ಬೆಂಗಳೂರು: ಮಕ್ಕಳಲ್ಲಿನ ಕಲಿಕಾ ಕೊರತೆ ನೀಗಿಸಲು ರಾಜ್ಯದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಹಂತದಲ್ಲಿಯೇ ಪ್ರಶ್ನೆ ಪತ್ರಿಕೆ ರೂಪಿಸಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಬೇಕು. ಫಲಿತಾಂಶವನ್ನು ಶಾಲಾವಾರು ಕ್ಲಸ್ಟರ್ ವಾರು, ತಾಲೂಕವಾರು ವಿಶ್ಲೇಷಿಸಬೇಕು ಎಂದು ಸೂಚಿಸಲಾಗಿದೆ.
ರಾಜ್ಯದಲ್ಲಿ 1ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತಿತ್ತು. ಹೀಗಾಗಿ ಕಲಿಕೆ ಆಸಕ್ತಿ ಕಡಿಮೆಯಾಗಿದೆ. ಕೊರೊನಾದಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಎಸ್ಸೆಸ್ಸೆಲ್ಸಿ , ಪಿಯುಸಿ ಪರೀಕ್ಷೆ ಸೇರಿದಂತೆ ವಿವಿಧ ಕೋರ್ಸ್‍ಗಳ ಪ್ರವೇಶ ಪರೀಕ್ಷೆ ಎದುರಿಸುವುದು ವಿದ್ಯಾರ್ಥಿಗಳಿಗೆ ಕಷ್ಟವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗೆ ಶಿಕ್ಷಣ ಇಲಾಖೆ ಮುಂದಾಗಿದೆ.
ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಕಲಿಕೆಯ ಮಟ್ಟವೇನು? ಕೊರತೆಗಳೇನು? ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ ಅವುಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಕಲಿಕಾ ಫಲ ಹಾಗೂ ಸಾಮರ್ಥ್ಯವನ್ನು ಮೌಲ್ಯಮಾಪನ ನಡೆಸಿ, ವಿಶ್ಲೇಷಿಸುವ ಅವಶ್ಯವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಪ್ರಶ್ನೆ ಪತ್ರಿಕೆ ರೂಪಿಸಿ, ಸರಬರಾಜು ಮಾಡಿ ಶಾಲಾ ಹಂತದಲ್ಲಿ ಪರೀಕ್ಷೆ ನಿರ್ವಹಿಸಿ ಮೌಲ್ಯಾಂಕನ ವಿಶ್ಲೇಷಣೆಯಲ್ಲಿ ಕಲಿಕೆ ಕುಂಠಿತವಾಗಿರುವ ವಿಷಯ, ಶಾಲೆ, ಕ್ಲಸ್ಟರ್/ತಾಲ್ಲೂಕುಗಳನ್ನು ಗುರುತಿಸಲಾಗುವುದು. ಆ ವಿಷಯ, ಶಾಲೆ, ಕ್ಲಸ್ಟರ್, ತಾಲ್ಲೂಕುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಕ್ರಿಯಾ ಯೋಜನೆ ರಚಿಸಿ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಬಲವರ್ಧನೆಗೊಳಿಸುವ ಉದ್ದೇಶದಿಂದ ಪರೀಕ್ಷೆ ನಿರ್ವಹಣೆ ಕುರಿತು ಸಂಬಂಧಿಸಿದ ಅನುಷ್ಠಾನಾಧಿಕಾರಿಗಳ ಜೊತೆ ಸಭೆ ನಡೆಸಿ, ಪರೀಕ್ಷಾ ನಿರ್ವಹಣೆಗೆ ಪೂರ್ವ ಸಿದ್ಧತೆ ಕೈಗೊಳ್ಳಲು ಮಾರ್ಗಸೂಚಿ ಸಿದ್ಧಪಡಿಸಲಾಗಿದೆ.
ಪರೀಕ್ಷೆ ಮತ್ತು ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸದೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯೇ ಭರಿಸಲಿದೆ. ಶಾಲಾವಾರು ಮಕ್ಕಳ ಸಂಖ್ಯೆ ಆಧರಿಸಿ 5ನೇ ತರಗತಿಯ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25, 8ನೇ ತರಗತಿಯ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 50 ಮಕ್ಕಳು ಇರುವಂತೆ ಪರೀಕ್ಷಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಎರಡೂ ತರಗತಿಗಳಿಗೆ 40 ಅಂಕಗಳ ಲಿಖಿತ ಮತ್ತು 10 ಅಂಕಗಳ ಮೌಖಿಕ ಪರೀಕ್ಷೆ ಸೇರಿ ಒಟ್ಟು 50 ಅಂಕಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಹೇಳಿದೆ.
ವೇಳಾಪಟ್ಟಿ: 2023ರ ಮಾರ್ಚ್ 9ರಿಂದ 17ರವರೆಗೆ ಪರೀಕ್ಷೆ, 21ರಿಂದ 28ರವರೆಗೆ ಮೌಲ್ಯಮಾಪನ, 31ರಿಂದ ಏಪ್ರಿಲ್ 5ರವರೆಗೆ ಫಲಿತಾಂಶ ಸಿದ್ಧಪಡಿಸಿ, ಏಪ್ರಿಲ್ 8ರಿಂದ 10 ಮಧ್ಯೆ ಫಲಿತಾಂಶ ಪ್ರಕಟಿಸಲು ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ 2023ರ ಏಪ್ರಿಲ್ 10ರಂದು ಕೊನೆಗೊಳ್ಳಲಿದೆ.




