ಒಳ ಮೀಸಲಾತಿ ಜಾರಿ: ಸಂಪುಟ ಉಪಸಮಿತಿ ರಚನೆ

3 years ago

ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಹೋರಾಟ ಜೋರಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಸಂಪುಟ ಉಪ‌ ಸಮಿತಿ ರಚಿಸಿದೆ.

ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿದೆ. ಈ ಸಮಿತಿಗೆ ‌ಆಯೋಗದ ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ಸೂಚಿಸಲಾಗಿದೆ.

ನವೆಂಬರ್ 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳಮೀಸಲಾತಿ) ಕುರಿತು ಸಂಪುಟ ಉಪ ಸಮಿತಿ ರಚಿಸಲು ನಿರ್ಣಯಿಸಲಾಗಿತ್ತು. ಆದರಂತೆ ಇದೀಗ ಒಳಮೀಸಲಾತಿ ಆಗ್ರಹಿಸಿ ಹೋರಾಟ ಆರಂಭವಾಗುತ್ತಿದ್ದಂತೆ ಸಂಪುಟ ಉಪ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ.

ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಮೀನುಗಾರಿಕೆ ಸಚಿವ ಎಸ್‌. ಅಂಗಾರ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಈ ಸಮಿತಿಯ ಸದಸ್ಯರಾಗಿದ್ದಾರೆ.

ಈ ಸಮಿತಿಗೆ ಸಮಾಜ ಕಲ್ಯಾಣ ಇಲಾಖೆ ಅಗತ್ಯ ನೆರವು ನೀಡಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಈ ನಡುವೆ ಮಾಜಿ ಪ್ರಧಾನಿ ದೇವೇಗೌಡ ಒಳಮೀಸಲಾತಿ ಹೋರಾಟಗಾರರನ್ನು ಸಂಪರ್ಕಿಸಿ, ನೆನ್ನೆ ನಡೆದ ವಿದ್ಯಮಾನಗಳ ಬಗ್ಗೆ ವಿವರ ಪಡೆದಿದ್ದಾರೆ.  ಹೋರಾಟಗಾರರಿಂದ ಪೋಲಿಸ್ ಅರೆಸ್ಟ್, ಲಾಠಿ ಚಾರ್ಜ್ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡಿರುವ ಅವರು, ನಡೆದಿರುವ ವಿದ್ಯಮಾನಗಳಿಗೆ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೆ ನಾಳೆ ತಾವು ಪ್ರಧಾನಿಯವರನ್ನು ಬೇಟಿಯಾಗಿ ಒಳಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸುವುದಾಗಿಯೂ ಮತ್ತು ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಒತ್ತಾಯ ಪಡಿಸಿ, ಪ್ರಧಾನಿಯವರ ಉತ್ತರ ಏನಿತ್ತು ಎಂದು ನಮಗೆ ತಿಳಿಸುವುದಾಗಿ ತಮ್ಮ ನಿಲುವನ್ನು ತಿಳಿಸಿ ನಮ್ಮ ಹೋರಾಟಕ್ಕೆ ಶುಭ ಹಾರೈಸಿದ್ದಾರೆ ಎಂದು ಒಳ ಮೀಸಲಾತಿ ಹೋರಾಟಗಾರರ ಬಿ.ಆರ್.ಭಾಸ್ಕರಪ್ರಸಾದ್ ತಿಳಿಸಿದ್ದಾರೆ.

Leave a Reply