ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದ ಬೆನ್ನಲ್ಲೇ ಉತ್ಸಾಹದಲ್ಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಹಿಂದೆ ತಮ್ಮ ಸರ್ಕಾರ ಪತನ ಹೊಂದಿದ ರೀತಿಯಲ್ಲಿ ಪತನಗೊಳ್ಳಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆದ್ದು, ರಚಿಸಿರುವ ಭರ್ಜರಿ ಬಹುಮತ ಸರ್ಕಾರ ಪತನಗೊಳ್ಳಲಿದೆ ಎಂಬ ಹೇಳಿಕೆಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿವೆ.
ಕಾಂಗ್ರೆಸ್ ತಿರುಗೇಟು: ಕುಮಾರಸ್ವಾಮಿ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ಸರ್ಕಾರ ಪತನಗೊಳಿಸುವ ಯತ್ನ ನಡೆಸಿದರೆ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಕೈಕಟ್ಟಿ ಕೂರುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ಯಾವ ಶಾಸಕರು ಕುಮಾರಸ್ವಾಮಿ ಬಳಿ ಹೋಗಿಲ್ಲ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ ನಲ್ಲಿ ಎಷ್ಟು ಜನ ವಿಚಲಿತರಾಗಿದ್ದಾರೆ. ಅವರನ್ನು ಹೇಗೆ ಸಮಾಧಾನಪಡಿಸಬೇಕೆಂಬುದನ್ನು ಕುಮಾರಸ್ವಾಮಿ ಗಮನಿಸಲಿ. ಆಮೇಲೆ ಬೇರೆ ವಿಚಾರದ ಬಗ್ಗೆ ಮಾತನಾಡಲಿ ಎಂದು ಹೇಳಿದರು.
ಈ ಹಿಂದೆ ಬಿಜೆಪಿ ನೂರು ಶಾಸಕರನ್ನು ಹೊಂದಿತ್ತು. ಆದರೆ ಆಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದರು. ಈಗ 135 ಜನ ಶಾಸಕರಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವುದು ಅಷ್ಟು ಸುಲಭವಲ್ಲ ಎಂದರು.
ಮೈತ್ರಿಯ ಬಗ್ಗೆ ಜೆಡಿಎಸ್ ನಲ್ಲಿ ಸಮಾಧಾನ ಇಲ್ಲ. ಬಿಜೆಪಿಯವರೂ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ತಮ್ಮ ಕಾರ್ಯಕರ್ತರು ಹಾಗೂ ಮುಖಂಡರನ್ನು ತೃಪ್ತಿಪಡಿಸಲು ಕುಮಾರಸ್ವಾಮಿ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.




