ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ

3 years ago

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ರಾಜ್ಯದೆಲ್ಲೆಡೆ ಅಭ್ಯರ್ಥಿಗಳು ಅಬ್ಬರದ‌ ಪ್ರಚಾರ, ರೋಡ್ ಶೋ ಮೂಲಕ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ಯಮಕನಮರಡಿ ಮತಕ್ಷೇತ್ರದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಂದು ಹುಕ್ಕೇರಿಯ ತಹಶಿಲ್ದಾರರ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ರಾಹುಕಾಲದಲ್ಲಿ ಸರಳವಾಗಿ ನಾಮಪತ್ರವನ್ನು ಸಲ್ಲಿಸಿದರು. ರಾಜ್ಯದ ಬಹುತೇಕ ಅಭ್ಯರ್ಥಿಗಳು ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ, ತಿಥಿ, ನಕ್ಷತ್ರ ಇತ್ಯಾದಿಗಳನ್ನು ನೋಡಿ ನಾಮಪತ್ರ ಸಲ್ಲಿಸುವುದು ವಾಡಿಕೆ. ಆದರೆ ಇದೆಲ್ಲದಕ್ಕೂ ತೀಲಾಂಜಲಿ ಇಟ್ಟಿರುವ ಸತೀಶ್ ಜಾರಕಿಹೊಳಿಯವರು ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ಹಾಗೂ ರಾಹುಕಾಲ ಇವುಗಳ ನಡುವೆ ರೋಡ್ ಶೋ ಮತ್ತು ಬಹಿರಂಗ ಸಭೆ ಇವುಗಳನ್ನು ಕೂಡ ಕೈ ಬಿಟ್ಟು ಕೇವಲ ತಮ್ಮ ಐದು ಜನ ಬೆಂಬಲಿಗರೊಂದಿಗೆ ನಾಮಪತ್ರವನ್ನು ಸಲ್ಲಿಸಿದರು.

ನಾಳೆ ಬೆಳಿಗ್ಗೆಯಿಂದ ಅಭ್ಯರ್ಥಿಗಳು ಅಥವಾ ಅವರ ಏಜೆಂಟ್ ಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಯಲಿದ್ದು, ಮಧ್ಯಾಹ್ನ ಮೂರು ಗಂಟೆಯ ನಂತರ ಚುನಾವಣಾಧಿಕಾರಿಗಳು ಸಿಂಧುವಾದ ನಾಮಪತ್ರಗಳು ಹಾಗೂ ತಿರಸ್ಕೃತಗೊಂಡ ನಾಮಪತ್ರಗಳ ವಿವರವನ್ನು ಪ್ರಕಟಿಸಲಿದ್ದಾರೆ.

ಬಹಳಷ್ಟು ಅಭ್ಯರ್ಥಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಒಂದಕ್ಕಿಂತ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಾಮ ಪತ್ರ ವಾಪಸ್ ಪಡೆಯಲು ಏ.24ರ ಮಧ್ಯಾಹ್ನ ಮೂರು ಗಂಟೆಯವರೆಗೂ ಕಾಲಾವಕಾಶವಿರಲಿದೆ. ಆ ನಂತರ ಚುನಾವಣಾ ಕಣದಲ್ಲಿ ಅಂತಿಮವಾಗಿ ಉಳಿಯುವ ಅಭ್ಯರ್ಥಿಗಳ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಟಿಕೆಟ್ ಸಿಗದ ಆಕಾಂಕ್ಷಿಗಳು ಮಾತೃ ಪಕ್ಷ ತೊರೆದು ಅನ್ಯ ಪಕ್ಷ ಸೇರುವ ಮೂಲಕ ಸ್ಪರ್ಧೆಗಿಳಿದಿದ್ದಾರೆ. ಇನ್ನೂ ಕೆಲವರು ಸ್ವತಂತ್ರವಾಗಿ ಸ್ಪರ್ಧಿಸುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ. ಬಂಡಾಯಗಾರರ ಮನವೊಲಿಸುವ ಪ್ರಕ್ರಿಯೆ ರಾಜಕೀಯ ಪಕ್ಷಗಳ ನಾಯಕರು, ಮುಖಂಡರಿಂದ ನಡೆಯಲಿದೆ.

Leave a Reply