ರಾಜ್ಯ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇದೆ.
ನಾಳೆ ನನ್ನ ಓಟು ಹಾಕುವ ಮೊದಲು, ನನ್ನ ಕೆಲವೊಂದು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳ ಬಯಸುತ್ತೇನೆ.
ಕೆಲವು ವರ್ಷಗಳ ಹಿಂದೆ ಅಂದರೆ 2014ಕ್ಕೂ ಮೊದಲು ನನಗೆ ತುಂಬಾ ದೊಡ್ಡದಾಗಿ ಕಾಣುತ್ತಿದ್ದ ದೇಶದ ಸಮಸ್ಯೆಗಳೆಂದರೆ ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ಮಾತ್ರವಾಗಿತ್ತು.
ಆದರೆ ಈ 2014ರ ನಂತರದ ವರ್ಷಗಳಲ್ಲಿ ನಾನು ಎದುರಿಸಿದ ಹಲವು ಸಮಸ್ಯೆಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಈಗಲೂ ಅದೇ ಸಿಟ್ಟು ಉಳಿದುಕೊಂಡಿದ್ದರೂ ಸಹ, ನನ್ನ ಅನುಭವದ ಅರಿವು ವಿಸ್ತರಿಸಿದೆ. ಭ್ರಷ್ಟಾಚಾರದಷ್ಟೇ ಕೆಲವು ಮುಖ್ಯವಾದ ಸಮಸ್ಯೆಗಳನ್ನು ನೇರವಾಗಿ ಹಾಗೂ ಕೆಲವನ್ನು ಪರೋಕ್ಷವಾಗಿ ನಾನು ಅನುಭವಿಸಿದ್ದೇನೆ. ಕೆಲವೊಂದನ್ನು ತುಂಬಾ ಹತ್ತಿರದಿಂದ ಗಮನಿಸಿದ್ದೇನೆ.
ಅದರಲ್ಲಿ ತುಂಬಾ ಮುಖ್ಯ ಎಂದು ಅನಿಸಿದ ಕೆಲವು ಅಂಶಗಳು,
- ನಗರಕ್ಕಿಂತ ಹೆಚ್ಚಾಗಿ ಇತರ ಪ್ರದೇಶಗಳಲ್ಲಿ ಹಿಂದಿ ಹೇರಿಕೆ, ಮುಖ್ಯವಾಗಿ ಬ್ಯಾಂಕಿಂಗ್ ಹಾಗು ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಇಲ್ಲದಿರುವುದು. (ಕನ್ನಡ ಪರ ಹೋರಾಟಗಾರರ ಒತ್ತಡ ಹಾಗು ಹೋರಾಟದ ಕಾರಣಗಳಿಂದಾಗಿ ಕೆಲವೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಇತ್ತೀಚೆಗೆ ಅವಕಾಶ ಕಲ್ಪಿಸಲಾಗಿದ್ದರೂ ಸಹ ಹಿಂದಿ ಹೇರಿಕೆಯ ಸಮಸ್ಯೆ ಇನ್ನೂ ಜೀವಂತವಾಗಿಯೇ ಇದೆ.
- ಮತೀಯ ಗೂಂಡಾಗಿರಿ ಹೆಚ್ಚಾಗಿರುವುದು, ಸಾಮರಸ್ಯದ ಬೀಡಾಗಿದ್ದ ಕನ್ನಡ ನಾಡಿನಲ್ಲಿ ಮತೀಯ ದ್ವೇಷ, ಧರ್ಮ ಧರ್ಮದ ನಡುವೆ ಹಿಂದೆಂದಿಗಿಂತಲೂ ಅಸಹನೆ ಹೆಚ್ಚಾಗಿರುವುದು.
- ಶಿಕ್ಷಣದ ವ್ಯಾಪಾರೀಕರಣ ಮಿತಿಮೀರಿರುವುದು.
4.ಪ್ರಬಲ ಸ್ಥಳೀಯ ನಾಯಕತ್ವದ ಕೊರತೆಯಿಂದಾಗಿ,
ದೇಶಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿದ್ದರೂ ಸಹ ರಾಜ್ಯ ದಿಲ್ಲಿ ಕೇಂದ್ರಿತ ಆಡಳಿತಗಾರರ ಪಾಲಿಗೆ ಲೆಕ್ಕಕ್ಕಿಲ್ಲದಂತಿರುವುದು. - ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿರುವುದು. ಅತ್ತ ಉತ್ಪಾದಕನಿಗು ಲಾಭವಿಲ್ಲಾ, ಇತ್ತ ಗ್ರಾಹಕನಿಗೂ ಅನುಕೂಲವಿಲ್ಲ. ಮಧ್ಯದಲ್ಲಿರುವವರ ಗಳಿಕೆಯಲ್ಲಿ ಮಾತ್ರ ಹೆಚ್ಚಳ.
- ನಿರುದ್ಯೋಗ. ಪದವಿ ಪಡೆದವರಿಗೆ ಸ್ಥಳೀಯವಾಗಿ ಜೀವನ ರೂಪಿಸಿಕೊಳ್ಳಲು ನಿರ್ಧಿಷ್ಟ ಯೋಜನೆಗಳು ಇಲ್ಲದಿರುವುದು.
- ಟೋಲ್ ನೆಪದಲ್ಲಿ ಲೂಟಿ. ಸರಿಯಾದ ಸರ್ವೀಸ್ ರಸ್ತೆಗಳನ್ನು ಒದಗಿಸದೆ ಬಲವಂತವಾಗಿ ಹೆದ್ದಾರಿಗಳನ್ನೇ ಬಳಸುವಂತೆ ಒತ್ತಡ ಹೇರಿಕೆ.
- ಸರ್ಕಾರಿ ಶಾಲೆಗಳಿಗೆ ಸೂಕ್ತ ಸೌಲಭ್ಯ, ಪಠ್ಯ, ಸಾಮಾಗ್ರಿ, ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸದೆ, ಖಾಸಗಿಯತ್ತ ನೂಕಲು, ಸರ್ಕಾರಿ ಶಾಲೆಗಳನ್ನು ಮುಚ್ಚಿಸುವ ಹುನ್ನಾರ.
- ಮೆಡಿಕಲ್ ಮಾಫಿಯಾಗಳು. ಅವರ ಹಗರಣಗಳು.
- ವಾಕ್ ಸ್ವಾತಂತ್ರ್ಯವನ್ನು ಕಸಿಯುವ ಹುನ್ನಾರಗಳು. ಅನ್ಯಾಯದ ಪರ ಧ್ವನಿ ಎತ್ತುವವರನ್ನು ದಮನಿಸಲು ಪ್ರಯತ್ನಿಸಿರುವುದು. Article 19ರ ಸ್ಪಷ್ಟ ಉಲ್ಲಂಘನೆಗಳು.
- ಸರ್ಕಾರದ ಅಧಿಕಾರದ ದುರಪಯೋಗ, ಅಹಂಕಾರ, ದ್ವೇಷ ಭಾಷಣಗಳು.
- ಕೊರೋನಾ ಕಾಲದ ಅದ್ವಾನಗಳು. ಏಕಾಏಕಿ ಲಾಕ್‌ಡೌನ್ ಮಾಡಿ, ಬಡವರು, ಕಾರ್ಮಿಕರು ಸಾವಿರಾರು ಕಿಮೀ ನಡೆಯುವಂತೆ ಮಾಡಿದ್ದು, ಆ ನಡಿಗೆಯಲ್ಲಿ ಆದ ಸಾವುಗಳು, ರಸ್ತೆಯಲ್ಲಿ ಕೂರಿಸಿ ಅಮಾನವೀಯವಾಗಿ ಅವರ ಮೇಲೆ ಔಷದಿ ಸಿಂಪಡಿಸಿದ್ದು. ಆಕ್ಸಿಜನ್ ಕೊರತೆಯಿಂದ ಆದ ಸಾವುಗಳು. ಲಾಕ್‌ಡೌನ್ ನೆಪದಲ್ಲಿ ಅಲ್ಪಸಂಖ್ಯಾತರು, ಅಸಹಾಯಕರನ್ನು ಅಮಾನವೀಯವಾಗಿ ರಸ್ತೆಯಲ್ಲಿ ಥಳಿಸಿದ್ದು.
- ರೈತರ ಮೇಲಿನ ಹಲ್ಲೆಗಳು.
ಇನ್ನೂ ಹಲವು ಅಂಶಗಳು, ಎಲ್ಲವೂ ನೆನಪಾಗುತ್ತಿವೆ. ಈ ಎಲ್ಲವನ್ನೂ ಮನಸ್ಸಲ್ಲಿ ಇರಿಸಿಕೊಂಡು ನಾಳೆ ನನ್ನ ಹಕ್ಕನ್ನು ಚಲಾಯಿಸುತ್ತೇನೆ.
ನೀವೂ ನಿಮ್ಮ ಕಳೆದ ಐದು ವರ್ಷಗಳನ್ನು, ನಿಮ್ಮ ಸುತ್ತಮುತ್ತಲಿನ ನಿಮ್ಮ ಸಮಾಜವನ್ನು ಒಮ್ಮೆ ಮಾನವೀಯ ದೃಷ್ಟಿಯಿಂದ ಗಮನಿಸಿ. ನಿಮಗೆ ಸರಿ ಎನಿಸಿದಂತೆ, ಓಟು ಮಾಡಿ. ಆದರೆ ತಪ್ಪದೆ ಓಟು ಮಾಡಿ.
ವಿಶೇಷ ಸೂಚನೆ : ಕರ್ನಾಟಕದ ಚುನಾವಣೆಯಲ್ಲಿ ಹಲವು ಪಕ್ಷಗಳು ಚುನಾವಣೆಗೆ ಸ್ಪರ್ಧಿಸಿವೆ. ನಾನು ಯಾವುದೇ ಪಕ್ಷದ ಪ್ರಚಾರಕನಲ್ಲಾ. ಯಾವ ವ್ಯಕ್ತಿ-ಪಕ್ಷಕ್ಕೆ ಓಟು ಹಾಕಬೇಕು ಎಂಬುದನ್ನೇ ಓಟು ಹಾಕುವ ನೀವೆ ನಿರ್ಧರಿಸಿ. ನಿಮ್ಮ ಮತ ನಿಮ್ಮ ಹಕ್ಕು. ಇದು ಪ್ರಜಾಪ್ರಭುತ್ವದ ದೇಶ.
ಸಂವಿಧಾನದ Article 19 ರ ಅನ್ವಯ ನನ್ನ ಅನಿಸಿಕೆಗಳನ್ನು ಸಾರ್ವಜನಿಕವಾಗಿ ಹೇಳುವ ಹಕ್ಕು ನನಗಿದೆ.
– ಮಂಸೋರೆ, ನಿರ್ದೇಶಕ



