ಜನರಿಗೆ ಬೇಕಿರುವುದು ಉಚಿತ ಶಿಕ್ಷಣ ಮತ್ತು ಉಚಿತ ಆರೋಗ್ಯ ರಕ್ಷಣೆ

3 years ago

ಚುನಾವಣೆಗಳು ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷದವರು ಪ್ರಣಾಳಿಕೆಯ ಹೆಸರಿನಲ್ಲಿ ಮತ್ತು ಮುಂಗಡ ಪತ್ರಗಳ ಹೆಸರಿನಲ್ಲಿ ಅನೇಕ ಘೋಷಣೆಗಳನ್ನು ಮಾಡುತ್ತಿದ್ದಾರೆ. ದುಡಿದು ತಿನ್ನುವ ಜನರ ಮನೆಯ ಮಕ್ಕಳು ಶಾಲೆಗಳಲ್ಲಿ ಓದಬೇಕಾದರೆ ದುಬಾರಿ ಶುಲ್ಕ ಮತ್ತು ವ್ಯವಸ್ಥೆಯನ್ನು ತಮ್ಮ ಮಕ್ಕಳಿಗೆ ಕಲ್ಪಿಸಿಕೊಡಲಾಗದೇ ಪರದಾಡುತ್ತಿದ್ದಾರೆ. ನಮ್ಮ ದೇಶದ ಸಂವಿಧಾನದಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಕಡ್ಡಾಯ ಶಿಕ್ಷಣದ ಪ್ರಸ್ತಾಪವಿದೆ. 1913ರಲ್ಲಿ ಮೈಸೂರಿನ ಮಹಾರಾಜರು ಕಡ್ಡಾಯ ಶಿಕ್ಷಣದ ಕಾಯ್ದೆಯನ್ನು ರೂಪಿಸಿದರು. ಡಾ. ಮನಮೋಹನ್ ಸಿಂಗ್ರವರು ಉಚಿತ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದರು. ಶಿಕ್ಷಣ ಕ್ಷೇತ್ರದಲ್ಲಿನ ಪ್ರಭಾವಿಗಳು, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಎಲ್ಲಾ ನಾಯಕರು ಅತ್ಯಂತ ವ್ಯವಸ್ಥಿತವಾಗಿ ಈ ಮಸೂದೆಯನ್ನು ಮಸಣಕ್ಕೆ ಸೇರಿಸಿದ್ದಾರೆ.

ಇನ್ನು ಬಡವರು ತಮ್ಮ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುವುದು ಎಂದರೆ ಸಾಹಸವೇ ಸರಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಹಳಷ್ಟು ಸಂದರ್ಭಗಳಲ್ಲಿ ಸೌಕರ್ಯ, ಸೌಲಭ್ಯಗಳ ಕೊರತೆ, ಅಸಡ್ಡೆ, ನಿರ್ಲಕ್ಷ್ಯ, ಹಾಗೂ ದುಡಿಯುವ ಮನಸ್ಸಿಲ್ಲದ ಜನ ಇವರುಗಳಿಂದ ಸಾವು ಖಚಿತ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ.
ಕ್ಯಾನ್ಸರ್ ಕಾಯಿಲೆಗೆ ಗುರಿಯಾಗುವ ವ್ಯಕ್ತಿ ಪಾಥಮಿಕ ಹಂತದಲ್ಲಿ ತನ್ನ ಕಾಯಿಲೆಯನ್ನು ಪತ್ತೆಹಚ್ಚಿಕೊಳ್ಳುವ ಸಲುವಾಗಿ ಒಳಗಾಗುವ ಅನೇಕ ತಪಾಸಣೆ ಮತ್ತು ಇತರೆ ವೆಚ್ಚಗಳು ಯಾವ ವಿಮಾ ಯೋಜನೆಯಲ್ಲಿಯೂ ಸೇರಿರುವುದಿಲ್ಲ. ಇನ್ನು ಮೂತ್ರಪಿಂಡದ ಕಾಯಿಲೆಯಿಂದ ನರಳುವವರು ಡಯಾಲಿಸ್ ಗಾಗಿ ಏಳನೂರರಿಂದ ಒಂದೂವರೆ ಸಾವಿರ ರೂಪಾಯಿಗಳ ತನಕ ನೀಡಬೇಕು. ಉಚಿತ ಡಯಾಲಿಸ್ ಕೇಂದ್ರಗಳು ಅಪರೂಪ.
ಇನ್ನು ಹಿರಿಯ ನಾಗರಿಕರಿಗೆ ದುಡಿಯುವ ಶಕ್ತಿ ಇರುವುದಿಲ್ಲ. ನಿರ್ದಿಷ್ಟ ಆದಾಯವಿರುವುದಿಲ್ಲ. ಮಕ್ಕಳ ಆರೈಕೆಯೂ ದೊರೆಯುವುದಿಲ್ಲ. ಇಂತವರು ತಮ್ಮ ಮಧುಮೇಹ ಮತ್ತು ರಕ್ತದೊತ್ತಡದ ಕಾಯಿಲೆಗಳಿಗೆ ಪಡೆದುಕೊಳ್ಳುವ ಮಾತ್ರೆಗಳ ಹಣವನ್ನು ಹೊಂದಿಸಲು ಪಡುವ ಪಾಡು ಹೇಳತೀರದು.
ರೈತರು ತನ್ನ ದೇಹದಲ್ಲಿ ಶಕ್ತಿ ಇರುವ ತನಕ ದುಡಿಯುತ್ತಾರೆ. ಆ ನಂತರ ಅವನ ಜೀವನ ತುಂಬಾ ತ್ರಾಸವಾಗುತ್ತದೆ. ಇಂತಹ ಅನೇಕ ಸೂಕ್ಷ್ಮತೆಗಳನ್ನು ಯಾರೂ ಗಮನಿಸುತ್ತಿಲ್ಲ. ಉಚಿತ ಶಿಕ್ಷಣ ಮತ್ತು ಉಚಿತವಾದಂತಹ ಆರೋಗ್ಯ ಚಿಕಿತ್ಸೆಗಳು ದೊರೆತರೆ ಎಲ್ಲವೂ ದೊರೆತಂತಾಗುತ್ತದೆ ಎಂಬ ಭಾವನೆ ಇದೆ. ಬಹಳಷ್ಟು ನಾಯಕರು ಶಿಕ್ಷಣ ಸಂಸ್ಥೆಗಳನ್ನು ನಡೆಸುವುದರಿಂದ ಉಚಿತ ಶಿಕ್ಷಣ ಒಪ್ಪಿತವಾಗಿರುವುದಿಲ್ಲ. ಇನ್ನು ಬಹಳಷ್ಟು ನಾಯಕರು ತಮ್ಮ ಮಕ್ಕಳು, ಅಳಿಯಂದಿರು ಇವರಿಗೆ ಪ್ರತಿಷ್ಠಿತ ಆಸ್ಪತ್ರೆಗಳನ್ನು ಕಟ್ಟಿಸಿಕೊಟ್ಟಿರುವುದರಿಂದ ಈ ವಿಚಾರವೂ ಇವರಿಗೆ ಸರಿ ಬರುವುದಿಲ್ಲ.
ಜನರಿಗೆ ವಿವಿಧ ಯೋಜನೆಗಳನ್ನು ಘೋಷಣೆ ಮಾಡುವ ಮುನ್ನ ನಮ್ಮ ನಾಯಕರು ವಿಧಾನಸೌಧದ ಮುಂಭಾಗದಲ್ಲಿ ತಮ್ಮ ಹೆಂಡತಿ ಮಕ್ಕಳ ತಲೆಯ ಮೇಲೆ ಕೈಯಿಟ್ಟು ತಾನು ಮೋಸ ಮಾಡುವುದಿಲ್ಲ, ಭ್ರಷ್ಟಾಚಾರ ಮಾಡುವುದಿಲ್ಲ, ಲೂಟಿ ಹೊಡೆಯುವುದಿಲ್ಲ ಎಂದು ಭರವಸೆ ನೀಡಿದರೆ ಸಾಕಾಗುತ್ತದೆ. ಜಾತಿ ಪ್ರೇಮ, ಕುಟುಂಬ ಪ್ರೇಮ, ಶ್ರೀಮಂತರ ಪ್ರೇಮ ಇವುಗಳಿಂದ ಇಡೀ ವ್ಯವಸ್ಥೆಯೇ ಹಾಳಾಗಿದೆ.
ಸರ್ಕಾರಿ ಇಲಾಖೆಗಳಲ್ಲಿ ಜನ ಕೊಡುವ ಅರ್ಜಿಗಳು ಕಾಲ ಕಸವಾಗಿದೆ. ಪ್ರಭಾವವಿಲ್ಲದ ಜನಸಾಮಾನ್ಯರ ಕೆಲಸ ಕಾರ್ಯಗಳು ಆಗುವುದು ಅಷ್ಟು ಸುಲಭವಿಲ್ಲ. ಸ್ವಂತ ಮನೆಗಳಿದ್ದರು, ಸರ್ಕಾರದ ಬಾಡಿಗೆಯನ್ನು ಕೊಡುವ ಮಂದಿ ಇದನ್ನು ಮೊದಲು ತ್ಯಜಿಸಲಿ. ಐಷಾರಾಮಿ ಜೀವನ ನಡೆಸುವ ಮನಸ್ಥಿತಿಯಿಂದ ಹೊರಗೆ ಬರಲಿ. ತಲೆತಲಾಂತರಕ್ಕೆ ಆಗುವಷ್ಟು ಕೂಡಿಡುವ ಬುದ್ಧಿ ತೊಲಗಲಿ.
ಸರ್ಕಾರದಿಂದ ನಡೆಸುವ ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡಿ, ಸರ್ಕಾರದ ವ್ಯವಸ್ಥೆ ಮಧ್ಯವರ್ತಿಗಳಿಂದ ಮುಕ್ತ ಮಾಡಿ, ಆಡಳಿತ ಯಂತ್ರ ಜನಪರವಾಗಿ ಆಡಳಿತ ನಡೆಸುವ ಮಂದಿಯ ಮನಸ್ಸುಗಳು ಶುದ್ಧವಾಗಿ ಅವರ ನಡೆ, ನುಡಿಗಳಲ್ಲಿ ಕನಿಷ್ಠ ಮಟ್ಟದ ಪ್ರಾಮಾಣಿಕತೆ ಬಂದರೆ ಅವೇ ಜನರಿಗೆ ನೀಡುವ ದೊಡ್ಡ ಕೊಡುಗೆಗಳಾಗುತ್ತವೆ. ಸರ್ಕಾರದ ಖಜಾನೆಯ ಹಣವನ್ನು ಹಂಚುವ ನಾಯಕರು ತಾವು ಕೂಡಿಟ್ಟರುವ ಖಜಾನೆಯ ಕಿಲುಬು ಕಾಸನ್ನು ಯಾರಿಗೂ ನೀಡದೇ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುತ್ತಾರೆ.
– ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply