ಬೆಂಗಳೂರು: ಅಗತ್ಯವಿಲ್ಲದಿದ್ದರೂ ಕೆಲವರು ಆರೋಗ್ಯ ಕಾರಣದಿಂದಾಗಿ ಪಡಿತರ ಚೀಟಿ ಪಡೆಯುತ್ತಿದ್ದಾರೆ. ಇದರಿಂದ ಸಾಕಷ್ಟು ಗೊಂದಲ ಉಂಟಾಗುತ್ತಿದೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ಕೇವಲ ವೈದ್ಯಕೀಯ ಸೌಲಭ್ಯ ಪಡೆಯಲು ಪಡಿತರ ಚೀಟಿ ಪಡೆಯಲು ಇಚ್ಚಿಸುವವರಿಗೆ ಪ್ರತ್ಯೇಕ ಕಾರ್ಡ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಚೀಟಿ ಬಯಸುವವರಲ್ಲಿ ಪಡಿತರ ಹಾಗೂ ಆರೋಗ್ಯ ಸೇವೆ ಎರಡನ್ನೂ ಬಯಸುವ ವರ್ಗವಿದೆ. ಇನ್ನೊಂದು ವರ್ಗ ಪಡಿತರ ಪಡೆಯದೆ ಕೇವಲ ಆರೋಗ್ಯ ಸೇವೆಯನ್ನಷ್ಟೇ ಪಡೆಯಲು ಇಚ್ಚಿಸುತ್ತದೆ. ಹೀಗಾಗಿ ಬಿಪಿಎಲ್ ಪಡಿತರಚೀಟಿದಾರರನ್ನು ಎ, ಬಿ ಎಂದು ವರ್ಗೀಕರಿಸುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದರು.
ಈ ಬಗ್ಗೆ ಮನೆ ಮನೆ ಸರ್ವೆ ಮಾಡಿಸಿ ವರದಿ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಇದರಿಂದ ಎಷ್ಟು ಪಡಿತರ ಚೀಟಿದಾರರು ಅಕ್ಕಿ ಮತ್ತು ಆರೋಗ್ಯ ಸೇವೆ ಎರಡನ್ನೂ ಬಯಸುತ್ತಾರೆ, ಎಷ್ಟು ಮಂದಿ ಕೇವಲ ವೈದ್ಯಕೀಯ ಸೇವೆಯನ್ನು ಅಪೇಕ್ಷಿಸುತ್ತಾರೆ ಎಂಬುದು ಸ್ಪಷ್ಟವಾಗಲಿದೆ ಎಂದು ಹೇಳಿದರು.
ಹೆಚ್ಚುವರಿ 5 ಕೆಜಿ ಅಕ್ಕಿ ಹಣವನ್ನು ಪಡಿತರಚೀಟಿದಾರರ ಖಾತೆಗೆ ವರ್ಗಾವಣೆ ಮಾಡುತ್ತಿದ್ದು, ಈಗಾಗಲೇ 27 ಜಿಲ್ಲೆಗಳ ಪಡಿತರಚೀಟಿದಾರರಿಗೆ ಹಣ ವರ್ಗಾವಣೆಯಾಗಿದೆ. ಇನ್ನು ಚಿಕ್ಕಬಳ್ಳಾಪುರ, ಶಿವಮೊಗ್ಗ, ಉಡುಪಿ, ವಿಜಯನಗರ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಬೇಕಿದೆ. ಇದು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಅಕ್ಕಿ ಬದಲು ಹಣ ವರ್ಗಾವಣೆ ಮಾಡುವುದಕ್ಕೆ 566 ಕೋಟಿಯಾಗಿದೆ. ಇದರ ಪ್ರಯೋಜನ 3,45,32,984 ಫಲಾನುಭವಿಗಳಿಗೆ ದೊರೆಯಲಿದೆ ಎಂದರು.
ರಾಜ್ಯದಲ್ಲಿ 1, 28,17,337 ಪಡಿತರಚೀಟಿದಾರರು ಇದ್ದು, 97,27,165 ಪಡಿತರಚೀಟಿದಾರರಿಗೆ ಈ ರೀತಿ ಅಕ್ಕಿ ಬದಲು ಹಣ ವರ್ಗಾವಣೆಯಾಗಲಿದೆ. ಆಧಾರ್‍ಕಾರ್ಡ್ ಜೋಡಣೆಯಾಗದ, ಬ್ಯಾಂಕ್ ಖಾತೆ ಇಲ್ಲದೆ, ಕುಟುಂಬದ ಮುಖ್ಯಸ್ಥರಿಲ್ಲದ 30.90 ಲಕ್ಷ ಕಾರ್ಡ್‍ಗಳಿವೆ ಎಂದು ವಿವರಿಸಿದರು.
ಜಿಲ್ಲಾ ಉಪನಿರ್ದೇಶಕರಿಗೆ ಸುತ್ತೋಲೆ ಮೂಲಕ ಸೂಚನೆ ನೀಡಿ ಆಯಾ ಜಿಲ್ಲೆಯಲ್ಲಿ ಬ್ಯಾಂಕ್ ಖಾತೆ ಹೊಂದಿಲ್ಲದ ಪಡಿತರಚೀಟಿದಾರರಿಗೆ ಬ್ಯಾಂಕ್ ಖಾತೆ, ಆಧಾರ್ ಖಾತೆ ಜೋಡಣೆ ಮಾಡುವುದು, ಒಂದು ವೇಳೆ ಯಜಮಾನರು ಮೃತರಾಗಿದ್ದಾರೆ ಅವರನ್ನು ಬದಲಾಯಿಸುವುದು, ಜನನವಾದ ಮಕ್ಕಳ ಹೆಸರನ್ನು ಸೇರ್ಪಡೆ ಮಾಡಲು ಸೂಚಿಸಲಾಗುವುದು ಎಂದರು.
ಬಿಪಿಎಲ್ ಕಾರ್ಡ್‍ಗಾಗಿ ಹೊಸದಾಗಿ ಮೂರು ಲಕ್ಷ ಅರ್ಜಿಗಳು ಬಂದಿದ್ದು, ವೈದ್ಯಕೀಯ ಸೌಲಭ್ಯದ ಅಗತ್ಯ ಇರುವವರಿಗೆ ಆದ್ಯತೆ ನೀಡಲಾಗುವುದು. ಪರಿಶೀಲನೆ ನಡೆಸಿ ಅರ್ಹತೆಯುಳ್ಳವರಿಗೆ ನೀಡಲಾಗುವುದು ಎಂದು ಹೇಳಿದರು.
ಮಾಸಿಕ 2.40 ಲಕ್ಷ ಟನ್ ಅಕ್ಕಿ ಬೇಕಾಗಿದ್ದು ಅಕ್ಕಿ ಖರೀದಿಗೆ ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು. ಕನಿಷ್ಠ ಬೆಂಬಲ ಬೆಲೆಯಡಿ ಭತ್ತ, ರಾಗಿ ಖರೀದಿ ಮಾಡಿದರೂ ಒಂದು ಕ್ವಿಂಟಾಲ್ ಭತ್ತಕ್ಕೆ 67 ಕೆಜಿ ಅಕ್ಕಿ ಬರುತ್ತದೆ. ರಾಗಿಯನ್ನು ದಾಸ್ತಾನು ಮಾಡುತ್ತೇವೆ. 14 ಜಿಲ್ಲೆಗಳಲ್ಲಿ ತಲಾ ಎರಡು ಕೆಜಿಯಂತೆ ಅಕ್ಕಿ ಪಡೆಯುತ್ತಿದ್ದಾರೆ. ಈ ರೀತಿ 6 ಲಕ್ಷ ಟನ್ ರಾಗಿ ಬೇಕಾಗುತ್ತದೆ. ವಾರ್ಷಿಕ 30 ಟನ್ ಅಕ್ಕಿ ಬೇಕಾಗುತ್ತದೆ. ರೈತರು ಐಆರ್ 64 ತಳಿಯ ಭತ್ತವನ್ನು ಬೆಳೆದರೆ ಪಡಿತಚೀಟಿ ವ್ಯವಸ್ಥೆಯಡಿ ಅಕ್ಕಿ ವಿತರಣೆ ಮಾಡಲು ಖರೀದಿಸಲು ಸಹಕಾರಿಯಾಗುತ್ತದೆ ಎಂದು ಅರಿವು ಮೂಡಿಸಲಾಗುವುದು ಎಂದರು.




