ಕಾಂಗ್ರೆಸ್ ಸರ್ಕಾರ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ

2 years ago

ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರೂ ಯಾವುದೇ ಕ್ರಮ ಕೈಗೊಳ್ಳದೆ ದೇಶದ್ರೋಹಿಗಳಿಗೆ ರಾಜ್ಯ ಸರ್ಕಾರ ಬೆಂಬಲಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದೆ.

ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ‌ ಬಜೆಟ್ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡಲು ಆರಂಭಿಸುತ್ತಿದ್ದಂತೆ ಬಿಜೆಪಿ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಯಲ್ಲಿ ನಿಂತು ಧರಣಿ ನಡೆಸಿದರು. ದೇಶದ್ರೋಹಿಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಘೋಷಣೆ ಹಾಕತೊಡಗಿದರು.

ಇದನ್ನು ‌ಲೆಕ್ಕಿಸದೆ ಸಿಎಂ ಸಿದ್ದರಾಮಯ್ಯ  ಉತ್ತರವನ್ನು ಮುಂದುವರೆಸಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ತಮ್ಮ ಮುಂದಿದ್ದ ಕಾಗದ ಪತ್ರಗಳನ್ನು ಹರಿದು ತೂರಿ ನಾನಾ ರೀತಿಯ ಘೋಷಣೆಗಳ ಮೂಲಕ ಮುಖ್ಯಮಂತ್ರಿಗಳ ಉತ್ತರಕ್ಕೆ ಅಡ್ಡಿಪಡಿಸಿದರು. ಆದರೂ ಸಿದ್ದರಾಮಯ್ಯ ಜಗ್ಗದೇ ತಮ್ಮ ಮಾತುಗಳನ್ನು ಮುಂದುವರೆಸಿ ಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ವಿವರಿಸಲಾರಂಭಿಸಿದರು.

ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ, ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ. 68 ಘಂಟೆ ಕಳೆದರೂ ಒಬ್ಬ ಆರೋಪಿಯನ್ನೂ ಬಂಧಿಸಿಲ್ಲ. ಈ ಸರ್ಕಾರ ಹಿಂದೂ ವಿರೋಯಾಗಿದೆ. ದೇಶದ್ರೋಹಿಗಳಿಗೆ ಬೆಂಬಲ ಕೊಡುತ್ತಿದೆ. ಮೊನ್ನೆ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸಭೆಯ ಸಭಾಂಗಣದೊಳಗೂ ಘೋಷಣೆ ಕೂಗಬಹುದು. ಘೋಷಣೆ ಕೂಗಿದ ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದರು.

ದೇಶದ್ರೋಹಿಗಳ ಜೊತೆ ಶಾಮೀಲಾಗಿರುವ ಈ ಸರ್ಕಾರವನ್ನು ವಜಾಗೊಳಿಸಬೇಕೆಂದು ನಾವು ರಾಜ್ಯಪಾಲರಿಗೆ ದೂರು ನೀಡುತ್ತೇವೆ. ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ತಮ್ಮ ಶಾಸಕರೊಂದಿಗೆ ಕಲಾಪದಿಂದ ಹೊರನಡೆದರು. ಈ ವೇಳೆ ಸಿದ್ದರಾಮಯ್ಯನವರು ನಿಮ್ಮ ಕೈಲಿ ಬೇರೇನೂ ಆಗುವುದಿಲ್ಲ, ಸರಿ ನಡಿಯಿರಿ ಎಂದು ಲೇವಡಿ ಮಾಡಿದರು.

ನಂತರ ಎಲ್ಲಾ ಸದಸ್ಯರು ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಕೆಲಕಾಲ ಧರಣಿ ನಡೆಸಿದರು. ಬಳಿಕ ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿ ರಾಜ್ಯಪಾಲರಿಗೆ ದೂರು ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷದ ನಾಯಕ ಆರ್.ಅಶೋಕ್, ಸರ್ಕಾರವನ್ನು ವಜಾ ಮಾಡಿ ಎಂದು ಮನವಿ ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರದಲ್ಲಿ ಭಯೋತ್ಪಾದನಾ ಚಟುವಟಿಕೆ ಆರಂಭವಾಗಿದೆ. ಗಲಾಟೆ, ಗಲಭೆ ಶುರುವಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿಗಳೇ ಅವರನ್ನು ಬಿಡಿ ಎಂದಿದ್ದಾರೆ. ಗೃಹಸಚಿವರು ಕೂಡ ವಿಚಾರಣೆ ಮಾಡಿ ಬಿಟ್ಟಿದ್ದೇವೆ ಎಂದಿದ್ದಾರೆ. ಪ್ರಕರಣ ಮುಚ್ಚಿ ಹಾಕಿದ್ದಾರೆ. ಇಂದು ವರದಿ ಕೊಡಬಹುದಿತ್ತು. ಆದರೆ ಅವೇಶನ ಮುಗಿಯಲಿ ಎಂದು ಕಾಯುತ್ತಿದ್ದಾರೆ ಎಂದರು.

ಸರ್ಕಾರ ಎಫ್‍ಎಸ್‍ಎಲ್ ವರದಿಯನ್ನೂ ತಿರುಚುವ ಪ್ರಯತ್ನವನ್ನು ಮಾಡಲಿದೆ. ಪಾಪಿ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಬೇರೆ ಯಾವುದೇ ಸರ್ಕಾರ ಇದಿದ್ದರೆ ಸಿಎಂ ರಾಜೀನಾಮೆ ಕೊಡುತ್ತಿದ್ದರು. ವಿಧಾನಸೌಧವನ್ನು ಸ್ಲೀಪರ್ ಸೆಲ್ ಮಾಡಲು ಹೊರಟಿದ್ದಾರೆ ಎಂದರು. 

ಕೆಂಗಲ್ ಹನುಮಂತಯ್ಯ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹಾಕಿಸಿದ್ದಾರೆ. ಅವರ ಹೇಳಿಕೆಗೆ ವಿರೋಧಿ ನೀತಿ ತಾಳುತ್ತಿದೆ ಈ ಸರ್ಕಾರ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಧಾನಿ ಮೋದಿ ಬಗ್ಗೆ, ಬಿಜೆಪಿ ಬಗ್ಗೆ ವಿಷ ತುಂಬುವುದೇ ಕೆಲಸ. ಟಿಪ್ಪು ಸುಲ್ತಾನ್ ಐಡಿಯಾಲಜಿ ಅವರ ತಲೆಯಲ್ಲಿ ಹೊಕ್ಕಿದೆ. ಸಿದ್ದರಾಮಯ್ಯ ಅವರ ತಲೆಯಲ್ಲಿ ಕಾರ್ಕೋಟಕ ವಿಷ ತುಂಬಿದೆ ಎಂದರು.

Leave a Reply