ಅಪೂರ್ಣ ಮಾಹಿತಿ ತಂದ ಅಧಿಕಾರಿಗಳಿಗೆ ಸಂತೋಷ್ ಲಾಡ್ ತರಾಟೆ

2 years ago

ಜಿಲ್ಲಾ ಪಂಚಾಯತ ತ್ರೈಮಾಸಿಕ ಕೆಡಿಪಿ ಸಭೆ

ರೈತರ ಬಗ್ಗೆ ಕಳಕಳಿ ಇರಲಿ; ಜವಾಬ್ದಾರಿಯಿಂದ ಉತ್ತರಿಸಲು ಖಡಕ್ ನಿರ್ದೇಶನ ನೀಡಿದ ಸಚಿವ

ಧಾರವಾಡ: ಕೆಡಿಪಿ ಸಭೆಯು, ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಆಧ್ಯತೆ ಮೇಲೆ ಚರ್ಚೆ ಆಗಬೇಕು. ಅಧಿಕಾರಿಗಳು ಸಭೆಗೆ ಅಪೂರ್ಣ ಮಾಹಿತಿ ತಂದರೆ, ಸಭೆಯ ಉದ್ದೇಶ ಈಡೆರುವುದಿಲ್ಲ. ರೈತರ ಬಗ್ಗೆ, ಬಡವರ ಬಗ್ಗೆ ಕಳಕಳಿ ಇರಬೇಕು. ಅಧಿಕಾರಿಗಳು ಜವಾಬ್ದರಿಯಿಂದ ಸಭೆಗೆ ಸರಿಯಾದ ಮಾಹಿತಿ ಮತ್ತು ಉತ್ತರ ನೀಡಬೇಕೆಂದು ಸಚಿವ ಸಂತೋಷ್ ಲಾಡ್ ಖಡಕ್ ಎಚ್ಚರಿಕೆ ನೀಡಿದರು.

ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2024-25 ನೇ ಸಾಲಿನ ಜೂನ್ ಅಂತ್ಯಕ್ಕೆ ಕೊನೆಗೊಂಡ 1 ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ, ಮಾರುಕಟ್ಟೆ, ತೋಟಗಾರಿಕೆ, ರೇಷ್ಮೆ , ಪಶುಪಾಲನಾ, ನೀರಾವರಿ ಇಲಾಖೆಗಳ ಅಧಿಕಾರಿಗಳು ಕೆಡಿಪಿ ಸಭೆಗೆ ಪೂರ್ಣ ಮಾಹಿತಿಯೊಂದಿಗೆ ಬರಬೇಕು. ವಾಸ್ತವಿಕ ವರದಿ ನೀಡುವದರಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ ಎಂದರು.

ಲೋಕೋಪಯೋಗಿ, ನೀರಾವರಿ ಮತ್ತು ಇತರ ಪ್ರಮುಖ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ಹಾಜರಾತಿ ಖಾತರಿಗೆ ಪೇಸ್ ರೀಡಿಂಗ್ ಆನ್ ಲೈನ್ ಅಟೆಂಡೆನ್ಸ್ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಎಲ್ ಆ್ಯಂಡ್ ಟಿ ಕಂಪನಿಯಿಂದ ಜಲ್ ಜೀವನ ಮಿಷನ್ ಯೋಜನೆ ತೃಪ್ತಿಕರವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ನಿಗದಿತ ಅವಧಿಯಲ್ಲಿ ಯೋಜನೆ ಮುಗಿಸದಿದ್ದರೆ ಮತ್ತು ಪ್ರತಿ ಹಂತದ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿದ್ದರೆ ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯ ಶಾಸಕರ ಅಧ್ಯಕ್ಷತೆಯ ಫಲಾನುಭವಿ ಆಯ್ಕೆಯ ವಿವಿಧ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸವಂತೆ ಅಧಿಕಾರಿಗಳಿಗೆ ತಿಳಿಸಿದರು.

ಹೆಸರು ಖರೀದಿ: ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರದಲ್ಲಿ ರೈತರ ನೋಂದಣಿ ಆರಂಭವಾಗಿದ್ದು, ಸುಮಾರು 3 ಸಾವಿರ ರೈತರು ತಮ್ಮ ಹೆಸರು ನೋಂದಾಯಿಸಿದ್ದಾರೆ. ನೋಂದಣಿ ಪ್ರಗತಿಯಲ್ಲಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಸರುಕಾಳುಗಳಲ್ಲಿ ತೇವಾಂಶ ಇದೆ. ಗ್ರೇಡಿಂಗ್ ಬಂದ ತಕ್ಷಣ ಖರೀದಿ ಆರಂಭಿಸಲಾಗುತ್ತದೆ ಎಂದು ಕೃಷಿ ಮಾರುಕಟ್ಟೆ ಇಲಾಖೆ ಉಪ ನಿರ್ದೇಶಕ ಲಮಾಣಿ ತಿಳಿಸಿದರು.

ಅಗತ್ಯ ಗೊಬ್ಬರ, ಬೀಜ ಇದೆ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತ್ರೊಳ್ಳಿ ಮಾತನಾಡಿ, ಹೆಸರು, ಗೋವಿನ ಜೋಳ, ಉದ್ದು ಸೇರಿ ವಿವಿಧ ಬೆಳೆಗಳ ಕಟಾವು ನಡೆದಿದೆ. ಹಿಂಗಾರಿಗೆ ಅಗತ್ಯ ಬೀಜ, ರಸಗೊಬ್ಬರ ದಾಸ್ತಾನು ಇದೆ ಎಂದು ಹೇಳಿದರು.

ಪಶುಪಾಲನೆ ಇಲಾಖೆ ಪ್ರಗತಿ: ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ ಮಾತನಾಡಿ, ಇಲಾಖೆ ಯೋಜನೆಗಳು ಪ್ರಗತಿಯಲ್ಲಿವೆ. ಪಶುಪಾಲನೆ ಹೆಚ್ಚಳಕ್ಕೆ ಅಗತ್ಯ ಜನಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಜಲ ಜೀವನ ಮಿಷನ್: ಜಲ್ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ 249 ಗ್ರಾಮಗಳಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ಆಯಾ ಗ್ರಾಮ ಪಂಚಾಯತಿಗಳಿಗೆ ವಹಿಸಲಾಗಿದೆ. ಉಳಿದ ಗ್ರಾಮ ಪಂಚಾಯತಗಳಿಗೆ ನೀರು ಸರಬರಾಜು ವ್ಯವಸ್ಥೆ ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಇಂಜನೀಯರ ಜಗದೀಶ ತಿಳಿಸಿದರು.

ಶಾಶ್ವತ ಖರೀದಿ ಕೇಂದ್ರ: ರೈತರಿಗೆ ಅನುಕೂಲವಾಗುವಂತೆ ಬೆಳೆ ಕಟಾವು ಹಂತದಲ್ಲೇ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಶಾಶ್ವತವಾಗಿ ತೆರೆಯುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು. 

ವಸತಿ ನಿಲಯಗಳು ಆರಂಭಕ್ಕೆ ಸೂಚನೆ: ರಾಜ್ಯ ಸರಕಾರ ಜಿಲ್ಲೆಗೆ 8 ಅಲ್ಪಸಂಖ್ಯಾತರ ಹಾಗೂ 14 ಹಿಂದುಳಿದ ವರ್ಗಗಳ ವಸತಿ ನಿಲಯಗಳನ್ನು ಮಂಜೂರಿ ಮಾಡಿದ್ದು, ಶೀಘ್ರವೇ ವಸತಿ ನಿಲಯಗಳ ಆರಂಭಕ್ಕೆ ಕ್ರಮ ವಹಿಸುವಂತೆ ಸಂತೋಷ್ ಲಾಡ್ ತಿಳಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರಕಾರಿ ಜಮೀನುಗಳನ್ನು ಗುರುತಿಸಿ ಅವುಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಕೆರೆ, ಗೋಮಾಳ ಅತಿಕ್ರಮಣ ಆಗದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಶಾಸಕರಾದ ಎನ್.ಎಚ್.ಕೋನರಡ್ಡಿ, ಎಂ.ಆರ್.ಪಾಟೀಲ ಮಾತನಾಡಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪೆÇಲೀಸ್ ಆಯುಕ್ತ ಎನ್.ಶಶಿಕುಮಾರ, ಗ್ಯಾರಂಟಿ ಯೋಜನಾ ಪ್ರಾಧಿಕಾರದ ಬೆಳಗಾವಿ ವಿಭಾಗದ ಅಧ್ಯಕ್ಷ ಎಸ್.ಆರ್. ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ವೇದಿಕೆಯಲ್ಲಿ ಇದ್ದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲ ಅಭಿಯಂತರ ಆರ್.ಎಂ.ಸೊಪ್ಪಿಮಠ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಪಾಟೀಲ, ಜಿಲ್ಲಾ ಪಂಚಾಯತ ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply