ಶಾಸನಗಳ ವೈಜ್ಞಾನಿಕ ಅಧ್ಯಯನ ಅಗತ್ಯ: ಡಾ.ಮಹೇಶ ಜೋಶಿ

3 years ago

ಬೆಂಗಳೂರು: ರಾಜ್ಯದಲ್ಲಿ ೪೫ ಸಾವಿರಕ್ಕೂ ಹೆಚ್ಚು ಕನ್ನಡದ ಶಾಸನಗಳು ಲಭ್ಯವಾಗಿದೆ. ಇನ್ನೂ ೧೦ ಸಾವಿರಕ್ಕೂ ಹೆಚ್ಚು ಕನ್ನಡ ಶಾಸನಗಳು ದೇಶದ ಇತರ ಭಾಗಗಳಲ್ಲಿ ಲಭ್ಯವಾಗಿದೆ ಇದರ ಅರ್ಥ ಒಂದಾನೊಂದು ಕಾಲದಲ್ಲಿ ನಮ್ಮ ಕನ್ನಡ ನಾಡು ಎಷ್ಟೊಂದು ವಿಸ್ತಾರವಾಗಿ ಬೆಳೆದಿತ್ತು. ಅದರ ಜೊತೆ ದೇಶದ ಮೂಲೆ ಮೂಲೆಗೆ ಕನ್ನಡದ ಅಸ್ಮಿತೆಯನ್ನು ಸಾರುವಲ್ಲಿ ನಮ್ಮ ಪೂರ್ವಿಕರು ಕ್ರಿಯಾಶೀಲರಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅಭಿಪ್ರಾಯಪಟ್ಟರು.

ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ಶಾಸನಗಳ ಕುರಿತ ಸಂಶೋಧನಾ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಶೋಧನಾಸಕ್ತರು, ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಕನ್ನಡ ಶಾಸನಗಳ ಕುರಿತ ಹೆಚ್ಚಿನ ಮಾಹಿತಿಯನ್ನು ಸಾಮಾನ್ಯ ಜನರಿಗೆ ಸಿಗುವಂತೆ ಮಾಡಬೇಕು. ಇನ್ನೂ ಅದೆಷ್ಟೋ ಗುಪ್ತವಾಗಿ ಉಳಿದುಕೊಂಡಿರುವ ಶಾಸನಗಳು ನಮ್ಮಲ್ಲಿ ಇನ್ನೂ ಇವೆ. ಇಲ್ಲಿನ ಶಾಸನಗಳು ಕನ್ನಡ ನಾಡಿನ ಭವ್ಯ ಇತಿಹಾಸವನ್ನು ಸಾರುವುದರ ಜೊತೆಗೆ ಕನ್ನಡದ ಹಿರಿಮೆಯನ್ನು ವೈಜ್ಞಾನಿಕವಾಗಿ ಹಾಗೂ ಅಧಿಕೃತವಾಗಿ ಹೇಳುವ ಸಾಧನಗಳಾಗಿವೆ. ಶಾಸನಗಳಲ್ಲಿ ಕಾಣುವ ಇತಿಹಾಸ ದಾಖಲಾಗದ ಕಾವ್ಯ, ಸಾಹಸ, ಧಾರ್ಮಿಕ ಆಚರಣೆಗಳು, ದತ್ತಿ ದಾನಗಳು ಸೇರಿದಂತೆ ತಮ್ಮ ಪ್ರೀತಿಯ ಸಾಕು ಪ್ರಾಣಿಗಳ ಸಾಧನೆಗಳನ್ನು ಸಹ ಶಾಸನಗಳಲ್ಲಿ ದಾಖಲು ಮಾಡಿರುವುದು ಕಂಡು ಬರುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನಶಾಸ್ತ್ರ/ ಪದವಿಯಲ್ಲಿ ಕನ್ನಡ ಐಚ್ಛಿಕ ವಿಷಯವನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲವಾಗುವಂತೆ ಸಂಶೋಧನಾ ಕಮ್ಮಟವನ್ನು ಏರ್ಪಡಿಸಲು ಖ್ಯಾತ ಸಂಶೋಧಕರು ಹಾಗೂ ಹಿರಿಯ ಸಾಹಿತಿಗಳಾದ ನಾಡೋಜ ಡಾ. ಹಂಪ ನಾಗರಾಜಯ್ಯ ಅವರೇ ಸ್ಥಾಪಿಸಿದ್ದ ದತ್ತಿ ಕಾರ್ಯಕ್ರಮದ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಮತ್ತು ಶಾಸನಗಳ ಸಂಬಂಧ ಹಿರಿದಾದ ನೆಲೆಯಲ್ಲಿ ಇರುವಂತಹದ್ದು. ಶಾಸನಗಳ ಆಧಾರದ ಮೇಲೆಯೇ ಅನೇಕ ಗ್ರಂಥಗಳು ಹುಟ್ಟಿಕೊಂಡಿದ್ದು. ನಾಡಿನ ಹೆಮ್ಮೆಯ ಆದಿಕವಿಗಳಾದ ಪಂಪ ಹಾಗೂ ರನ್ನರು ಸಹ ಆರಂಭಿಕ ಹಂತದಲ್ಲಿ ಶಾಸನ ಲಿಪಿಕಾರರೇ ಆಗಿದ್ದರು. ವಿವಿಧ ಪ್ರಕಾರಗಳಲ್ಲಿ ಶಾಸನಗಳೆಲ್ಲವೂ ಶಾಶ್ವತ ಇತಿಹಾಸವನ್ನು ಸಾರುವ ಸಾಧನಗಳಾಗಿವೆ. ನಾಡಿನಲ್ಲಿ ವಿಫುಲವಾದ ಶಾಸನಗಳು ಕಂಡು ಬಂದರೂ ಕನ್ನಡ ಶಾಸನಗಳು ಆರಂಭವಾಗಿದ್ದು ಕದಂಬರ ಕಾಲದಲ್ಲಿ. ಅಂದಿನಿಂದ ಶಾಸನ ಮತ್ತು ಕಾವ್ಯದ ಸಂಬಂಧ ಮಧುರವಾಗಿ ಸಾಗಿ ಬಂದಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಂಶೋಧನಾ ವಿಭಾಗದ ಸಂಚಾಲಕರಾದ ಇತಿಹಾಸ ತಜ್ಞ ಡಾ. ತಲಕಾಡು ಚಿಕ್ಕರಂಗೆಗೌಡರು ಮಾತನಾಡಿ ಕನ್ನಡ ಭಾಷೆಗೆ ಬಂದಿರುವ ಶಾಸ್ತ್ರೀಯ ಭಾಷೆಯ ಸ್ಥಾನ ಮಾನಕ್ಕೆ ಮಾನ್ಯತೆ ಸಿಗಬೇಕು ಎಂದರೆ ಶಾಸನಗಳ ಅಧ್ಯಯನವೂ ಆಗಬೇಕಿದೆ. ಇತಿಹಾಸದ ಗರ್ಭದಲ್ಲಿ ಹುದುಗಿಕೊಂಡ ಅನೇಕ ಸತ್ಯಗಳ ಅನಾವಣ ಆಗಬೇಕಿದೆ. ಅದಕ್ಕೆ ಶಾಸನಗಳ ಹುಡುಕಾಟ, ಅವುಗಳ ಅಧ್ಯಯನ ಹಾಗೂ ಸರಿಯಾದ ರೀತಿಯಲ್ಲಿ ಅರ್ಥಪಡಿಸುವಿಕೆಯೊಂದಿಗೆ ಕನ್ನಡ ನಾಡಿನ ಶ್ರೀಮಂತ ಇತಿಹಾಸವನ್ನು ದಾಖಲಾಗಬೇಕಿದೆ, ಈ ಕೆಲಸವನ್ನು ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು ಕೈಗೆತ್ತಿಕೊಂಡಿದೆ ಎಂದು ಹೇಳಿದರು.

ಉಪನ್ಯಾಸಕರಾಗಿ ಭಾಗವಹಿಸಿದ ಹಿರಿಯ ಸಂಶೋಧಕ ಡಾ. ದೇವರಕೊಂಡಾರೆಡ್ಡಿ ತಮ್ಮ ಉಪನ್ಯಾಸದಲ್ಲಿ ಶಾಸನ ಶಾಸ್ತ್ರವನ್ನು ಕಳೆದ ೪೮ ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ೧೭೯೧ರಲ್ಲಿ ಶಾಸನಗಳ ಕುರಿತು ಅಧ್ಯಯನ ಆರಂಭವಾಗಿತ್ತು. ಮೊದಲಿಗೆ ಭಾರತಕ್ಕೆ ಬಂದ ಇಂಗ್ಲಿಷ್ ಅಧಿಕಾರಿಗಳು ಶಾಸನಗಳ ಅಧ್ಯಯನಮಾಡುವುದಕ್ಕೆ ಮುಂದಾಗಿದ್ದರು. ನಂತರದ ದಿನಗಳಲ್ಲಿ ನಮ್ಮವರು ಸಾಕಷ್ಟು ಶಾಸನಗಳ ಮೇಲೆ ಬೆಳಕು ಚಲ್ಲಿದ್ದಾರೆ. ಇನ್ನೂ ಭೂಗತವಾಗಿರುವ ಅದೆಷ್ಟೋ ಶಾಸನಗಳು ಬೆಳಕಿಗೆ ಬರಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಉಪನ್ಯಾಸಕರಾಗಿ ಭಾಗವಹಿಸಿದ ಹಿರಿಯ ಸಂಶೋಧಕ ಕೆ. ಧನಪಾಲ್ ಮಾತನಾಡಿ, ಇತಿಹಾಸವನ್ನು ಕರಾರುವಕ್ಕಾಗಿ ಹೇಳಬೇಕು ಎನ್ನುವುದಾದರೆ ಶಾಸನಗಳ ಅಧ್ಯಯನ ಬೇಕಾಗುತ್ತದೆ. ಶಾಸನಗಳು ಸಾಕಷ್ಟು ಸಂಗತಿಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಇದರ ಅಧ್ಯಯನಕ್ಕೆ ಆಸಕ್ತಿ ಎನ್ನುವುದು ಮೂಲ ಬಂಡವಾಳವಾಗಿದೆ. ಯಾವುದೇ ಕೆಲಸದಲ್ಲಿ ಇದ್ದವರೂ ಎಷ್ಟೇ ಒತ್ತಡ ಇದ್ದರೂ ಇತಿಹಾಸ ತಿಳಿಯುವ ಕುತೂಹಲ ಇದ್ದರೆ ಅಂತವರು ಇತಿಹಾಸ ತಜ್ಞರಾಗುವುದು ಸಾಧ್ಯ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೆ.ಭ ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್. ಪಟೇಲ್ ಪಾಂಡು ಕಾರ್ಯಕ್ರಮ ನಿರೂಪಣೆ ಮಾಡಿದರು. ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ವಂದಿಸಿದರು.

Leave a Reply