ಬೆಂಗಳೂರು: ದೇಶದ ಗಮನ ಸೆಳೆದಿರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಭಾರತದ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಏಕ ಕಾಲದಲ್ಲಿ ನಾಳೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.
ಚುನಾವಣಾ ಸಿಬ್ಬಂದಿ ಆಯಾ ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ನಿಗದಿತ ಮತಗಟ್ಟೆ ಕೇಂದ್ರಗಳಿಗೆ ವಿದ್ಯುನ್ಮಾನ ಮತಯಂತ್ರ ಹಾಗೂ ಇತರೆ ಸಾಮಗ್ರಿಗಳೊಂದಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು.
ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭೆ ಚುನಾವಣೆ ಕಣದಲ್ಲಿ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಎಎಪಿ, ಸಿಪಿಐಎಂ ಹಾಗೂ ಪಕ್ಷೇತರ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಾಳೆ ಮತದಾರರು ಮತ ಚಲಾಯಿಸುವ ಮೂಲಕ ನಿರ್ಧರಿಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವರಾದ ಗೋವಿಂದ ಕಾರಜೋಳ, ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಆರ್.ಅಶೋಕ್, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಬಂಡೆಪ್ಪ ಕಾಶಂಪೂರ್, ಪ್ರಿಯಾಂಕ ಖರ್ಗೆ, ಕೃಷ್ಣ ಭೈರೇಗೌಡ, ರಮೇಶ್ ಕುಮಾರ್ ಸೇರಿದಂತೆ ಅನೇಕರು ಕಣದಲ್ಲಿದ್ದಾರೆ.
ಮತದಾನದ ಹಿನ್ನೆಲೆಯಲ್ಲಿ ನಾಳೆ ಆಯಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿನ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ-ಕಾಲೇಜುಗಳಿಗೆ, ವಿವಿಧ ಸಂಘ-ಸಂಸ್ಥೆಗಳಿಗೆ ಮತ್ತು ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ಖಾಸಗಿ ಸಂಸ್ಥೆಗಳಿಗೆ ತುರ್ತು ಸೇವೆಗಳನ್ನು ಹೊರತುಪಡಿಸಿ ಸರ್ಕಾರವು ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ.
ಮತಗಟ್ಟೆಗಳಲ್ಲಿ ಫೋಟೋ ತೆಗೆಯುವುದು, ಮೊಬೈಲ್ ತೆಗೆದುಕೊಂಡು ಹೋಗುವುದು, ಕ್ಯಾಮೆರಾ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಆಯೋಗ ಕಟ್ಟುನಿಟ್ಟಾಗಿ ನಿಷೇಧ ಹೇರಿದೆ.
ವ್ಯಾಪಕ ಭದ್ರತೆ: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಮುಕ್ತ ಹಾಗೂ ಶಾಂತಿಯುತವಾಗಿ ಮತದಾನ ನಡೆಸಲು ರಾಜ್ಯದಾದ್ಯಂತ 2.2 ಲಕ್ಷ ಪೊಲೀಸರನ್ನು ನಿಯೋಜಿಸುವ ಮೂಲಕ ಹಿಂದೆಂದೂ ಕೈಗೊಳ್ಳದಷ್ಟು ಅಭೂತಪೂರ್ವ ಭದ್ರತೆಯನ್ನು ಕೈಗೊಳ್ಳಲಾಗಿದೆ.
ರಾಜ್ಯದೆಲ್ಲೆಡೆ ಮತದಾನಕ್ಕೆ 55,282 ಮತಗಟ್ಟೆಗಳನ್ನು ತೆಗೆಯಲಾಗಿದೆ. ಇದರಲ್ಲಿ 11,617 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿದ್ದು ಅವುಗಳಿಗೆ ಪೊಲೀಸ್ ಸಿಬ್ಬಂದಿಯ ಜತೆಗೆ ಹೆಚ್ಚುವರಿಯಾಗಿ ಕೇಂದ್ರ ಅರೆ ಸೇನಾ ಪಡೆ( ಸಿಎಪಿಎಫ್) ಕಂಪನಿಗಳನ್ನು ನಿಯೋಜಿಸಲಾಗಿದೆ.
ರಾಜ್ಯದ ಕಮಿಷನರೇಟ್‌ಗಳ ವ್ಯಾಪ್ತಿಯಲ್ಲಿ ಕಮಿಷನರ್‌ಗಳು, ಜಿಲ್ಲೆಗಳಲ್ಲಿ ಎಸ್‌ಪಿಗಳು ಚುನಾವಣಾ ನಿಗಾ ವಹಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಿದ್ದಾರೆ.
ಚುನಾವಣಾ ಭದ್ರತೆಗೆ 304 ಡಿವೈಎಸ್‌ಪಿಗಳು, 991 ಇನ್‌ಸ್ಪೆಕ್ಟರ್‌ಗಳು, 2,610 ಮಂದಿ ಸಬ್ ಇನ್‌ಸ್ಪೆಕ್ಟರ್‌ಗಳು, 5,803 ಎಎಸ್‌ಐಗಳು, 46,421 ಮುಖ್ಯಪೇದೆಗಳು, 27,990 ಮಂದಿ ಹೋಮ್ಗಾರ್ಡ್‌ಗಳು ಸೇರಿ 84,119 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅವಶ್ಯಕತೆಗೆ ಅನುಗುಣವಾಗಿ ಅಧಿಕಾರಿಗಳು ಸಿಬ್ಬಂದಿ ಕೊರತೆಯನ್ನು ಸರಿದೂಗಿಸಲು ಹೊರ ರಾಜ್ಯದಿಂದ 8,500 ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಗೂ ಗೃಹ ರಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ಎರವಲು ಪಡೆದಿದ್ದಾರೆ. ಇದರ ಜತೆಗೆ 650 ಸಿಆರ್ ಪಿಎಫ್ ಕಂಪನಿಗಳ ಜತೆಗೆ ರಾಜ್ಯ ಸಶಸ್ತ್ರ ಮಿಸಲು ಪಡೆಯನ್ನು ನಿಯೋಜಿಸಲಾಗಿದೆ.
2930 ಸೆಕ್ಟರ್ ಮೊಬೈಲ್: ಚುನಾವಣೆಗೆ 2930 ಸೆಕ್ಟರ್ ಮೊಬೈಲ್‌ಗಳು ಕಾರ್ಯಾಚರಣೆಯಲ್ಲಿದ್ದು, ಒಂದೊಂದು ಸೆಕ್ಟರ್‌ಗೆ 20 ಬೂತ್‌ಗಳನ್ನು ನಿಗದಿಪಡಿಸಲಾಗಿದೆ. ಇಲ್ಲಿ ಪಿಎಸ್‌ಐ, ಎಎಸ್‌ಐ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿರಂತರ ಗಸ್ತು ನಡೆಸಲು ಮೀಸಲಿರಿಸಲಾಗಿದೆ.
ಸೆಕ್ಟರ್ ಮೊಬೈಲ್‌ಗಳ ಮೆಲ್ವಿಚಾರಣೆಗೆ 749 ಮೇಲ್ವಿಚಾರಣಾ ಮೊಬೈಲ್‌ಗಳಿದ್ದು, ಅವುಗಳ ಉಸ್ತುವಾರಿಗೆ ಓರ್ವ ಪೊಲೀಸ್ ಇನ್‌ಸ್ಪೆಕ್ಟರ್, 4 ಸೆಕ್ಟರ್ ಮೊಬೈಲ್ ಮೇಲ್ವಿಚಾರಣೆಗೆ ಓರ್ವ ಡಿವೈಎಸ್‌ಪಿ ನೇಮಿಸಲಾಗಿದೆ.
700 ಚೆಕ್‌ಪೋಸ್ಟ್: ಚುನಾವಣಾ ಅಕ್ರಮಗಳನ್ನು ತಡೆಯಲು 700ಕ್ಕೂ ಹೆಚ್ಚು ವಿಚಕ್ಷಣಾ ದಳಗಳನ್ನು ನೇಮಿಸಿ ಸೂಕ್ಮ ಪ್ರದೇಶಗಳನ್ನು ಒಳಗೊಂಡತೆ ಅಂತರಾಜ್ಯ, ಅಂತರ್ ಜಿಲ್ಲಾ ಗಡಿ ಭಾಗಗಳಲ್ಲಿ 700ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 30,418 ಭದ್ರತಾ ಪ್ರಕರಣಗಳನ್ನು ದಾಖಲಿಸಿ ಅವುಗಳಲ್ಲಿ ಸನ್ನಡತೆಯ ಆಧಾರದ ಮೇಲೆ 53,406 ವ್ಯಕ್ತಿಗಳನ್ನು ಬಾಂಡ್ ಒವರ್ ಮಾಡಲಾಗಿದೆ. ಚುನಾವಣೆ ವೇಳೆ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ 714 ವ್ಯಕ್ತಿಗಳ ವಿರುದ್ಧ ಗಡಿಪಾರು ಕಾಯ್ದೆಯಡಿ ಕ್ರಮ ಕೈಗೊಂಡು 68 ಹ್ಯವಾಸಿ ಅಪರಾಧಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.
650 ಸಿಎಪಿಎಫ್ ಕಂಪನಿ: ಚುನಾವಣಾ ಕರ್ತವ್ಯಕ್ಕೆ ನೇಮಿಸಲಾದ ಒಟ್ಟು 650 ಸಿಎಪಿಎಫ್ ಕಂಪನಿಗಳಲ್ಲಿ 101 ಸಿಆರ್‌ಪಿಎಫ್, 108 ಬಿಎಸ್‌ಎಫ್, 75 ಸಿಐಎಸ್‌ಎಫ್, 70 ಐಟಿಬಿಪಿ, 75 ಎಸ್‌ಎಸ್‌ಬಿ, 35 ಆರ್‌ಪಿಎಫ್ ಹಾಗೂ 186 ಎಸ್‌ಎಪಿ ಕಂಪನಿಗಳಿವೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.



