ಮಂಡ್ಯದಲ್ಲಿ ಜೆಡಿಎಸ್ ಗೆ ಕೈಕೊಡಲಿದೆಯಾ ಬಿಜೆಪಿ?

2 years ago

ಮಂಡ್ಯ ಈಗ ಕೇವಲ ಒಂದು ಲೋಕಸಭಾ ಕ್ಷೇತ್ರವಾಗಿ ಮಾತ್ರ ಉಳಿದಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯ ಭವಿಷ್ಯವೇ ಆ ಕ್ಷೇತ್ರವನ್ನು ಅವಲಂಬಿಸಿದೆ. ಇಲ್ಲಿನ ಟಿಕೆಟ್ ಗಾಗಿ ಎರಡೂ ಪಕ್ಷಗಳು ತೋಳೇರಿಸಿ ಪೈಪೋಟಿಗಿಳಿದಿರುವುದರ ಹಿಂದೆ ಅವುಗಳದ್ದೇ ಲೆಕ್ಕಾಚಾರವಿದೆ. ಇಲ್ಲಿ ಅಕಸ್ಮಾತ್ ಜೆಡಿಎಸ್ ಗೆ ಟಿಕೆಟ್ ತಪ್ಪಿದರೆ, ಮಾತು ತಪ್ಪುವ ಜಾಯಮಾನದ ಆ ಪಕ್ಷದ ನಾಯಕರು ಮೈತ್ರಿಯಲ್ಲಿ ಬಿಜೆಪಿಗೆ ಸಂಪೂರ್ಣ ಸಹಕಾರ ನೀಡಲಾರರು. ಅಥವಾ ಮೈತ್ರಿಯನ್ನೇ ತುಂಡರಿಸಿಕೊಂಡು ಬಂದರೂ ಅಚ್ಚರಿಯಿಲ್ಲ. ಇನ್ನು ಬಿಜೆಪಿಯೇ ಟಿಕೆಟ್ ತಪ್ಪಿಸಿಕೊಂಡಿತೆಂದರೆ, ಅದು ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡದ್ದೇ ನಿರರ್ಥಕವಾಗಲಿದೆ; ಹಾಗಾಗಲು ಅದು ಬಿಡುವುದಿಲ್ಲ. ಒಟ್ಟಿನಲ್ಲಿ ಮೈತ್ರಿಗಳ ಪಾಲಿಗೆ ಮಂಡ್ಯವೆನ್ನುವುದು ಅತ್ತ ದರಿ, ಇತ್ತ ಪುಲಿ ಎನ್ನುವಂತಾಗಿದೆ. ಆದರೆ ಬಿಜೆಪಿಯ ರಾಜಕಾರಣದ ಹಿಸ್ಟರಿ ಗೆರೆಗಳನ್ನು ಪರಿಗಣನೆಗೆ ತೆಗೆದುಕೊಂಡಾಗ, ಇಲ್ಲಿ ಅದು ಜೆಡಿಎಸ್ ಗೆ ಕೈಕೊಟ್ಟು ತಾನೇ ಟಿಕೆಟ್ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಬಿಜೆಪಿಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯವಿರಲಿಲ್ಲ. ಹಾಗೆ ನೋಡಿದರೆ, ರಾಜ್ಯ ಬಿಜೆಪಿ ನಾಯಕರ ಸಂಪೂರ್ಣ ವಿರೋಧವಿತ್ತು. ಅದನ್ನೆಲ್ಲ ಲೆಕ್ಕಿಸದೆ ಅದು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡದ್ದೇ ಒಕ್ಕಲಿಗ ವೋಟ್ ಬ್ಯಾಂಕ್ ಅನ್ನು ತನ್ನದಾಗಿಸಿಕೊಳ್ಳಬೇಕು ಅಂತ. ಈಗ ಒಕ್ಕಲಿಗ ಮತಗಳು ನಿರ್ಣಾಯಕ ಎನ್ನಬಹುದಾದ ಜಿಲ್ಲೆಗಳ ಪೈಕಿ ಮೈಸೂರು, ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ಪ್ರಮುಖವಾಗಿ ಕಂಡುಬರುತ್ತವೆ. ಈ ಪೈಕಿ ಮೈಸೂರು, ತುಮಕೂರಿನಲ್ಲಿ ಅದಾಗಲೇ ಬಿಜೆಪಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಸಂಸದರನ್ನೂ ಗೆಲ್ಲಿಸಿಕೊಂಡಿದೆ. ಅಲ್ಲಿ ತಳವೂರಲು ಜೆಡಿಎಸ್ ನ ಅನಿವಾರ್ಯತೆ ಇಲ್ಲ. ಇನ್ನು ಹಾಸನ ದೇವೇಗೌಡರ ತವರು ಜಿಲ್ಲೆ. ಮೊದಲ ಗುಕ್ಕಿನಲ್ಲೇ ಕೊನೇ ತುತ್ತು ನುಂಗುವುದು ಅಪಾಯವೆನ್ನುವುದು ಬಿಜೆಪಿಗೆ ಗೊತ್ತು. ಹಾಗಾಗಿ ಹಾಸನದ ಮೇಲೂ ಅದಕ್ಕೆ ಈ ಎಲೆಕ್ಷನ್ ನಲ್ಲಿ ಅಷ್ಟಾಗಿ ಆಸಕ್ತಿಯಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಬ್ರದರ್‍ಸ್ ಹಿಡಿತ ಬಲವಾಗಿದೆ. ಟಿಕೆಟ್ ದಕ್ಕಿಸಿಕೊಂಡರೂ ಅಲ್ಲಿ ಗೆಲ್ಲುವ ಸಾಧ್ಯತೆ ಕಮ್ಮಿ. ಹೆಚ್ಚೆಂದರೆ ಜೆಡಿಎಸ್ ಮೈತ್ರಿಯ ನೆಪದಲ್ಲಿ ಸದ್ಯಕ್ಕೆ ಅಲ್ಲೊಂದಷ್ಟು ಪ್ರಭಾವ ಹಿಗ್ಗಿಸಿಕೊಳ್ಳಬಹುದಷ್ಟೆ.

ಇನ್ನುಳಿದದ್ದು ಮಂಡ್ಯ. ಅದನ್ನೂ ಜೆಡಿಎಸ್ ಗೆ ಬಿಟ್ಟುಕೊಟ್ಟರೆ, ಯಾವ ಒಕ್ಕಲಿಗ ಪ್ರಾಂತ್ಯದಲ್ಲಿ ತನ್ನ ವಿಸ್ತಾರ ಹೆಚ್ಚಿಸಿಕೊಳ್ಳಬೇಕೆಂದು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆಯೋ ಅದೇ ಶೂನ್ಯವಾದಂತಾಗುತ್ತೆ. ಮಂಡ್ಯದಲ್ಲಿ ತನ್ನ ಬೆಂಬಲಿತ ಸಂಸದೆ ಗೆದ್ದಿರುವುದು ನಿಜವಾದರೂ, ನೇರವಾಗಿ ಅದು ಬಿಜೆಪಿಯ ಗೆಲುವಾಗಿರಲಿಲ್ಲ. ಈ ಸಲ ಸುಮಲತಾರನ್ನು ನೇರವಾಗಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಮಂಡ್ಯವನ್ನು ಗೆದ್ದುಕೊಂಡರೆ, ಮೈತ್ರಿ ಮಾಡಿಕೊಂಡಿದ್ದಕ್ಕೂ ಸಾರ್ಥಕತೆ ಸಿಗಲಿದೆ. ಒಕ್ಕಲಿಗ ರಾಜಕಾರಣದ ಕೇಂದ್ರಬಿಂದು ಎಂದು ಪರಿಗಣಿತವಾದ ಮಂಡ್ಯವನ್ನು ಹೊಸ ಕ್ಷೇತ್ರವಾಗಿ ತನ್ನ ಬತ್ತಳಿಕೆಗೆ ಬಿಜೆಪಿ ಸೇರ್ಪಡೆ ಮಾಡಿಕೊಂಡಂತಾಗುತ್ತೆ. ಅದಾಗದೆ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ, ಇತ್ತ ಮಂಡ್ಯವನ್ನೂ ಕಳೆದುಕೊಂಡು, ಅತ್ತ ತಾನು ಈಗಾಗಲೇ ಗೆದ್ದಿರುವ ಕ್ಷೇತ್ರಗಳಲ್ಲಿ ಕೆಲವನ್ನು ಜೆಡಿಎಸ್ ಗೂ ದಾನ ಮಾಡಿ ಬಿಜೆಪಿ ಸಾಧಿಸಿದ್ದೇನು? ಈ ಪ್ರಶ್ನೆ ಬಿಜೆಪಿಯನ್ನು ಕಾಡದೆ ಇರದು. ಹಾಗಾಗಿ ದಿಲ್ಲಿ ನಾಯಕರು ಪ್ರೀತಂ ಗೌಡ, ನಾರಾಯಣ ಗೌಡ ಮೊದಲಾದವರಿಂದ ಗೊಂದಲ ಸೃಷ್ಟಿಸಿ, ಸುಮಲತಾರಿಗೆ ಒಳಗಿಂದೊಳಗೆ ಕುಮ್ಮಕ್ಕು ಕೊಟ್ಟು ಮಂಡ್ಯ ಟಿಕೆಟ್ ಗೆ ಜೆಡಿಎಸ್ ಪಕ್ಷಕ್ಕೆ ಪ್ರತಿರೋಧ ಭುಗಿಲೇಳಿಸುತ್ತಿದ್ದಾರೆ. ಬಿಜೆಪಿ ನಾಯಕರ ಅಭಯವಿಲ್ಲದೇ ಹೋಗಿದ್ದರೆ, ಪಕ್ಷೇತರೆಯಾಗಿಯೂ ಟಿಕೆಟ್ ಬಗ್ಗೆ ಸುಮಲತಾ ಅಷ್ಟು ಕಾನ್ಫಿಡೆಂಟಾಗಿ ಮಾತನಾಡಲು ಸಾಧ್ಯವಿರುತ್ತಿರಲಿಲ್ಲ.

ಇನ್ನು ಜೆಡಿಎಸ್ ದೃಷ್ಟಿಯಿಂದ ನೋಡುವುದಾದರೆ, ವಿಧಾನಸಭಾ ಎಲೆಕ್ಷನ್ನಿನಲ್ಲಿ ಹೀನಾಯವಾಗಿ ಸೋತು ಅಸ್ತಿತ್ವದ ಪ್ರಶ್ನೆಗೆ ಈಡಾಗಿದ್ದ ಜೆಡಿಎಸ್ ಗೆ ಬಿಜೆಪಿ ಜೊತೆ ಮೈತ್ರಿ ಅನಿವಾರ್ಯವೇನೊ ಇತ್ತು, ಆದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪ್ರಾದೇಶಿಕ ಪಕ್ಷಗಳು ನಿರ್ನಾಮವಾದ ಚರಿತ್ರೆಯ ಬಗ್ಗೆ ಭಯವೂ ಇತ್ತು. ದೇವೇಗೌಡರಂತಹ ನುರಿತ ರಾಜಕಾರಣಿಗೆ ಇದನ್ನೆಲ್ಲ ಹೇಳಿಕೊಡಬೇಕಿಲ್ಲ. ಆದರೆ ಇಂತಹ ಅಪಾಯವನ್ನು ಕೌಂಟರ್ ಮಾಡುವುದಕ್ಕೆ ಜೆಡಿಎಸ್ ಬಳಿ ತನ್ನದೇ ಆದ ಒಂದು ತಂತ್ರವೂ ಸಿದ್ಧವಾಗಿತ್ತು. ಬಿಜೆಪಿಯಂತಹ ದೈತ್ಯ ಪಕ್ಷವನ್ನು ತಡೆಯಲು ಅದು ಎಷ್ಟರಮಟ್ಟಿಗೆ ಪರಿಣಾಮಕಾರಿಯೋ ಗೊತ್ತಿಲ್ಲ, ಆದರೆ ಅದನ್ನು ಬಳಸುವುದಕ್ಕೆ ಅಣಿಯಾಗಿಯೇ ಜೆಡಿಎಸ್ ಈ ಮೈತ್ರಿ ಮಾಡಿಕೊಂಡಿದೆ. ಜಾತ್ಯತೀತ ಎಂಬ ಹೆಸರಿದ್ದರೂ ತನ್ನದು ಜಾತಿ ರಾಜಕಾರಣ ಅನ್ನೋದು ಜೆಡಿಎಸ್ ಗೆ ಗೊತ್ತು.

ಒಕ್ಕಲಿಗ ಪ್ರಾಬಲ್ಯವಿರುವ ಹೊಸ ಕ್ಷೇತ್ರಗಳಿಗೆ ಬಿಜೆಪಿ ವ್ಯಾಪಿಸದಂತೆ ತಡೆದರೆ, ಮೈತ್ರಿಯ ಹೊರತಾಗಿಯೂ ನಮ್ಮ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಬಹುದೆನ್ನುವ ತಂತ್ರ ಜೆಡಿಎಸ್ ನದ್ದು. ಹಾಗಾಗಿಯೇ ಅದು ಯಾವ ಕಾರಣಕ್ಕೂ, ಒಕ್ಕಲಿಗ ರಾಜಕಾರಣದ ಕೇಂದ್ರಬಿಂದುವಾದ ಮಂಡ್ಯವನ್ನು ಬಿಜೆಪಿಗೆ ಬಿಟ್ಟುಕೊಡಬಾರದು ಎಂಬ ನಿರ್ಧಾರಕ್ಕೆ ಬಂದಿದೆ. ಅಕಸ್ಮಾತ್ ಅಲ್ಲಿ ಬೇರೂರಲು ಬಿಜೆಪಿಗೆ ಅವಕಾಶ ಮಾಡಿಕೊಟ್ಟರೆ, ಮುಂದಿನ ದಿನಗಳಲ್ಲಿ ಬಿಜೆಪಿ ತನ್ನನ್ನು ಸುಲಭವಾಗಿ ಆಪೋಷನ ತೆಗೆದುಕೊಳ್ಳಲಿದೆ ಅನ್ನೋದು ಜೆಡಿಎಸ್ ಲೆಕ್ಕಾಚಾರ. ಕುಮಾರಸ್ವಾಮಿ ಮಂಡ್ಯಕ್ಕೆ ಪಟ್ಟು ಹಿಡಿದಿರುವುದು ಇದೇ ಕಾರಣಕ್ಕೆ. ಆದರೆ ಇದೊಂಥರಾ ಆತ್ಮಹತ್ಯೆ ಮಾಡಿಕೊಳ್ಳಲು ಉರುಳಿಗೆ ಕುತ್ತಿಗೆ ಕೊಟ್ಟು ಕೆಳಕ್ಕೆ ಜಿಗಿದವ, ಪ್ರಾಣ ಉಳಿಸಿಕೊಳ್ಳುವ ಧಾವಂತದಲ್ಲಿ ಕುತ್ತಿಗೆಗೆ ಬಿಗಿದ ಹಗ್ಗವನ್ನೇ ಆಸರೆಗೆ ಹಿಡಿದುಕೊಳ್ಳುವ ವ್ಯರ್ಥಜಾಣ್ಮೆ ತೋರಿದಂತೆ!

ಅದೇನೆ ಇರಲಿ, ಜಾತಿ ಕೋಟೆಯಿಂದ ಬಿಜೆಪಿಯನ್ನು ಹೊರಗಿಡಲು ಅದೇನಾದರೂ ವಿಫಲವಾದರೆ, ಮೈತ್ರಿಯ ಬಗ್ಗೆ ಜೆಡಿಎಸ್ ನಾಯಕರು ಎಳ್ಳಷ್ಟೂ ವಿಶ್ವಾಸ ಉಳಿಸಿಕೊಳ್ಳಲಾರರು ಎಂಬುದಂತೂ ಸತ್ಯ. ದೋಸ್ತಿಗಳ ಬಲಾಬಲ ನೋಡಿದರೆ, ಕಮ್ಯಾಂಡಿಂಗ್ ಸ್ಥಾನದಲ್ಲಿ ಇರೋದು ಬಿಜೆಪಿಯೇ ಆಗಿರೋದ್ರಿಂದ ಅದು ತನ್ನ ಬಳಿಯೇ ಮಂಡ್ಯದ ಟಿಕೆಟ್ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು.

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply