ಹಾಸನ: ಕಾಂತರಾಜ್ ಆಯೋಗದ ವರದಿ ಬಿಡುಗಡೆ, ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಹಾಗು 2B ಮೀಸಲಾತಿಯ ಗೊಂದಲ ನಿವಾರಣೆ ಮಾಡಿ ಮೀಸಲಾತಿ ಪ್ರಮಾಣವನ್ನು ಶೇ. 8ಕ್ಕೆ ಏರಿಸಲು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಪಡಿಸಲು ಕೋರಿ SDPI ನಿಯೋಗ ಹಾಸನ ಶಾಸಕರನ್ನು ಭೇಟಿ ಭೇಟಿಯಾಗಿ ಮನವಿ ಮಾಡಿತು.
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ನೇತೃತ್ವದ ನಿಯೋಗವು ಹಾಸನ ವಿಧಾನಸಭಾ ಕ್ಷೇತ್ರ ಶಾಸಕ ಹೆಚ್.ಪಿ ಸ್ವರೂಪ್ ಪ್ರಕಾಶ್ ಅವರನ್ನು ಭೇಟಿ ಮಾಡಿತು.

ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ, ನಾಡಿನ ಸಮಸ್ತ ಪ್ರಜೆಗಳಿಗೂ ಸಮಾನ ಅವಕಾಶ, ಹಕ್ಕು, ಅಧಿಕಾರ ಮತ್ತು ಆಸ್ತಿ ಹಂಚಿಕೆಯಾಗಬೇಕು ಎನ್ನುವುದು ಸಂವಿಧಾನದ ಆಶಯವಾಗಿರುತ್ತದೆ. ಅದೇ ನಿಟ್ಟಿನಲ್ಲಿ ಎಲ್ಲರಿಗೂ ಸಮಾನ ಹಕ್ಕು, ಅಧಿಕಾರ ಮತ್ತು ಅವಕಾಶಗಳು ಸಿಗಬೇಕೆನ್ನುವ ಉದ್ದೇಶದಿಂದಲೇ, ರಾಜ್ಯದ ಎಲ್ಲ ಜಾತಿ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿಯನ್ನು ಅಂಕಿ ಅಂಶಗಳ ಸಮೇತವಾಗಿ ತಿಳಿದುಕೊಳ್ಳಲು ರಚನೆಯಾಗಿದ್ದ ಕಾಂತರಾಜ್ ಆಯೋಗವನ್ನು ರಚಿಸಲಾಗಿತ್ತು. ಆಯೋಗವು ವರ್ಷಗಟ್ಟಲೇ ರಾಜ್ಯದಾದ್ಯಂತ ಸಮೀಕ್ಷೆ ನಡೆಸಿ, ಜಾತಿ ಮತ್ತಿತರ ಕಾರಣಗಳಿಗಾಗಿ ತಮ್ಮ ಹಕ್ಕು ಅಧಿಕಾರಗಳಿಂದ ವಂಚಿತರಾಗಿ, ಹಲವು ರೀತಿಯಲ್ಲಿ ಶೋಷಣೆಗೊಳಗಾಗಿರುವ ಜಾತಿ ಸಮುದಾಯಗಳ ವಾಸ್ತವ ಸ್ಥಿತಿಗಳ ಬಗ್ಗೆ ಅಂಕಿ ಅಂಶಗಳ ಸಮೇತವಾಗಿ ವರದಿ ನೀಡಿರುತ್ತದೆ ಎಂದು ಆಯೋಗದ ಮುಖ್ಯಸ್ಥರೇ ಹೇಳಿಕೊಂಡಿದ್ದಾರೆ.
167ಕೋಟಿ ರೂಪಾಯಿ ಖರ್ಚು ಮಾಡಿ ಸಿದ್ಧಪಡಿಸಲಾಗಿರುವ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಲು ಸರ್ಕಾರವು ಸಲ್ಲದ ನೆಪ ಹೇಳಿಕೊಂಡು ಬರಲಾಗುತ್ತಿದೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿ ಅಫ್ಸರ್ ಕೊಡ್ಲಿಪೇಟೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.
ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಫರೀದ್, ಹಾಸನ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಶಜೀಲ್ ಅಹ್ಮದ್, ಮತ್ತು ಹಾಸನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸೈಯದ್ ನದೀಂ ಉಪಸ್ಥಿತರಿದ್ದರು.



