ಆರ್.ಎಸ್.ಎಸ್.ನವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಗೊತ್ತಿಲ್ಲ: ಸಿದ್ದರಾಮಯ್ಯ

2 years ago

ಬೆಂಗಳೂರು: ವಿಪಕ್ಷ ಬಿಜೆಪಿ ಸದಸ್ಯರ ಧರಣಿ ಹಾಗೂ ಸಭಾತ್ಯಾಗದ ನಡುವೆ ರಾಜ್ಯ ವಿಧಾನಸಭೆಯಲ್ಲಿ 3 ಲಕ್ಷ 71,383 ಕೋಟಿ ರೂ. ಗಾತ್ರದ ಬಜೆಟ್ ಗೆ ಧ್ವನಿ ಮತದ ಮೂಲಕ ಅನುಮೋದನೆ ನೀಡಲಾಗಿದೆ.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ ಎಂಬ ಆರೋಪ ಸುಳ್ಳು. ಗ್ಯಾರಂಟಿ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳು ಜಾರಿಗೊಳಿಸದ ಪರಿಣಾಮ ಇಷ್ಟೊಂದು ದೊಡ್ಡ ಪ್ರಮಾಣದ ಬಜೆಟ್ ಮಂಡಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು, ಆರ್.ಎಸ್.ಎಸ್.ನವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದಾಗಲೂ ಸಂಘ ಪರಿವಾರದ ಹೆಡಗೇವಾರ್ ಆಗಲಿ, ಗೋಲ್ವಾಲ್ಕರ್ ಆಗಲಿ ಅದರಲ್ಲಿ ಪಾಲ್ಗೊಂಡಿಲ್ಲ. ಇವರ ತತ್ವದಲ್ಲಿ ನಂಬಿಕೆಯಿರುವ ಬಿಜೆಪಿಯಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿ. ಸಬ್ ಕಾ ‘ಸಾಥ್ ಸಬ್ ಕಾ ವಿಕಾಸ್’ ಎನ್ನುವುದು ಕೇವಲ ಬಾಯಿ ಮಾತು. ಇಂಥವರು ದೇಶವನ್ನು ಆಳಲು ಲಾಯಕ್ಕೇ ಎಂದು ಪ್ರಶ್ನಿಸಿದರು.

ಜನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ವಿರೋಧ ಪಕ್ಷಕ್ಕೆ ಅಧಿಕಾರ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಕಾಂಗ್ರೆಸ್ ಪರವಾಗಿದ್ದುದ್ದನ್ನು ಮರೆ ಮಾಚಲು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚರ್ಚೆಯಲ್ಲಿ 30% ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ. ಜೆಡಿಎಸ್ ಕೂಡ ಪೈಪೋಟಿಗೆ ಬಿದ್ದಂತೆ ಅದನ್ನೇ ಮಾಡಿದೆ. ಜೆಡಿಎಸ್ ತಮ್ಮ ಪಕ್ಷದ ಹೆಸರಿನಲ್ಲಿರುವ “ಎಸ್” ನ್ನು ತೆಗೆದುಹಾಕುವುದು ಉತ್ತಮ. ಏಕೆಂದರೆ ಅದು ಈಗ ಜಾತ್ಯತೀತ ವಾಗಿ ಉಳಿದಿಲ್ಲ ಎಂದರು.

ಅನುದಾನ ಬಿಡುಗಡೆಯಲ್ಲಿ ಏಳುಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ವಾರ್ಷಿಕ 1.40 ಸಾವಿರ ಕೋಟಿ ನಮ್ಮಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ಹೋಗುತ್ತದೆ. 100 ರೂ.ತೆರಿಗೆ ಕೊಟ್ಟರೆ ನಮಗೆ 12 ರೂ.ಗಳು ಮಾತ್ರ ಕೇಂದ್ರದಿಂದ ತೆರಿಗೆ ಬರುತ್ತಿದೆ. ಇದನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಗೆ ನಾಚಿಕೆಯಾಗಬೇಕು ಎಂದರು.

14ನೇ ಹಣಕಾಸು ಆಯೋಗದಲ್ಲಿ 4.7 % ಹಾಗೂ 15ನೇ ಹಣಕಾಸು ಆಯೋಗದಲ್ಲಿ 3.64 % ರಾಜ್ಯಕ್ಕೆ ನಿಗದಿಯಾಗಿ ಶೇ 1.07% ರಷ್ಟು ಕಡಿಮೆಯಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ 2 ನೇ ರಾಜ್ಯವಾಗಿರುವ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯವಾಗಿದೆ. ಕೇಂದ್ರದ ಅನ್ಯಾಯವನ್ನು ಬೆಂಬಲಿಸುವ ಬಿಜೆಪಿಗೆ ಕನ್ನಡಿಗರ ಬಗ್ಗೆ ಕಾಳಜಿ ಇದೆಯೇ ಎಂದರು.

ನರೇಂದ್ರ ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾಗ ಗುಜರಾತಿನಿಂದ ತೆರಿಗೆ ಸಂಗ್ರಹಿಸಬೇಡಿ ಎಂದಿದ್ದರು. ನಾವು ಆ ಮಾತು ಹೇಳಿಲ್ಲ ಎನ್ನುತ್ತಿದ್ದಂತೆ ಬಿಜೆಪಿ ಸದಸ್ಯರು ಮೋದಿ ಮೋದಿ, ಜೈ ಶ್ರೀ ರಾಮ್ ಎಂದು ಘೋಷಣೆ ಮೊಳಗಿಸಿದರು.

ಘೋಷಣೆ ಹಾಕುತ್ತಿದ್ದ ವಿರೋಧಪಕ್ಷದವರನ್ನು ಉದ್ದೇಶಿಸಿ ನಿಮ್ಮದು ಕೇವಲ ನಿಃಶಕ್ತಿ. ಮೋದಿ ಹೆಸರಿನ ಮೇಲೆ ನಡೆಸುತ್ತಿದ್ದೀರಿ. ಸಮಾಜ ಒಡೆಯುವ ಕೆಲ್ಸ ನಿಮ್ಮದು. ನಾವು ಜೈ ಸೀತಾ ರಾಮ್ ಎನ್ನುತ್ತೇವೆ ಎಂದು ಸಿದ್ದರಾಮಯ್ಯ ಪ್ರತಿ ಘೋಷಣೆ ಕೂಗಿದರು.

ಬಿಜೆಪಿಗೆ ತಲೆ ಖಾಲಿ, ಮೆದುಳು ಇಲ್ಲ. ರಾಮಾಯಾಣ ಮಹಾಭಾರತ ಓದಿಕೊಂಡೇ ಇಲ್ಲ ಎಂದು ಹೇಳಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಬಿಡಿಸಿಟ್ಟರು.

15ನೇ ಹಣಕಾಸು ಆಯೋಗ ಬಂದಾಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನಾನು 14 ನೇ ಹಣಕಾಸು ಆಯೋಗದಲ್ಲಿ ಮುಖ್ಯಮಂತ್ರಿ ಆಗಿದ್ದೆ. ನಮಗೆ ಇಷ್ಟೊಂದು ಅನ್ಯಾಯ ಆಗಲಿಲ್ಲ. ಪರಿಹಾರ ಜೂನ್ 2022 ಸ್ಥಗಿತಗೊಳಿಸಲಾಗಿದೆ. ಹಿಂದೆ ಹೆಚ್ಚುವರಿ ಅನುದಾನ ಕೊಟ್ಟಿದ್ದೇವೆಂದು ಈ ಬಾರಿ ಕಡಿತಗೊಳಿಸಿದ್ದಾರೆ. ಇಷ್ಟೆಲ್ಲ ಅನ್ಯಾಯವಾಗುತ್ತಿದೆ ಎಂದರೂ ಅವರು ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತಿದ್ದಾರಲ್ಲಾ? ನೀವು ಕನ್ನಡಿಗರಾ? ನಾಡ ದ್ರೋಹಿಗಳು ಎಂದು ಹೇಳಬೇಕಾಗುತ್ತದೆ ಅಸಮಾಧಾನ ವ್ಯಕ್ತಪಡಿಸಿದರು.

ಮಾತೆತ್ತಿದರೆ ಜೈ ಶ್ರೀರಾಮ್ ಅನ್ನುತ್ತಾರೆ. ನಾವೇನು ರಾಮನ ಭಕ್ತರಲ್ಲವೆ. ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ? ಇವರು ರಾಮ- ಸೀತೆಯರನ್ನು ಬೇರೆ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಹೇಳಿದ ಸೀತಾರಾಮನಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ನಾವು ರಾಷ್ಟ್ರಭಕ್ತರು. ಈ ದೇಶದ ಜನರನ್ನು ಪ್ರೀತಿಸುವವರು. ಎಲ್ಲ ಧರ್ಮದ ಜನರನ್ನು ಪ್ರೀತಿಸುವವರು ಕಾಂಗ್ರೆಸ್ ಪಕ್ಷದವರು. ಇವರ ತರ ಬುರ್ಖಾ ಹಾಕಿದವರು, ಟೋಪಿ ಹಾಕಿದವರು ಬರಬೇಕಾಗಿಲ್ಲ ಎನ್ನುವುದಿಲ್ಲ ಎಂದರು.

ಸಬ್ ಕಾ ಸಾಥ್ ಎಂದವರು ಪೆಟ್ರೋಲ್ ಡೀಸೆಲ್ ಬೆಲೆ, ಗ್ಯಾಸ್ ಬೆಲೆ, ಅಗತ್ಯವಸ್ತುಗಳ ಬೆಲೆ ಏರಿಸಿದರು. ಬಡವರಿಗೆ ನಿರುದ್ಯೋಗ, ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನಾವು ಗ್ಯಾರಂಟಿ ಯೋಜನೆಗಳ ಮೂಲಕ ನಾಲ್ಕರಿಂದ ಐದು ಸಾವಿರ ರೂ. ಕೊಡ್ತಾ ಇದ್ದೀವಿ. 1.2 ಕೋಟಿ ರೂ. ಕುಟುಂಬಗಳು ಅಂದರೆ ಸುಮಾರು 4.5 ಕೋಟಿ ಜನರಿಗೆ ಕೊಡ್ತಾ ಇದ್ದೀವಿ. ಈಗ ಅವರು ನಮ್ಮನ್ನು ಕಾಪಿ ಮಾಡುತ್ತಿದ್ಧಾರೆ. ಈಗ ಮೋದಿ ಗ್ಯಾರಂಟಿ ಎಂದು ಹೇಳುತ್ತಾರೆ. ಈ ಮೋದಿ ಗ್ಯಾರಂಟಿಯಲ್ಲಿ ಶೇ. 50 ರಿಂದ 60 ರಷ್ಟು ಪಾಲು ಕರ್ನಾಟಕದ್ದೂ ಇದೆ. ಇವರು ಕನ್ನಡಿಗರಿಗೆ ದ್ರೋಹ ಮಾಡುತ್ತಿಲ್ಲವೇ? ಎಂದರು.

25 ಜನ ಎಂಪಿಗಳು ಗೆದ್ದು ಹೋಗಿದ್ದಾರೆ. 15ನೇ ಹಣಕಾಸು ಆಯೋಗದಲ್ಲಿ ಶಿಫಾರಸು ಮಾಡಿರುವ ಅನುದಾನ ಕೇಳಿದ್ದಾರೆಯೇ? ಅವರಿಗೆ ತಾಕತ್ತಿಲ್ಲ. ಬರ ಪರಿಹಾರಕ್ಕೆ ಪ್ರಸ್ತಾವನೆ ಅಕ್ಟೋಬರ್ ನಲ್ಲಿಯೇ ಕಳಿಸಿದ್ದೆವು. ನೇರವಾಗಿ ಪ್ರಧಾನಮಂತ್ರಿಯವರು ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. 240 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿವೆ ಎಂದು ಪರಿಹಾರ ನೀಡುವಂತೆ ಮನವಿ ಮಾಡಿದೆ. ಡಿಸೆಂಬರ್ 23ರಂದು ಸಭೆ ಕರೆಯುವುದಾಗಿ ಕೇಂದ್ರ ಸಚಿವರು ಹೇಳಿದರೂ ಈ ವರೆಗೆ ಸಭೆ ನಡೆದಿಲ್ಲ ಎಂದರು.

ಕೇಂದ್ರದ ಪರಿಹಾರಕ್ಕೆ ಕಾಯದೆ ನಾವು ತಾತ್ಕಾಲಿಕವಾಗಿ 33 ಲಕ್ಷ ರೈತರಿಗೆ ಪರಿಹಾರ ವಿತರಿಸಿದ್ದೇವೆ. ಈ ಸಂಸದರು ಈ ಬಗ್ಗೆ ಮೌನ ವಹಿಸಿದ್ದಾರೆ. ಕರ್ನಾಟಕದ ಜನ ಇವರನ್ನು ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದು ಕರೆನೀಡಿದರು.

ಶಿಕ್ಷಣ, ಆರೋಗ್ಯ ಇಲಾಖೆ, ಕಾನೂನು ಸುವ್ಯವಸ್ಥೆ, ರಸ್ತೆಗಳಿಗೆ, ನೀರಾವರಿ, ಪಿಂಚಣಿ, ಗ್ರಾಮೀಣಾಭಿವೃದ್ಧಿ ಎಲ್ಲ ವಲಯಗಳಿಗೂ ಅನುದಾನ ಹೆಚ್ಚಾಗಿಯೇ ಕೊಟ್ಟಿದ್ದೇವೆ ಎಂದರು.

ಕೇಂದ್ರ ಸರ್ಕಾರದಿಂದ ಹಣ ಬರುತ್ತದೆ ಎಂದು ಪದೇ ಪದೇ ಹೇಳುತ್ತಾರೆ. ಈ ಹಣ ಯಾರಿಂದ ಬರುತ್ತದೆ? ನಮ್ಮ ತೆರಿಗೆಯಿಂದ. ಆದ್ದರಿಂದಲೇ ನಾವು ಹೇಳುವುದು ನಮ್ಮ ತೆರಿಗೆ ನಮ್ಮ ಹಕ್ಕು. ಸೆಸ್, ಸರ್ಚಾರ್ಜ್ ನಲ್ಲಿ ನಮಗೆ ಪಾಲು ಕೊಡುವುದಿಲ್ಲ. ಸೆಸ್, ಸರ್ಚಾರ್ಜ್ ಮೂಲಕ 5,52,000 ಕೋಟಿ ರೂ. ಸಂಗ್ರಹವಾಗಿದೆ. ಸೆಸ್ ಸರ್ಚಾರ್ಜ್ 1958 ರಿಂದ ವಿಧಿಸಲಾಗುತ್ತಿದೆ ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ. ಆದರೆ 1999 ರ ವರೆಗೆ ಸೆಸ್ ಸರ್ಚಾರ್ಜ್ ನಲ್ಲಿ ರಾಜ್ಯಕ್ಕೆ ಪಾಲು ದೊರೆಯುತ್ತಿದ್ದು. ಸಂವಿಧಾನ ತಿದ್ದುಪಡಿ ಮಾಡಿ ಇದನ್ನು ಸ್ಥಗಿತಗೊಳಿಸಲಾಯಿತು ಎಂದರು.

ಕನಿಷ್ಠ ತೆರಿಗೆಯ 50% ಆದರೂ ನಮಗೆ ಕೊಡಬೇಕು. 4.71% ರಿಂದ 3.64% ಗೆ ಕಡಿಮೆಯಾಗಿದೆ.. ಇದರ ಅರಿವಾಗಿಯೇ 15ನೇ ಹಣಕಾಸು ಆಯೋಗ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿದ್ದು. ನಾವು ಸಾಲ ಮಾಡಿರುವುದು ನಿಜ. ಆದರೆ ಅದು ಜಿ.ಎಸ್.ಡಿ.ಪಿ.ಯ ಶೇ. 23.68 ರಷ್ಟಿದೆ. ಅಂದರೆ ಶೇ. 25ರ ಒಳಗೇ ಇದೆ. ವಿತ್ತೀಯ ಕೊರತೆ 2.95% ಇದೆ. ರಾಜಸ್ವ ಉಳಿತಾಯ ಇಲ್ಲ, ನಿಜ. ಆದರೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 5.1% ರಷ್ಟಿದೆ ಎಂದರು.

ರಾಜ್ಯ ಸರ್ಕಾರ ಒಂದೇ ಒಂದು ಬಾರಿ 2020-21ರಲ್ಲಿ ಶೇ.3ರ ಮಿತಿ ದಾಟಿದೆ. ಇನ್ನು ಎರಡು ವರ್ಷದಲ್ಲಿ ಆಯವ್ಯಯವನ್ನು ರಾಜಸ್ವ ಉಳಿತಾಯಕ್ಕೆ ತಂದೇ ತರುವುದಾಗಿ ಸದನಕ್ಕೆ ಭರವಸೆ ನೀಡುತ್ತೇನೆ ಎಂದರು.

2018ರಲ್ಲಿ ನನ್ನ ಅವಧಿಯ ಮುಕ್ತಾಯದ ವೇಳೆ 2.42 ಲಕ್ಷ ಕೋಟಿ ಸಾಲ ಇದ್ದು, 2023 ಮಾರ್ಚ್ ವೇಳೆಗೆ 5.23 ಲಕ್ಷ ಕೋಟಿ ಇದೆ. ಇವರು ನಾಲ್ಕು ವರ್ಷದಲ್ಲಿ 2,81,00 ಕೋಟಿ ರೂ. ಮಾಡಿದ್ದಾರೆ. ಇದಲ್ಲದೇ ಜಿ.ಎಸ್.ಟಿ. ಪರಿಹಾರ ಸಾಲ 3,000 ಕೋಟಿ ರೂ. ಮಾಡಿದ್ದಾರೆ. ಕೇಂದ್ರದಲ್ಲಿ 2013-14 ರಲ್ಲಿ 53,10,000 ಕೋಟಿ ಸಾಲ ಇತ್ತು. ಈಗ 183,67,132 ಕೋಟಿ ಸಾಲ ಇದೆ. ನರೇಂದ್ರ ಮೋದಿಯವರ ಅವಧಿಯಲ್ಲಿ 130 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ದೇಶವನ್ನು ಸಾಲಗಾರರನ್ನಾಗಿ ಮಾಡಿದವರು ಯಾರು? ನರೇಂದ್ರ ಮೋದಿಜಿ, ಬಿಜೆಪಿಯವರು ಅಲ್ಲವೇ? ಎಂದರು.

ನಾವು ಬಡವರಿಗೆ, ರೈತರಿಗೆ, ಹೆಣ್ಣುಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಆರ್ಥಿಕ , ಸಾಮಾಜಿಕ ಶಕ್ತಿ ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಭೌತಿಕ ಆರೋಗ್ಯ, ಆರ್ಥಿಕ ಆರೋಗ್ಯ, ಮಾನಸಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಆರೋಗ್ಯ- ಈ ನಾಲ್ಕು ಆಯಾಮಗಳಲ್ಲಿ ಕಾರ್ಯನಿರ್ವಹಿಸಲಿದ್ದೇವೆ ಎಂದರು.

Leave a Reply