ವೀರಶೈವ ಲಿಂಗಾಯತ ಸಮುದಾಯದ ಸಮಾವೇಶಗಳಿಂದ ಪಕ್ಷಕ್ಕೆ ಮುಜುಗರದ ಸನ್ನಿವೇಶ: ವಿಜಯೇಂದ್ರ

1 year ago

ಬೆಂಗಳೂರು: ನಾಯಕತ್ವ ಕುರಿತಂತೆ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ವಿದ್ಯಮಾನಗಳು ಇದೀಗ ಜಾತಿ ಬಲಾಬಲದ ಸ್ವರೂಪ ಪಡೆದುಕೊಂಡಿದೆ. ಇದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ವರದಿಗಳ ಬೆನ್ನಲ್ಲೇ ತಮ್ಮ ಆಪ್ತರಿಗೆ ಜಾತಿ ಸಮಾವೇಶ ನಡೆಸದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೂಚಿಸಿದ್ದಾರೆ‌.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ನಲ್ಲಿ ಪೋಸ್ಟ್ ಮಾಡಿರುವ ಅವರು, ಕೆಲವು ಹಿತೈಷಿಗಳು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನನ್ನ ಹಾಗೂ ಬಿ.ಎಸ್ .ಯಡಿಯೂರಪ್ಪನವರ ಮೇಲಿನ ಅಭಿಮಾನದ ಕಾರಣಕ್ಕಾಗಿ ವೀರಶೈವ ಲಿಂಗಾಯತ ಸಮುದಾಯದ ಸರಣಿ ಸಭೆಗಳನ್ನು ನಡೆಸಲು ಹೊರಟಿರುವ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣದಲ್ಲೇ ಇದನ್ನು ನಿಲ್ಲಿಸುವಂತೆ ತಿಳಿಸಿದ್ದೇನೆ. ಇದರಿಂದ ಪಕ್ಷಕ್ಕೂ ಸಹ ಮುಜುಗರದ ಸನ್ನಿವೇಶ ಸೃಷ್ಟಿಯಾಗಲಿದೆ ಎಂದಿದ್ದಾರೆ.

ನಮ್ಮ ಹಿತೈಷಿಗಳು ಹಾಗೂ ಅಭಿಮಾನಿಗಳು ತಮ್ಮ ಗಮನವನ್ನು ಪಕ್ಷ ಸಂಘಟನೆಯತ್ತ ಕೇಂದ್ರೀಕರಿಸಬೇಕೇ ಹೊರತು, ಸಮಾಜದ ಹೆಸರಿನಲ್ಲಿ ಸಭೆಗಳನ್ನು ಸಂಘಟಿಸುವ ಪ್ರಯತ್ನಗಳನ್ನು ಈ ಕೂಡಲೇ ನಿಲ್ಲಿಸುವಂತೆ ಈ ಮೂಲಕ ವಿನಂತಿಸುವೆ ಎಂದು ಮನವಿ ಮಾಡಿದ್ದಾರೆ.

ಸಮ ಸಮಾಜ ಕಟ್ಟಲು ತಮ್ಮನ್ನು ಸಮರ್ಪಿಸಿಕೊಂಡ ಅಣ್ಣ ಬಸವಣ್ಣನವರ ತತ್ವ ಅನುಸರಿಸಿ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಎಂಬ ಧೈಯ ಪಾಲಿಸಿ ಆಡಳಿತ ನಡೆಸಿದವರು ಬಿ.ಎಸ್.ಯಡಿಯೂರಪ್ಪನವರು, ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವ ನಾನು ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದವನು ಎಂಬ ಬಗ್ಗೆ ಕಾಳಜಿ ಪೂರ್ವಕ ಹೆಮ್ಮೆ ಇರಿಸಿಕೊಂಡಿದ್ದೇನೆ ಎಂದು ಪ್ರಶಂಸಿಸಿದ್ದಾರೆ.

ಈ ನಿಟ್ಟಿನಲ್ಲಿ ಸಮಾಜದ ಆಶಯಕ್ಕೆ ಪೂರಕವಾಗಿ ಸರ್ವ ಸಮಾಜಗಳ ಬಗ್ಗೆ ಸಮಭಾವ ಇಟ್ಟುಕೊಂಡು ಒಟ್ಟು ಸಮಾಜದ ಏಳಿಗೆ ಹಾಗೂ ಅಭಿವೃದ್ಧಿಗಾಗಿ ಚಿಂತಿಸುವವನು, ಆ ಮೂಲಕ ಸಮಗ್ರ ಕರ್ನಾಟಕದ ಶ್ರೇಯೋಭಿವೃದ್ಧಿಗಾಗಿ ಹಾಗೂ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಮಹಾ ಸಂಕಲ್ಪದ ಗುರಿ ಸಾಧಿಸಲು ಪರಿಶ್ರಮಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತ ಪ್ರತಿಪಾದಿಸುವ ಒಬ್ಬ ನಿಷ್ಠ ಕಾರ್ಯಕರ್ತನಾಗಿ ಹೆಜ್ಜೆ ಇಡುತ್ತಿದ್ದೇನೆ ಎಂದು ವಿಜಯೇಂದ್ರ ಪೋಸ್ಟ್ ಮಾಡಿದ್ದಾರೆ.

Leave a Reply