ಬೆಂಗಳೂರು: ಹಣಕ್ಕಾಗಿ ವ್ಯಕ್ತಿಯ ಅಪಹರಣಕ್ಕೆ ಸಹಕಾರ ನೀಡಿದ ಆರೋಪದಲ್ಲಿ ತರಬೇತಿಯದ್ದ ಸಬ್ ಇನ್ಸ್‌ಪೆಕ್ಟರ್ ಸಿದ್ಧಾರೂಢ ಬಿಜ್ಜಣ್ಣನವರ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಪೇದೆ ಅಲ್ಲಾಭಕ್ಷ್ ಹಾಗೂ ರಾಜ್ ಕಿಶೋರ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಪ್ರೊಬೇಬೇಷನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್ ಮಡಿವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ವೇಳೆ ಆರೋಪಿ ರಾಜ್ ಕಿಶೋರ್ ಪರಿಚಯವಾಗಿದೆ. ತಾನು ಹೋಮ್ ಗಾರ್ಡ್ ಎಂದು ರಾಜ್ ಕಿಶೋರ್ ಪರಿಚಯಿಸಿಕೊಂಡಿದ್ದು, ಇಬ್ಬರ ನಡುವೆ ಸ್ನೇಹ ಬೆಳೆದಿದೆ ಎಂದು ಮಾಹಿತಿ ನೀಡಿದರು.
ಜುಲೈ 20ರಂದು ರಾಜ್ ಕಿಶೋರ್ ಪ್ರೋಬೇಶನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್ ಅವರು ಕೆಲಸ ನಿರ್ವಹಿಸುತ್ತಿದ್ದ ಠಾಣೆಗೆ ಬಂದಿದ್ದ. ಈ ವೇಳೆ ಸಿದ್ಧಾರೂಢ ಬಿಜ್ಜಣನವರ್ ಬೈಕ್ ಸ್ಟಾರ್ಟ್ ಮಾಡಲು ಯತ್ನಸುತ್ತಿದ್ದರು. ಇದನ್ನು ಕಂಡ ರಾಜ್ ಕಿಶೋರ್ ‘ನಾನು ತಾನೆ ರಿಪೇರಿ ಮಾಡಿಸುತ್ತೇನೆ ಎಂದು ಸಿದ್ದಾರೂಢ ಅವರಿಗೆ ಹೇಳಿದ್ದಾನೆ. ಅಲ್ಲದೆ ನಮ್ಮ ಅಣ್ಣನಿಗೆ, ಕಾರ್ತಿಕ್ ಎಂಬಾತ ಹಣ ನೀಡಬೇಕು, ನೀವು ಬಂದು ಹಣ ಕೊಡಿಸಿ ಸರ್’ ಎಂದು ಮನವಿ ಮಾಡಿದ್ದಾನೆ ಎಂದರು.
ರಾಜ್ ಕಿಶೋರ್ ಮಾತನ್ನು ಒಪ್ಪಿ ಪ್ರೊಬೇಷನರಿ ಪಿಎಸ್ಐ ಸಿದ್ಧಾರೂಢ ಬಿಜ್ಜಣ್ಣನವರ್ ಪೇದೆ ಅಲ್ಲಾಭಕ್ಷ್ ಸ್ಥಳಕ್ಕೆ ಹೋಗಿದ್ದಾರೆ. ಬಳಿಕ ಕಾರ್ತಿಕ್ ನನ್ನು ಹೆಚ್ಎಸ್ಆರ್ ಲೇ ಔಟ್ ನಿಂದ ಅಪಹರಣ ಮಾಡಿದ್ದಾರೆ. ಬಳಿಕ ಕೆಜಿ ಹಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆರೋಪಿಗಳು ಕಾರ್ತಿಕ್ ಗೆ ಒಂದುವರೆ ಕೋಟಿ ಕ್ರಿಪ್ಟೊ ಕರೆನ್ಸಿ ಮತ್ತು 20 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಬೆದರಿದ ಕಾರ್ತಿಕ್ ಆರೋಪಿಗಳ ಅಕೌಂಟ್ ಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿದರು.
ಘಟನೆ ಬಳಿಕ ಕಾರ್ತಿಕ್ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಕೆಜಿಹಳ್ಳಿ ಪೊಲೀಸರು ತನಿಖೆ ಸರಿಯಾಗಿ ನಡೆಸದ ಕಾರಣ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಘಟನೆಯಲ್ಲಿ ಸಿದ್ಧಾರೂಢ ಬಿಜ್ಜಣ್ಣನವರ್ ಕೂಡ ಶಾಮಿಲಾಗಿರುವುದನ್ನು ಪತ್ತೆ ಹಚ್ಚುತ್ತಾರೆ. ಬಳಿಕ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಮೂವರನ್ನು ಬಂಧಿಸಿ ಆರೋಪಿಗಳ ಅಕೌಂಟ್ ನಲ್ಲಿದ್ದ 20 ಲಕ್ಷ ರೂ. ಹಣ ಮತ್ತು ಕ್ರಿಪ್ಟೊ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ ಎಂದರು.
ಪ್ರಕರಣ ಸಂಬಂಧ ಬಂಧಿತರಾಗಿದ್ದ ವಂಶಿ ಕೃಷ್ಣ, ವಿನೋದ್ ನಾಯಕ, ಕಿರಣ್ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇದೀಗ ಸಿಸಿಬಿ ಪೊಲೀಸರು ಇವರ ಜಾಮೀನು ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಎಂದು ಹೇಳಿದರು.
ಅಪಹರಣ ಪ್ರಕರಣದ ತನಿಖೆ ನಡೆಯುತ್ತಿದ್ದು, ಅಪಹರಣ ಮಾಡಿ ಹಣ ವಸೂಲಿ ಮಾಡಲು ಸಹಕರಿಸಿದ್ದ ಒಬ್ಬ ಪಿಎಸ್ಐ, ಬ್ಬ ಪಿಸಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಸುಮಾರು ಒಂದೂವರೆ ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ಮತ್ತು ಇಪ್ಪತ್ತು ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ. ಉಳಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.




