ಗಡಿ ವಿವಾದ ಕುರಿತು ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಾಗುವುದು: ಬೊಮ್ಮಾಯಿ

3 years ago

ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ  ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ಇದರಲ್ಲಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ

ಚಾಮರಾಜನಗರಕ್ಕೆ ತೆರಳುವ ಮುನ್ನ ಮೈಸೂರಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಚಾರ ಚರ್ಚಿಸಲೆಂದೇ ಕೇಂದ್ರ ಗೃಹ ಸಚಿವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ಕರೆದಿದ್ದಾರೆ. ಈ ಸಭೆಯ ಪ್ರಮುಖ ವಿಚಾರ ಗಡಿವಿಚಾರವಾಗಿದೆ ಎಂದರು.

ನಾಳಿನ ಸಭೆಯಲ್ಲಿ ನಮ್ಮ ನಿಲುವು ಏನೆಂಬುದನ್ನು ನಾವು ಹೇಳುತ್ತೇವೆ. ಈಗಾಗಲೇ ರಾಜ್ಯ ಪುನರ್ ಸಂಘಟನೆ ಕಾಯ್ದೆಯಾದ ಮೇಲೆ ಏನೆಲ್ಲ ಪ್ರಕ್ರಿಯೆಗಳು ನಡೆಯಿತು, ಫೈನಲ್ ಆದ ನಂತರ ಏನಾಗಿದೆ. ಈಗಿರುವಂತಹ ಸುಪ್ರೀಂ ಕೋರ್ಟ್ ಕೇಸ್ ವರೆಗೂ ಎಲ್ಲ ಮಾಹಿತಿಗಳನ್ನು ನಾನು ಗೃಹ ಸಚಿವರಿಗೆ ನೀಡುತ್ತಿದ್ದೇನೆ ಎಂದು ಹೇಳಿದರು.

ಸಂವಿಧಾನದ ಪ್ರಾಮುಖ್ಯತೆ ಏನಿದೆ, ಆಕ್ಟ್ ನ ಪ್ರಾಮುಖ್ಯತೆ ಏನಿದೆ. 2004 ರಲ್ಲಿ ಆಗಿರುವುದನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ ಎಲ್ಲವನ್ನೂ ಗೃಹ ಗೃಹಸಚಿವರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದರು.

ಮಹದಾಯಿ: ಮಹದಾಯಿ ಯೋಜನೆ ಸಮಸ್ಯೆಯಾಗಲು ಕಾರಣ. ಕಾಂಗ್ರೆಸ್ ಸರ್ಕಾರ, ಅವರ ಅಧಿನಾಯಕಿಯಾದ ಸೋನಿಯಾ ಗಾಂಧಿ ಗೋವಾ ಚುನಾವಣೆಗೆ ಹೋದಾಗ ಮಹದಾಯಿ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಬಿಡಲ್ಲ ಅಂತ ಹೇಳಿದರು. ಅವರಿದ್ದಾಗ ಏನು ಮಾಡಿದರು? ಗೋಡೆ ಕಟ್ಟಿದರು, ಕೃಷ್ಣಾದಲ್ಲೂ ಅಷ್ಟೇ, ನಮ್ಮ ಹಕ್ಕನ್ನು ಪ್ರತಿಪಾದಿಸೋದಕ್ಕೆ ಮೀನಾಮೀಷ ನೋಡಿದವರು, ಇವರಿಗೆ ಯಾವ ನೈತಿಕತೆ ಎಂದು ಕಿಡಿಕಾರಿದರು.

ಎಸ್‌ಸಿ, ಎಸ್.ಟಿ. ಗೆ ಒಳ ಮೀಸಲಾತಿ ಬೇಕೆನ್ನುವುದು 40ರ್ಷದ ಬೇಡಿಕೆ. ಈ ಬಗ್ಗೆ ಕಾಂಗ್ರೆಸ್ ತಿರುಗಿ ನೋಡಿರಲಿಲ್ಲ. ನಿನ್ನೆ ಸಿದ್ದರಾಮಯ್ಯನವರು ಟ್ವೀಟ್ ಮಾಡಿದರು. ಒಳಮೀಸಲಾತಿ ನಾವು ಅಧಿಕಾರಕ್ಕೆ ಬಂದರೆ ಕೊಡುತ್ತೇವೆ ಅಂತ. ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಆ ವರದಿಯನ್ನು ಸಿದ್ದರಾಮಯ್ಯ ಮಂಡನೆ ಮಾಡೋ ಧೈರ್ಯ ಮಾಡಿಲ್ಲ. ಅವರು ಒಂದು ದೊಡ್ಡ ಸಮಾವೇಶ ಮಾಡಿದ್ದರು. ಆ ಸಮಾವೇಶಕ್ಕೆ ಬರೀ ದೀಪ ಹಚ್ಚಿ ಬಂದರು. ಅಲ್ಲಿ ಮಾತಾಡಿಯೂ ಇಲ್ಲ, ಈ ಎಲ್ಲ ನಡೆ ನುಡಿಗಳು ಜನರ ಮನದಾಳದಲ್ಲಿ ಇದೆ ಎಂದರು.

ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಅವರು ಏನು ಮಾಡಿದ್ದಾರೆ? ಜಲಕ್ಕೆ ಸಂಬಂಧಿಸಿದಂತೆ ಏನು ಮಾಡಿದ್ದಾರೆ? ಅದನ್ನು ಮುಚ್ಚಿಹಾಕಿಕೊಳ್ಳಲು ಈ ಸಮಾವೇಶ ಮಾಡುತ್ತಿದ್ದಾರೆ. ಆದರೆ ಜನರನ್ನು ಪದೇ ಪದೇ ಮರಳು ಮಾಡಲು ಸಾಧ್ಯವಿಲ್ಲ  ಎಂದರು.

Leave a Reply