂಗವ ಮಾಡಿದರು, ಅವರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ ಎಂದು ಹೇಳಿಕೊಳ್ಳಬೇಕಾದರೆ, ನಾನು ಅತ್ಯಂತ ಹಿಂದುಳಿದವರ ಮನೆಯೊಳಗಿನ ಚಾಕರಿ ಮಾಡುವವರ ಮಗ ಎಂದು ಹೇಳಿಕೊಳ್ಳುವಂತಹ ಮನುಷ್ಯ ಪ್ರಾಯಶಃ ದೇಶದ ಇತಿಹಾಸದಲ್ಲಷ್ಟೇ, ಅಲ್ಲ ಜಗತ್ತಿನಲ್ಲೇ ಬಸವಣ್ಣನವರೊಬ್ಬರೆ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
ಬಸವಣ್ಣ ಒಳ್ಳೆಯ ರಾಜಕಾರಣಿ, ಸಾಹಿತಿಯೂ ಹೌದು. ಅನುಭಾವಿಗಳೂ ಹೌದು, ಅಂತಃಕರಣಮೂರ್ತಿಗಳೂ, ಸಮಾಜಸುಧಾರಕರೂ ಹೌದು. ಅವರು ಹೊಸ ಲಿಂಗವಂತ ಎಂಬ ಧರ್ಮ ಸಂಸ್ಥಾಪಕರೂ ಹೌದು. ಇಷ್ಟೇ ಅಲ್ಲ, ನಿರಾಕಾರವಾದ ಪರಶಿವನನ್ನು ಕಾಣುವುದು ಸರಳವಲ್ಲ. ಆ ನಿರಾಕಾರವಾದ ಪರಶಿವನ ಸಾಕಾರ ರೂಪವೇ ಬಸವಣ್ಣ ಎಂದು ಜನ ತಿಳಿದಿದ್ದಾರೆ ಎಂದಿದ್ದಾರೆ.




