ರಾಜ್ಯ ಚುನಾವಣೆಗೆ ಕೇಂದ್ರದ ಮೊರೆ ಹೋದ ಬಿಜೆಪಿ!

3 years ago

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸುತ್ತಿರುವ ಬಿಜೆಪಿ ಮತದಾರರ ಮನ ಸೆಳೆಯಲು ವಿಭಿನ್ನ ಅಭಿಯಾನ ಹಮ್ಮಿಕೊಂಡಿದೆ. ಚುನಾವಣೆಯ ಅಖಾಡದಲ್ಲಿ ಪಕ್ಷದ ಪರ ಅಲೆ ಎಬ್ಬಿಸಲು ಎರಡು ದಿನಗಳ ಕಾಲ ವಿಶೇಷ ಪ್ರಚಾರ ಮಹಾಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಈ ಅಭಿಯಾನದ ವೇಳೆ ರಾಜ್ಯದ 224 ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಕೇಂದ್ರ ಮತ್ತು ರಾಜ್ಯದ ನಾಯಕರು ಪ್ರಚಾರ ಕೈಗೊಂಡಿದ್ದು ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ. 224 ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ, ರೋಡ್ ಶೋ ನಡೆಸಲಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸಲಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಅರುಣ್ ಸಿಂಗ್, ಸ್ಮತಿ ಇರಾನಿ, ಧರ್ಮೇಂದ್ರ ಪ್ರಧಾನ್, ನಿರ್ಮಲಾ ಸೀತಾರಾಮನ್, ಮನ್ಸುಕ್ ಮಾಂಡವೀಯ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಡಿಸಿಎಂ ದೇವೇಂದ್ರ ಫಡ್ನವೀಸ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಅಣ್ಣಾಮಲೈ ಸೇರಿದಂತೆ 98 ಕೇಂದ್ರ ನಾಯಕರು ಮತ್ತು ಕೇಂದ್ರ ಸಚಿವರು ಪಾಲ್ಗೊಳ್ಳುತ್ತಾರೆ.

ಪಕ್ಷದ ಸಚಿವರು, ಸಂಸದರು ಇತರ ಮುಖಂಡರು ಸೇರಿದಂತೆ 150 ರಾಜ್ಯ ನಾಯಕರು ಈ ಅಭಿಯಾನದಲ್ಲಿ ಭಾಗಿಯಾಗಿದ್ದರು.
150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿಯೊಂದಿಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬೆಳಿಗ್ಗೆಯಿಂದ ಸಂಜೆವರೆಗೆ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಸರಕಾರದ ಕಾರ್ಯ ಯೋಜನೆ ಮತ್ತು ಸಾಧನೆ ತಿಳಿಸಲಿದ್ದಾರೆ.

ಬೆಳಿಗ್ಗೆ ಮಂದಿರ, ದೇವಸ್ಥಾನಗಳಿಗೆ ಭೇಟಿ ನೀಡಿ ಬಳಿಕ ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ಆ ನಂತರ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಾನಾ ಯೋಜನೆಗಳ ಫಲಾನುಭವಿಗಳು ಮತ್ತು ಸಮುದಾಯಗಳ ಮುಖಂಡರೊಂದಿಗೆ ಸಂವಾದ ನಡೆಸಿದ್ದಾರೆ.

ಆದಿತ್ಯನಾಥ್ ನಾಲ್ಕು ದಿನಗಳ ಕಾಲ ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಅಮಿತ್ ಶಾ 35 ರಿಂದ 40 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಸ್ಮತಿ ಇರಾನಿ, ಧರ್ಮೇಂದ್ರ ಪ್ರಧಾನ, ನಿರ್ಮಲಾ ಸೀತಾರಾಮನ್, ಮನ್ಸುಖ್ ಮಾಂಡವ್ಯ ಮತ್ತಿತರರು ಕೂಡ ಪ್ರಚಾರ ನಡೆಸಲಿದ್ದಾರೆ.

Leave a Reply