ಬೆಂಗಳೂರು: ಚಿನ್ನಾಭರಣ ಮಾಲೀಕರಿಂದ ಕಳವು ಮಾಡಿದ ಬೀಗದ ಕೈಗಳನ್ನು ಬಳಸಿ ಸಂಚು ರೂಪಿಸಿ ಚಿನ್ನಾಭರದ ಅಂಗಡಿಯಲ್ಲಿ ಪುರಾತನ ಚಿನ್ನಾಭರಣ ಸೇರಿದಂತೆ ನಗ, ಹಣ ಕಳ್ಳತನ ಮಾಡಿದ್ದ ಕೆಲಸಗಾರ ಸೇರಿ ಇಬ್ಬರು ಕಳ್ಳರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಕೆಲಸಗಾರ ಕೇತರಾಮ್ ಹಾಗೂ ಆತನ ಸ್ನೇಹಿತ ರಾಕೇಶ್ ಬಂಧಿತ ಆರೋಪಿಗಳು. ಬಂಧಿತರಿಂದ 15.50 ಲಕ್ಷ ನಗದು,1.2 ಕೋಟಿ ಮೌಲ್ಯದ 1 ಕೆಜಿ 624 ಗ್ರಾಂ ಚಿನ್ನ ಮತ್ತು 6 ಕೆಜಿ 455 ಗ್ರಾಂ ಬೆಳ್ಳಿ, ಹಳೆಯ ನೋಟುಗಳು, ಕೈ ಗಡಿಯಾರಗಳು ಮತ್ತು ಸ್ಕೂಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಾಹಿತಿ ನೀಡಿದರು.
ಹಲಸೂರುಗೇಟ್ ನ ನಗರ್ತ ಪೇಟೆಯ ಕಾಂಚನಾ ಜ್ಯುವೆಲರ್ಸ್ ಮಾಲೀಕ ಅರವಿಂದ್ ಕುಮಾರ್ ಥಾಡೆ ಅವರ ಮನೆ ಕೆಲಸಗಾರನಾಗಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಆರೋಪಿ ಕೇತರಾಮ್ ಸೇರಿಕೊಂಡಿದ್ದ. ಮಾಲೀಕರೊಂದಿಗೆ ಒಳ್ಳೆಯವನಂತೆ ನಟಿಸುತ್ತಿದ್ದ ಆತ ಅಲ್ಲಿನ ಆರ್ಥಿಕ ವ್ಯವಹಾರಗಳನ್ನೆಲ್ಲಾ ತಿಳಿದಿದ್ದ.
ದಸರಾ ಹಬ್ಬ ಹಿನ್ನೆಲೆ ಅರವಿಂದ್ ಕುಮಾರ್ ಮುಂಬಯಿಗೆ ತೆರಳಿದ್ದರು. ಈ ಸಂದರ್ಭ ಸಮಯ ಸಾಧಿಸಿದ ಕೇತರಾಮ್ ಮಾಲೀಕರ ಬ್ಯಾಗಿನಲ್ಲಿದ್ದ ಬೀಗದಕೈಗಳನ್ನು ಕದ್ದಿದ್ದಾನೆ. ಅನಂತ ತನ್ನ ಊರಿನ ರಾಕೇಶ್ ಎಂಬುವನನ್ನು ಕರೆಸಿಕೊಂಡು ಅಕ್ಟೋಬರ್ 29ರ ರಾತ್ರಿ ಚಿನ್ನಾಭರಣದ ಅಂಗಡಿ ಬೀಗ ತೆರೆದು ಒಳಗೆ ನುಗ್ಗಿ ದರೋಡೆ ನಡೆಸಿದ್ದಾರೆ.ಅಂಗಡಿಯಲ್ಲಿದ್ದ ಕೆಜಿಗಟ್ಟಲೇ ಚಿನ್ನ, ಬೆಳ್ಳಿ, ಪುರಾತನ ಆಭರಣಗಳು ಮತ್ತು ಹಣವನ್ನು ಕದ್ದು ಪಲಾಯನಗೈದಿದ್ದರು.
ಈ ಬಗ್ಗೆ ಸ್ಥಳೀಯರು ಅರವಿಂದ್ ಪುತ್ರನಿಗೆ ಮಾಹಿತಿ ನೀಡಿದ್ದು, ಕೂಡಲೇ ಅರವಿಂದ್ ಪುತ್ರ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡ ಇನ್ಸ್ಪೆಕ್ಟರ್ ಹನುಮಂತ ಕೆ. ಭಜಂತ್ರಿ ನೇತೃತ್ವದ ತಂಡ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸಿ ಕರೆತಂದು ವಿಚಾರಣೆ ನಡೆಸಿದೆ. ದರೋಡೆಯಲ್ಲಿ ಭಾಗಿಯಾಗಿರುವ ಮತ್ತೊಬ್ಬನ ಬಂಧನಕ್ಕೆ ತೀವ್ರ ಶೋಧ ಕೈಗೊಂಡಿದ್ದಾರೆ ಎಂದು ಪ್ರಕರಣದ ಕುರಿತು ಮಾಹಿತಿ ನೀಡಿದರು.
ಬಂಧಿತ ಕೇತರಾಮ್ ವಿರುದ್ಧ ಸಿಟಿ ಮಾರ್ಕೆಟ್, ಹಲಸೂರು, ವರ್ತೂರು, ಬ್ಯಾಡರಹಳ್ಳಿ, ತಾವರೆಕೆರೆ ಪೊಲೀಸ್ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆ, ಮನೆ ಕಳವು, ಹಗಲು ಕನ್ನ, ಕಳವು ಪ್ರಕರಣಗಳು ದಾಖಲಾಗಿದ್ದು ಆತ ಸೆರೆವಾಸವನ್ನೂ ಅನುಭವಿಸಿದ್ದ. ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ಮತ್ತೆ ದರೋಡೆ ಮಾಡಿದ್ದಾನೆ ಎಂದರು.




