ಲೂಟಿ ಸರ್ಕಾರವನ್ನು ತೆಗೆದುಹಾಕಿ: ಪ್ರಿಯಾಂಕಾ ಗಾಂಧಿ

3 years ago

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿಂದು ಪ್ರಿಯಾಂಕಾ ಮೇನೀಯಾ. ಪಕ್ಷದ ಅಭ್ಯರ್ಥಿಗಳ ಪರ ಭರಾಟೆ ಪ್ರಚಾರ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ಮೂಡಿಸಿದರು. ಮಹಿಳೆಯರೊಂದಿಗೆ ಸಂವಾದ, ರೋಡ್ ಶೋ ಮತ್ತು ಬಹಿರಂಗ ಸಭೆಯಲ್ಲಿ ಮಿಂಚಿದರು.

ಕರ್ನಾಟಕ ಮತ್ತು ಕನ್ನಡಿಗರ ಆತ್ಮಾಭಿಮಾನ ಮತ್ತು ಸ್ವಾಭಿಮಾನ ಎತ್ತಿ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಿದ ಅವರು, ಕರ್ನಾಟಕಕ್ಕೆ ಪ್ರಧಾನಿ ಮೋದಿ ಅವರ ಆಶೀರ್ವಾದ ಬೇಕಿಲ್ಲ ಬಸವಣ್ಣ, ಕುವೆಂಪು ಅವರ ಆಶೀರ್ವಾದ ಬೇಕಿದೆ ಎಂದು ಹೇಳಿದರು.

ಟಿ. ನರಸೀಪುರ, ಹನೂರಿನಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮತ ಹಾಕದಿದ್ದರೆ ನರೇಂದ್ರ ಮೋದಿ ಅವರ ಆಶೀರ್ವಾದ ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅಹಂಕಾರದ ಮಾತುಗಳನ್ನು ಆಡಿದ್ದಾರೆ. ಬಸವಣ್ಣ, ಕುವೆಂಪು ಅವರ‌ ನಾಡಿದು. ಅವರ ಆಶೀರ್ವಾದವಿರುವಾಗ ಮೋದಿ ಅವರ ಆಶೀರ್ವಾದ ಬೇಕಿಲ್ಲ ಎಂದು ಗುಡುಗಿದರು.

ಹೆಲಿಕಾಪ್ಟರ್ ಬರುವಾಗ ಎಷ್ಟು ಸುಂದರ ಜಾಗಕ್ಕೆ ಬಂದಿದ್ದೇನೆ. ಕಪಿಲಾ, ಕಾವೇರಿ ನದಿಗಳ ಸಂಗಮ ಸ್ಥಳ. ದೇಗುಲಗಳ ಪವಿತ್ರವಾದ ಭೂಮಿಯಿದು. ಹಸಿರುಕ್ಕುವ ಸಮೃದ್ಧ ಕೃಷಿಭೂಮಿ ನಿರ್ಮಾಣ ಮಾಡಿದವರ ಮುಂದೆ ಮಾತನಾಡುವುದು ಹೆಮ್ಮೆ ಎನಿಸುತ್ತದೆ ಎಂದು ಹೇಳಿ ಎಲ್ಲರ ಚಪ್ಪಾಳೆ ಗಿಟ್ಟಿಸಿದರು.

ಜನರ ಸಂಕಷ್ಟಗಳಿಗೆ ಸ್ಪಂದಿಸುವ, ಜನರ ದನಿಯಾಗುವ ಸರ್ಕಾರವಿರಬೇಕು. ದೇಶದ ವಿಕಾಸ ಮಾಡುವುದು ಹಾಗೂ ಜನ ಸಂಸ್ಕೃತಿ ಕಾಪಾಡುವುದು ಸರ್ಕಾರದ ಧರ್ಮ. ಆದರೆ, ಅಪ್ರಾಮಾಣಿಕವಾದ ಸರ್ಕಾರ ಆಳುತ್ತಿದೆ. ಅದಕ್ಕೆ ಜನರ ಕಷ್ಟಗಳು ಬೇಕಿಲ್ಲ. ಲೂಟಿ ಹೊಡೆಯುವುದೇ ಅದರ ಗುರಿಯಾಗಿದೆ ಎಂದರು.

ಬಿಜೆಪಿ ಸರ್ಕಾರ ರಚನೆಯಾಗಿದ್ದೇ ಜನಾದೇಶದ ವಿರುದ್ಧವಾಗಿ. ಜನರನ್ನು ವಂಚಿಸಿ, ಶಾಸಕರಿಗೆ ಆಮಿಷವೊಡ್ಡಿ ಹಣ ಬಲದಿಂದ ರಚಿಸಿತು. ಪರಿಣಾಮ ಯಾವುದೇ ಕೆಲಸ ಮಾಡಲಿಲ್ಲ. ಕೇಂದ್ರ ಸರ್ಕಾರದಿಂದ ಬರುವ ಅನುದಾನವೂ ಕಡಿಮೆಯಾಯಿತು. ರಾಜ್ಯ ಸರ್ಕಾರವು ನಿರ್ಲಜ್ಜೆಯಿಂದ ಜನರ ಲೂಟಿ‌ ಮಾಡಿತು. ಗುತ್ತಿಗೆದಾರರು, ಶಾಲಾ ಆಡಳಿತ ಮಂಡಳಿಯವರು ಮೋದಿ ಅವರಿಗೆ ಪತ್ರ ಬರೆದರೂ, ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ಕ್ರಮವಹಿಸಲಿಲ್ಲ ಎಂದು‌ ಕಿಡಿಕಾರಿದರು.

ಪಿಎಸ್ ಐ ನೇಮಕಾತಿಯಲ್ಲಿ ಹಗರಣ ನಡೆಯಿತು. ಬಿಜೆಪಿ ಶಾಸಕನ ಬಳಿ ₹ 5 ಕೋಟಿ ಹಣ ಸಿಕ್ಕಿತ್ತು. ಅವರು ತಲೆ ಮರೆಸಿಕೊಂಡರು. ಈ ಸರ್ಕಾರ ಕೋವಿಡ್ ಹೆಸರಿನಲ್ಲೂ ಲೂಟಿ ಮಾಡಿತು. ಶಾಲಾ ಮಕ್ಕಳ ಮೊಟ್ಟೆಯನ್ನೂ ಬಿಡಲಿಲ್ಲ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ₹ 1.5 ಲಕ್ಷ ಕೋಟಿ ಹಣ ಲೂಟಿ‌ ಮಾಡಿದೆ. ಆ ಹಣದಲ್ಲಿ ಎರಡೂವರೆ ಸಾವಿರ ಕಿ.ಮೀ‌ ರಸ್ತೆ ನಿರ್ಮಿಸಬಹುದಿತ್ತು. 750 ಕಿ.ಮೀ ಮೆಟ್ರೊ ಮಾರ್ಗ ನಿರ್ಮಿಸಬಹುದಿತ್ತು. ಬಡವರಿಗೆ 30 ಲಕ್ಷ ಮನೆಗಳನ್ನು ಕಟ್ಟಬಹುದಿತ್ತು ಎಂದರು.‌

ಮೀಸಲಾತಿ ಹೆಸರಿನಲ್ಲೂ ವಂಚನೆ ಮಾಡಿದ್ದಾರೆ. ಮೀಸಲಾತಿ ಹೆಚ್ಚಿಸಿದ್ದಷ್ಟೇ, ಸಂವಿಧಾನದ 9 ನೇ ಪರಿಚ್ಛೇದಕ್ಕೆ ಸೇರಿಸುವ ಧೈರ್ಯ ಮಾಡಲಿಲ್ಲ. ಬಿಜೆಪಿಗರು ಮೀಸಲಾತಿ ವಿರೋಧಿಗಳು. ಅಮೂಲ್ ಉತ್ಪನ್ನಗಳ ಮಾರಾಟಕ್ಕಾಗಿ ಹಾಲಿನ ಕೃತಕ ಅಭಾವ ಸೃಷ್ಟಿಸಿದ್ದಾರೆ. 90 ಲಕ್ಷ ಲೀ. ಹಾಲು ಉತ್ಪಾದನೆಯು 70 ಲಕ್ಷ ಲೀ. ಗೆ ಇಳಿಕೆಯಾಗಿದೆ. ಇದು ಸಂಚಲ್ಲವೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ವೇಳೆ ಹಾಲು ಹೆಚ್ಚು ಉತ್ಪಾದನೆಯಾದಾಗ ಕ್ಷೀರ ಭಾಗ್ಯ ಯೋಜನೆಗೊಳಿಸಿ ಶಾಲಾ ಮಕ್ಕಳಿಗೆ ಉಚಿತ ಹಾಲು ನೀಡಿದೆವು. ಹಾಲು ಉತ್ಪಾದಕರಿಗೆ ₹5 ಸಬ್ಸಿಡಿ ನೀಡಿದ್ದೆವು ಎಂದು ನೆನಪಿಸಿದರು.

ಅದಾನಿ ಅವರ ಉದ್ಯಮಗಳಿಗೆ ₹ 16 ಲಕ್ಷ ಕೋಟಿ ಲಾಭ ಮಾಡಿಕೊಡಲು ಮೋದಿ ಸರ್ಕಾರಕ್ಕೆ ಆಗುತ್ತದೆ. ಆದರೆ, ರೈತರು ಬೆಳೆದ ಕಬ್ಬಿಗೆ ಬೆಂಬಲ ಬೆಲೆ ನೀಡಲು ಆಗುವುದಿಲ್ಲ ಎಂದು ಕಿಡಿಕಾರಿದರು.

ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನ ಕಾಂಗ್ರೆಸ್ ಸರ್ಕಾರಗಳು ರೈತರ ಸಾಲ‌ಮನ್ನಾ ಮಾಡಿವೆ. ಹಿಮಾಚಲ ಪ್ರದೇಶದಲ್ಲಿ ಒಪಿಎಸ್ ಜಾರಿಗೊಳಿಸಿದ್ದೇವೆ. ನಾವು ಗ್ಯಾರಂಟಿ ಕೊಡುತ್ತೇವೆ. 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿ ತೋರಿಸುತ್ತೇವೆ. ನಂದಿ‌ನಿ ಸಂಸ್ಥೆಯನ್ನು ಗಟ್ಟಿಗೊಳಿಸುತ್ತೇವೆ ಎಂದರು.

ಈ ಚುನಾವಣೆಯು ಮೋದಿ ಅವರ ಬಗ್ಗೆ ಅಲ್ಲ. ಇದು ಯಾವ ನಾಯಕರ ಬಗ್ಗೆಯೂ ಅಲ್ಲ. ಈ ಚುನಾವಣೆ ಕರ್ನಾಟಕದ ಬಗ್ಗೆ. ನಿಮ್ಮ ಅನುಭವದ ಮೇಲೆ ಯೋಚನೆ ಮಾಡಿ ಮತ ಚಲಾಯಿಸಿ, ಲೂಟಿ‌ ಮಾಡುವ ಸರ್ಕಾರ ತೆಗೆದು ಹಾಕಿ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

Leave a Reply