ಪ್ರಸ್ತುತ 13ರವರೆಗೆ ಕಾಯುವುದೇ ಅತ್ಯಂತ ಸೂಕ್ತ ಆಯ್ಕೆ

3 years ago

ಎಕ್ಸಿಟ್ ಪೋಲ್ ಗಳ ಅಂದಾಜುಗಳನ್ನು ಒಂದು ನಿಮಿಷ ಪಕ್ಕಕ್ಕಿಡಿ. ಅವು ಜನರ ಮನಸ್ಸನ್ನು ಒಂದು ಉದ್ರೇಕಿತ ಸ್ಥಿತಿಯಲ್ಲಿ ಇಡುವುದಕ್ಕೆ ಅಷ್ಟೇ ಹುಟ್ಟಿಕೊಂಡ ಕಾರ್ಪೊರೇಟ್ ಮಾಧ್ಯಮ ಪ್ರೇರಿತ ಸಮೀಕ್ಷೆಗಳು. ಅವುಗಳಿಂದ ಆ ಮಾಧ್ಯಮಗಳಿಗೆ ಅನುಕೂಲವೇ ಹೊರತು ಜನರಿಗಲ್ಲ.

ಫಲಿತಾಂಶದವರೆಗಾದರೂ ಜನ ತಮ್ಮ ಕುತೂಹಲಗಳನ್ನು ತಮ್ಮೊಳಗೇ ಅಥವಾ ತಮ್ಮ ಆಪ್ತರೊಳಗೇ ಮೆಲುಕು ಹಾಕುವ ಶಾಂತಿಯುತ, ಆರೋಗ್ಯಕರ ಅವಕಾಶಗಳನ್ನು ಈ ಎಕ್ಸಿಟ್ ಪೋಲ್ ಗಳು ಕಿತ್ತುಕೊಂಡಿವೆ. ಚುನಾವಣಾ ಪೂರ್ವ ಸಮೀಕ್ಷೆಗಳು ಕೆಲವು ಸಾರಿ ಜನ ನಿರ್ಧರಿಸುವುದಕ್ಕೆ ಹಲವು ಸಾಧಾರ ಆಯ್ಕೆಗಳನ್ನು ನೀಡಬಹುದು. ಆದರೆ ಓಟು ಮಾಡಿದ ಜನರು ಅವರವರ ಬೌದ್ಧಿಕ ಕಸರತ್ತಿಗೆ ತೊಡಗುವ ಮೊದಲೇ ಈ ಚುನಾವಣಾ ನಂತರದ ಸಮೀಕ್ಷೆಗಳು ಹಸಿಬಿಸಿಯಾಗಿ ಹೊರಬಿದ್ದು ಜನರ ಕ್ರಿಯಾಶೀಲತೆಗೆ, ತೃಣಮೂಲದಲ್ಲಿ ಹುಟ್ಟುವ ವೈವಿಧ್ಯಮಯ ಚರ್ಚೆಗಳಿಗೆ ಪೆಟ್ಟುನೀಡುತ್ತವೆ. ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಅವರ ಸಕ್ರಿಯ ಸಹಭಾಗಿತ್ವವನ್ನು ಕಸಿಯುತ್ತವೆ.

ಇಲ್ಲ, ಎಕ್ಸಿಟ್ ಪೋಲ್ ಗಳು ಮಾಡುವ ಮತ್ತೊಂದು ಎಡವಟ್ಟು ಏನೆಂದರೆ ಅವು ಇಂತಿಂಥಾ ಪಕ್ಷಗಳು ಇಷ್ಟಿಷ್ಟು ಸೀಟುಗಳನ್ನು ಗೆಲ್ಲಬಹುದು ಎಂದು ಅಂದಾಜನ್ನು ಹೊರಹಾಕುತ್ತವೆ. ಅಧಿಕೃತ ಫಲತಾಂಶಗಳಿಗೆ ಮುನ್ನವೇ ನೀಡುವ ಈ ಊಹಾಪೋಹ ಅಂದಾಜುಗಳು ಬೇಕಾಗಿಯೇ ಇಲ್ಲದ ತಾತ್ಕಾಲಿಕ ಮಧ್ಯಂತರ ತುಮುಲಗಳನ್ನು ಹುಟ್ಟಿಸುತ್ತವೆ. ಫಲಿತಾಂಶಗಳಿಗೂ ಈ ಅಂದಾಜುಗಳಿಗೂ ಸಂಬಂಧವಿಲ್ಲದೇ ಹೋಗಬಹುದು. ಸಾಮಾಜಿಕ ಅಧ್ಯಯನ, ಸ್ಟ್ಯಾಟಿಸ್ಟಿಕ್ಸ್ ಮುಂತಾದ ಜ್ಞಾನಶಾಖೆಗಳ ಪರಿಣಿತರ ಮತ್ತು ವಿದ್ಯಾರ್ಥಿಗಳ ಅಧ್ಯಯನಶೀಲತೆಗೆ ಈ ಸಮೀಕ್ಷೆಗಳು ನೆರವಾಗಬಹುದು. ಅಕೆಡೆಮಿಕ್ ಹಿತದೃಷ್ಟಿಯಿಂದ ಅವನ್ನು ಕೈಗೊಂಡರೂ ಸಹ, ಅವನ್ನು ಜಗಜ್ಜಾಹೀರುಗೊಳಿಸುವ ಅಗತ್ಯವೇನಿದೆ – ಕಾರ್ಪೊರೇಟ್ ಮಾಧ್ಯಮಗಳ ಹಿತವನ್ನು ಹೊರತುಪಡಿಸಿ? ಬದುಕನ್ನು ಸರಳವಾಗಿಸುವ ಬದಲಿಗೆ ಸಂಕೀರ್ಣಗೊಳಿಸುವ ಪ್ರಯತ್ನಗಳು ಇವು.

ಈ ಸಮೀಕ್ಷಾ ಅಂದಾಜುಗಳು ಜನರಲ್ಲಿ ಚರ್ಚೆಯನ್ನು ಹುಟ್ಟಿಹಾಕುತ್ತವೆ, ಸಹಭಾಗಿತ್ವವನ್ನು ಹೆಚ್ಚಿಸುತ್ತವೆ ಎಂದು ಕೆಲವರು ಹೇಳಿದರೂ, ಅವು ಎಲ್ಲಿಂದಲೋ ಬಂದ, ಯಾವ ಆಧಾರ ಅಥವಾ ಪರಿಣಿತಿಯ ಖಾತ್ರಿಯೂ ಇಲ್ಲದ, ಯಾವುದೋ ಒಂದು ಅಭಿಪ್ರಾಯದ ಮೇಲೆಯೇ ಹೊರತು ಜನರೊಳಗಿಂದ ಹುಟ್ಟಿದವಂತೂ ಅಲ್ಲವಲ್ಲ. ಇಂಥಾ ಸಮೀಕ್ಷೆಗಳ ಕಾಟವಿಲ್ಲದ ಗ್ರಾಮ ಪಂಚಾಯ್ತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳ ಚುನಾವಣೆಗಳ ನಂತರ ನಡೆಯುವ ಜನಸಾಮಾನ್ಯರ ಗುಂಪು ಚರ್ಚೆಗಳಲ್ಲಿ ಭಾಗವಹಿಸಿದ್ದರೆ ಆ ರಂಗು, ಅವುಗಳ ಮಹತ್ವ ತಿಳಿದಿರುತ್ತದೆ.

ಜನರ ಮೇಲೆ ಮಾಡುವ ಈ ಒತ್ತಾಯದ ಅಭಿಪ್ರಾಯ ಹೇರಿಕೆ ದೇಶದ ಗ್ರಾಸ್ ಡೊಮೆಸ್ಟಿಕ್ ಇಂಟೆಲಿಜೆನ್ಸ್ ಮತ್ತು ಗ್ರಾಸ್ ಡೆಮಾಕ್ರಟಿಕ್ ಪಾರ್ಟಿಸಿಪೇಷನ್ ಅನ್ನು ಉತ್ತೇಜಿಸುವ ದೃಷ್ಟಿಯಿಂದ ಎಕ್ಸಿಟ್ ಪೋಲ್ ಗಳನ್ನು ನಿಷೇಧಿಸುವುದೇ ಸೂಕ್ತ ಎಂತಲೂ ಅನಿಸುತ್ತದೆ. ಆದರೆ ಕಾರ್ಪೊರೇಟ್ ನಿರ್ದೇಶನವನ್ನು ಬದುಕಿನ ಎಲ್ಲ ಆಯಾಮಗಳಿಗೂ ಒಗ್ಗಿಸುತ್ತಿರುವುದು ಬಂಡವಾಳಶಾಹೀ ಆರ್ಥಿಕತೆಯ ಗುರಿ. ಅದಕ್ಕೆ ನಾವು ಮಣಿಯಬಾರದು, ಅಷ್ಟೇ. ಹಾಗೂ ಮಣಿದರೆ, ಒಂದು ದಿನ ‘ಹೌದು ನಂದಿನಿಗಿಂತ ಅಮುಲ್ ಉತ್ತಮ’ ಎನ್ನುವ ಹೇರಿಸಿಕೊಂಡ ಅಭಿಪ್ರಾಯಕ್ಕೂ ನಾವು ಬಂದೇವು.

ಪ್ರಸ್ತುತ 13ರವರೆಗೆ ಕಾಯುವುದೇ ಅತ್ಯಂತ ಸೂಕ್ತ ಆಯ್ಕೆ.

– ಕೇಸರಿ ಹರವೂ, ನಿರ್ದೇಶಕ

Leave a Reply