ಬೆಳಗಾವಿ: ಸೇವಾದಳವನ್ನು ನಾಡಿನಾದ್ಯಂತ ಕಟ್ಟಿ ಹರ್ಡೀಕರ್ ಮತ್ತು ಗಾಂಧೀಜಿಯವರ ತತ್ವಾದರ್ಶಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಪ್ರಿಯಾಂಕ ಜಾರಕಿಹೊಳಿ ಹೇಳಿದರು.
ಘಟಪ್ರಭಾದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸೇವಾದಳದ ಪ್ರಪ್ರಥಮ ಮಹಿಳಾ ಸಮರ್ಥ್ 5 ದಿನದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಅವರು, ಸೇವಾದಳ ಕೇಂದ್ರದಲ್ಲಿ ಹೆಚ್ಚುಹೆಚ್ಚು ಕಾರ್ಯಕರ್ತರಿಗೆ ತರಬೇತಿ ನೀಡುವುದರ ಮೂಲಕ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹಗಳನ್ನು ಸಾಮಾಜಿಕ ಆಚರಣೆಯಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದು, ಎಲ್ಲರೀತಿಯ ಸಹಕಾರವನ್ನು ನೀಡುತ್ತೇವೆ ಎಂದರು.
26/08/2021ರಂದು ಸೇವಾದಳ ಸ್ಥಾಪಕ ಡಾ.ಎನ್.ಎಸ್.ಹರ್ಡೀಕರ್ 41ನೇ ಪುಣ್ಯ ತಿಥಿಯಂದು ಆರಂಭವಾದ ಶಿಬಿರದಲ್ಲಿ 8 ಜಿಲ್ಲೆಗಳಿಂದ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಶಿಬಿರದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಮಹಿಳಾ ಸೇವಾದಳದ ಅಧ್ಯಕ್ಷೆ ಕಲ್ಪನಾ ಜೋಷಿ ಶಿಬಿರದ ಕಮ್ಯಾಂಡರ್ ಆಗಿ ಕಾರ್ಯ ನಿರ್ವಹಿಸಿದರು. ಐದು ದಿನಗಳ ಶಿಬಿರದಲ್ಲಿ ಅಶ್ರಫ್, ಡಾ. ವಿಶ್ವನಾಥ್ ಚಿಂತಾಮಣಿ, ಕಿರಣ್ ಮೊರಾಸ್, ಮಹಾಲಿಂಗಪ್ಪ ಆಲಬಾಳ, ಡಾ.ಪ್ರದೀಪ್ ಮಾಲ್ಗುಡಿ, ಸುರೇಶ್ ಶಿಕಾರಿಪುರ ತರಗತಿಗಳನ್ನು ನಡೆಸಿಕೊಟ್ಟರು. ಶಿಬಿರದಲ್ಲಿ ಆಂಜನಪ್ಪ ಲೋಕಿಕೆರೆಯವರು ಗೀತೆಗಳ ಅಭ್ಯಾಸ ಮಾಡಿಸಿದರು. ಜೊತೆಗೆ, ಸೇವಾದಳಕ್ಕಾಗಿ ಹೊಸದಾಗಿ ಹಾಡನ್ನು ರಚಿಸಿ ಸಂಯೋಜಿಸಿದರು.
ಸಮಾರೋಪ ಸಮಾರಂಭದಲ್ಲಿ ಡಾ. ಸ್ವಾತಿ ಘನಶ್ಯಾಮ್ ವೈದ್ಯ, ಪ್ರಿಯಾಂಕ ಜಾರಕಿಹೊಳಿ, ಕಲ್ಪನಾ ಜೋಷಿ, ಬಲರಾಂ ಸಿಂಗ್ ಬಡೋರಿಯಾ, ಕಿರಣ್ ಮೊರಾಸ್, ಡಿ.ಎನ್.ಶಿಂಧೆ, ಹನುಮಂತ್ ಪೋರಡ್ಡಿ, ಸುಜಾತಾ ಉಲ್ಲಾಳ್, ಅಶ್ರಫ್ ಮೊದಲಾದವರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಸೇವಾದಳದ ಪ್ರಪ್ರಥಮ ಮಹಿಳಾ ಸಮರ್ಥ್ 5 ದಿನದ ಶಿಬಿರದ ಯಶಸ್ಸಿಗೆ ಕಾರಣಕರ್ತರಾದ ಸಂಪನ್ಮೂಲ ವ್ಯಕ್ತಿಗಳು ಮತ್ತು ಅತಿಥಿಗಳಿಗೆ ಗೌರವಿಸಲಾಯಿತು.




