EWSನವರಿಗೆ ಮೀಸಲಾತಿ ನೀಡಬಹುದು ಎಂದು ಸಂವಿಧಾನ ಹೇಳಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

3 years ago

ವಿಜಯನಗರ: ಯಾವ ಧರ್ಮವೂ ಹಿಂಸೆ ಮಾಡಿ, ಕೊಲೆ ಮಾಡಿ, ಇನ್ನೊಬ್ಬರನ್ನು ನೋಯಿಸಿ ಎಂದು ಹೇಳುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರದಲ್ಲಿ ಯಾತ್ರಿ ನಿವಾಸ ಉದ್ಘಾಟಿಸಿ, ಮಾತನಾಡಿದ ಅವರು, ಧರ್ಮಗಳು ಇರುವುದು ಜನರ ಕಲ್ಯಾಣಕ್ಕೆ. ಧರ್ಮ ಜನರ ಬದುಕಿಗೆ ಸನ್ಮಾರ್ಗವನ್ನು ತೋರಿಸುವಂತಿರಬೇಕು. ಹಾಗಾಗಿಯೇ ಧರ್ಮವನ್ನು “ವೇ ಆಫ್‌ ಲೈಫ್” ಎಂದು ಇಂಗ್ಲೀಷ್‌ ನಲ್ಲಿ ಕರೆಯುತ್ತಾರೆ. ಬಸವಾದಿ ಶರಣರು ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮವಾವುದಯ್ಯ ಎಂದು ಹೇಳಿದ್ದರು. ಮನುಷ್ಯತ್ವ ಇಲ್ಲದ ಧರ್ಮವನ್ನು ಯಾರು ಕೂಡ ಪಾಲನೆ ಮಾಡಬಾರದು, ಅಂಥಾ ಧರ್ಮವನ್ನು ತಿರಸ್ಕಾರ ಮಾಡಬೇಕು ಎಂದರು.
ನಮ್ಮ ಸರ್ಕಾರ ಇದ್ದಾಗ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಿದ್ದೆ. ಯಾವೊಬ್ಬ ಬಡವನೂ ಹಸಿದು ಮಲುಗಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ನಾನು ಹುಡುಗನಾಗಿದ್ದಾಗ ನಮ್ಮದು ಐದಾರು ಎಕರೆ ತರಿ ಜಮೀನಿದ್ದರೂ ಹಬ್ಬ ಹರಿದಿನಗಳಲ್ಲಿ ಮಾತ್ರ ಅನ್ನ ಮಾಡುತ್ತಿದ್ದರು. ಆಗೆಲ್ಲ ಮಕ್ಕಳಿಗೆ ಖಾಯಿಲೆ ಬಂದರೆ ಅನ್ನ ಮಾಡುವವರ ಮನೆ ಮುಂದೆ ಬಂದು ಕೈಯೊಡ್ಡಿ ನಿಂತುಕೊಳ್ಳೋರು. ಇವೆಲ್ಲವನ್ನು ನಾನು ಕಣ್ಣಾರೆ ನೋಡಿದ್ದೆ, ಹಾಗಾಗಿ ನಾನು ಮುಖ್ಯಮಂತ್ರಿಯಾಗಿರುವಾಗ ಯಾರೊಬ್ಬರು ತುತ್ತು ಅನ್ನಕ್ಕಾಗಿ ಇನ್ನೊಬ್ಬರ ಮನೆ ಮುಂದೆ ಕೈಚಾಚಬಾರದು ಎಂದು ಎಲ್ಲಾ ಜಾತಿಯ ಜನರಿಗೆ, ಎಲ್ಲಾ ಧರ್ಮದ ಜನರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆ ಎಂದರು.
ಈಗ ನಮ್ಮ ಪಕ್ಷದ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ, ಈ ಯಾತ್ರೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ದೇಶದ ಸಂಪತ್ತು ಎಲ್ಲರ ಸಂಪತ್ತು, ದುಡಿಯುವ ಜನರ ಸಂಪತ್ತು. ಈ ದೇಶದಲ್ಲಿ ಯಾರೂ ಹಸಿದು ಮಲಗಬಾರದು ಎಂಬುದು ನನ್ನ ಆಶಯ. ಎಲ್ಲರೂ ಹೊಟ್ಟೆತುಂಬಾ ಊಟ ಮಾಡಬೇಕು.
ಇಲ್ಲಿಗೆ ಬಹಳಷ್ಟು ಜನ ಯಾತ್ರಾರ್ಥಿಗಳು ಬರುವುದರಿಂದ ಇಲ್ಲೊಂದು ಯಾತ್ರಿ ನಿವಾಸದ ಅಗತ್ಯ ಇತ್ತು, ಅದನ್ನು ಅರ್ಥಮಾಡಿಕೊಂಡು ಸ್ವಾಮೀಜಿಗಳು ಇಲ್ಲಿ ಯಾತ್ರಿ ನಿವಾಸವನ್ನು ಸ್ಥಾಪನೆ ಮಾಡಿದ್ದಾರೆ ಎಂದರು.
ಇಲ್ಲಿ ಶಿಕ್ಷಣ ಸಂಸ್ಥೆಯೂ ಇದೆ, ಅದೂ ಕೂಡ ಬೇಕಾಗಿತ್ತು. ಬೆಳ್ಳೋಡಿಯಲ್ಲಿ ಸರ್ಕಾರದ ಜಾಗ ಇತ್ತು, ಆ ಜಾಗದಲ್ಲಿ ಐಎಎಸ್ ಮತ್ತು ಐಪಿಎಸ್‌ ಕೋಚಿಂಗ್‌ ಸೆಂಟರ್‌ ಮಾಡಲು 4 ಎಕರೆ ಜಾಗವನ್ನು ಕೊಟ್ಟಿದ್ದೆ, ಇದರ ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಅನುದಾನವನ್ನು ಕೂಡ ನೀಡಿದ್ದೆ. ಮೈಲಾರಲಿಂಗ ಪ್ರಾಧಿಕಾರ ರಚನೆ ಮಾಡಿದ್ದು ಕೂಡ ನಾವು. ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಸಂಗೊಳ್ಳಿ ಮತ್ತು ನಂದಗಡದ ಅಭಿವೃದ್ಧಿ ಮಾಡಿದ್ದು ನಾವು. 100 ಎಕರೆ ಸರ್ಕಾರಿ ಜಮೀನನ್ನು ನೀಡಿ, ರಾಯಣ್ಣನ ಹೆಸರಲ್ಲಿ ಸೈನಿಕ ಶಾಲೆ ಮಾಡಿದ್ದು, ಇದಕ್ಕೆ 262 ಕೋಟಿ ಹಣವನ್ನು ಕೂಡ ನೀಡಿದ್ದು ನಾನು. ಕೆಲವರು ಸಿದ್ದರಾಮಯ್ಯ ಅವರು ಏನು ಮಾಡಿದ್ದಾರೆ ಎಂದು ಕೇಳುತ್ತಾರೆ, ಅಂಥವರ ಟೀಕೆಗೆ ಎಂದೂ ತಲೆ ಕೆಡಿಸಿಕೊಳ್ಳುವ ಜಾಯಮಾನ ನನ್ನದಲ್ಲ ಎಂದರು.
ರಾಜಕೀಯದಲ್ಲಿ ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ, ಸೋಲು ಗೆಲುವು ಎಲ್ಲವನ್ನು ಕಂಡಿದ್ದೇನೆ, ಸೋತಾಗ ಹೆದರಿ ಮನೆ ಸೇರಲಿಲ್ಲ, ಸೋತಾಗಲೂ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಿದ್ದೆ, ಗೆದ್ದಾಗಲೂ ಸಾಮಾಜಿಕ ನ್ಯಾಯ ಪರವಾಗಿ ಇದ್ದೆ, ಮುಂದೆಯೂ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ. ಯಾರಿಗೂ ಹೆದರುವ ಜನ ನಾನಲ್ಲ. ನ್ಯಾಯಕ್ಕೆ ಮಾತ್ರ ತಲೆಬಾಗುತ್ತೇನೆ, ಸುಮ್ಮಸುಮ್ಮನೆ ಹೆದರಿಸಲು ಬಂದರೆ ನನಗೂ ತೊಡೆ ತಟ್ಟಿ ನಿಲ್ಲಲು ಗೊತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ಸೇರಿದ್ದೀರಿ, ನಿಮ್ಮನ್ನು ನೋಡಿ ಸಂತೋಷ ಆಗಿದೆ. ಶೋಷಿತರ ಪರ, ಅವಕಾಶ ವಂಚಿತರ ಪರ, ಹಿಂದುಳಿದವರ ಪರ ಯಾರು ಇರುತ್ತಾರೆ ಅವರ ಜೊತೆ ನೀವು ಹೋಗಬೇಕು. ಅಲ್ಲದೆ ಹೋದರೆ ನಿಮಗೆ ನ್ಯಾಯ ಸಿಗುವುದಿಲ್ಲ ಎಂದರು.
ಬಸವರಾಜ ಬೊಮ್ಮಾಯಿ ಅವರು ನಿನ್ನೆ ಕುರುಬರನ್ನು ಎಸ್‌,ಟಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಮಾಡಿದರೆ ಸಂತೋಷ. ಈ ಕೆಲಸ ಮಾಡಬೇಕಾಗಿರುವುದು ಕೇಂದ್ರ ಸರ್ಕಾರ, ಬೊಮ್ಮಾಯಿ ಅವರಲ್ಲ. ನಾನು ಈಗಾಗಲೇ ಯಾದಗಿರಿ, ಕಲಬುರಗಿ, ಬೀದರ್‌, ಕೊಡಗಿನ ಕುರುಬರು, ಗೊಂಡ, ರಾಜಗೊಂಡ ಸಮಾಜವನ್ನು ಎಸ್‌,ಟಿ ಗೆ ಸೇರಿಸುವಂತೆ ಶಿಫಾರಸು ಮಾಡಿ ಕಳಿಸಿದ್ದೇನೆ. ಅದನ್ನು ಮೋದಿ ಅವರ ಬಳಿ ಮಾತನಾಡಿ ಮೊದಲು ಮಾಡಿಸಲಿ. ಇಲ್ಲಿ ನಿಂತು ಮೀಸೆ ತಿರುವಿ ಭಾಷಣ ಮಾಡಿದರೆ ಅರ್ಥವಿರಲ್ಲ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಸಂವಿಧಾನ ತಿದ್ದುಪಡಿ ಮಾಡಿಸಲಿ ಎಂದು.
ಎಸ್‌,ಸಿ ಮೀಸಲಾತಿಯನ್ನು 15 ರಿಂದ 17 ಮತ್ತು ಎಸ್‌,ಟಿ ಮೀಸಲಾತಿಯನ್ನು 3 ರಿಂದ 7% ಗೆ ಏರಿಕೆ ಮಾಡಿದ್ದಾರೆ. ಆದರೆ ಇದಕ್ಕೆ ಸಂವಿಧಾನ ತಿದ್ದುಪಡಿಯನ್ನೇ ಮಾಡಿಲ್ಲ. ನಾನು ಮೂಗಿಗೆ ತುಪ್ಪ ಹಚ್ಚುವವರನ್ನು ನೋಡಿದ್ದೆ, ಹಣೆಗೆ ತುಪ್ಪ ಹಚ್ಚುವವರನ್ನು ನೋಡಿದ್ದು ಇದೇ ಮೊದಲು. ಮೇಲ್ಜಾತಿಯ ಬಡವರಿಗೆ 10% ಮೀಸಲಾತಿ ನೀಡಿದ್ದನ್ನು ಯಾರಾದರೂ ವಿರೋಧ ಮಾಡಿದ್ದು ನೀವು ನೋಡಿದ್ದೀರಾ? ನಾನು ಮಾತ್ರ ಇದನ್ನು ಹಲವು ಬಾರಿ ಪ್ರಶ್ನೆ ಮಾಡಿದ್ದೇನೆ. ಸಂವಿಧಾನದ 15 ಮತ್ತು 16ನೇ ವಿಧಿಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬಹುದು ಎಂದು ಹೇಳಿದೆ. ಆದರೂ ಹೇಗೆ ಸಂವಿಧಾನಬಾಹಿರವಾಗಿ ಮೀಸಲಾತಿ ನೀಡಿದ್ರು? ಈ ಬಗ್ಗೆ ಹಿಂದುಳಿದ ಜಾತಿಗಳ ಸ್ವಾಮೀಜಿಗಳು ಧ್ವನಿಯೆತ್ತಬೇಕು ಎಂದರು.
ಒಂದೇ ದಿನದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಬಿಲ್‌ ಪಾಸ್‌ ಮಾಡಿಕೊಂಡು ಮೇಲ್ಜಾತಿಯಲ್ಲಿನ ಬಡವರಿಗೆ 10% ಮೀಸಲಾತಿ ಜಾರಿ ಮಾಡಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬಹುದು ಎಂದು ಸಂವಿಧಾನ ಹೇಳಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲೆಸೆದರು.

Leave a Reply