3 ದಿನಗಳ ಕಾಲ ಕಲ್ಯಾಣ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ

3 years ago

#Heavy #rain #forecast #KalyanKarnataka #coastal

ಬೆಂಗಳೂರು: ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇನ್ನು ಮೂರು ದಿನಗಳ ಕಾಲ ಕಲ್ಯಾಣ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಸಾಧಾರಣಾ ಮಳೆಯಾಗುತ್ತಿದ್ದು, ಜುಲೈ ಅಂತ್ಯದವರೆಗೂ ರಾಜ್ಯದಲ್ಲಿ ಮಳೆ ಮುಂದುವರೆಯುವ ಲಕ್ಷಣಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಬೀದರ್, ಕಲ್ಬುರ್ಗಿ, ರಾಯಚೂರು, ಯಾದಗಿರಿ ಭಾಗದಲ್ಲಿ ಜು.27-28ರಂದು ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ. ಮೂರು ದಿನಗಳ ನಂತರ ಮಳೆಯ ಅಬ್ಬರ ತಗ್ಗಿದರೂ ಸಾಧಾರಣ ಪ್ರಮಾಣದ ಮಳೆ ಮುಂದುವರೆಯಲಿದೆ ಎಂದು ತಜ್ಞರು ಹೇಳಿದ್ದಾರೆ.

ಮಹಾರಾಷ್ಟ್ರ ಹಾಗೂ ರಾಜ್ಯದ ಕೊಡುಗು ಸೇರಿದಂತೆ ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದ ಮಳೆಯಾ ಗುತ್ತಿರುವುದರಿಂದ ಕಾವೇರಿ, ತುಂಗಭದ್ರ ನದಿಗಳು ಹಾಗೂ ಅವುಗಳ ಉಪನದಿಗಳು ಮೈದುಂಬಿ ಹರಿಯುತ್ತಿವೆ.

ಬರದ ಛಾಯೆ ಆವರಿಸಿದ್ದ ರಾಜ್ಯ ದಲ್ಲಿ ನಿರಂತರ ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜಲಾಶಯಗಳ ಒಳಹರಿವು ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ.

ಭಾರೀ ಮಳೆಯಿಂದಾಗಿ ಉಡುಪಿ, ಕೊಡಗು, ಉತ್ತರಕನ್ನಡ ಜಿಲ್ಲೆಯ ಶಾಲೆಗಳಿಗೆ ಆಯಾ ಜಿಲ್ಲಾಡಳಿತ ರಜೆ ಘೋಷಿಸಿವೆ. ಜಿಲ್ಲಾಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಹಾಗೂ ತಹಸೀಲ್ದಾರ್ ತಾಲ್ಲೂಕು ಕೇಂದ್ರಗಳಲ್ಲಿದ್ದು ಮಳೆಯಿಂದ ಉಂಟಾಗುವ ಹಾನಿಗೆ ತುರ್ತು ಪರಿಹಾರ ಕೈಗೊಳ್ಳಲು ರಾಜ್ಯ ಸರ್ಕಾರ ಸೂಚಿಸಿದೆ.

ಭಾರೀ ಮಳೆ ಮುನ್ಸೂಚನೆ ಇರುವ ಹಿನ್ನಲೆಯಲ್ಲಿ ದನಕರುರುಗಳ ರಕ್ಷಣೆಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದ್ದು, ಅತಿವೃಷ್ಟಿ, ಪ್ರವಾಹದಿಂದಾಗುವ ವಿಕೋಪ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ದವಾಗಿರುವಂತೆ ಸೂಚಿಸಿದೆ.

Leave a Reply