ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಪೈಕಿ ಬಹು ಚರ್ಚಿತ ಗೃಹಲಕ್ಷ್ಮಿ ಯೋಜನೆಗೆ ಇದೇ 17ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಯೋಜನೆಯ ಉದ್ಘಾಟನೆಗೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಹಿರಿಯ ನಾಯಕರನ್ನು ಆಹ್ವಾನಿಸಲಾಗಿದೆ. ಸೋಮವಾರ ಸಂಜೆ 5 ಗಂಟೆಗೆ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ನೊಂದಣಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಈ ಯೋಜನೆಯಿಂದ ರಾಜ್ಯದ 1.28 ಕೋಟಿ ಕುಟುಂಬಗಳಿಗೆ ಅನುಕೂಲವಾಗುವ ಈ ಯೋಜನೆಯ ನೋಂದಣಿ ಆರಂಭವಾಗುತ್ತಿದ್ದು, ಆ.16 ಅಥವಾ 17ರಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ತಿಳಿಸಿದರು.
ಕುಟುಂಬದ ಯಜಮಾನಿಗೆ ಮಾಸಿಕ 2000 ರೂ.ಗಳನ್ನು ಹಾಕುವ ಈ ಯೋಜನೆಗೆ ರಾಜ್ಯಾದ್ಯಂತ ಕರ್ನಾಟಕ ಒನ್, ಬೆಂಗಳೂರು- ಒನ್,ಗ್ರಾಮ-ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳಬಹುದು ಎಂದರು.
ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ನಲ್ಲಿ ಮನೆಯ ಯಜಮಾನಿ ಎಂದು ಗುರುತಿಸಲಾಗಿರುವ ಮಹಿಳೆಯರು ನೋಂದಾವಣೆ ಮಾಡಿಕೊಳ್ಳಬಹುದು. ನೋಂದಾವಣೆ ವೇಳೆ ಆಧಾರ್ ಕಾರ್ಡ್ ಮತ್ತು ಪಡಿತರಚೀಟಿಯನ್ನು ಹಾಜರುಪಡಿಸಬೇಕು. ಆಧಾರ್ಗೆ ಸಂಪರ್ಕಗೊಂಡಿರುವ ಮೊಬೈಲ್ನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿರಬೇಕು ಎಂದು ತಿಳಿಸಿದರು.
ನೋಂದಣಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರುತ್ತದೆ. ಸೇವಾಕೇಂದ್ರಗಳಲ್ಲಿ, ಪ್ರಜಾಪ್ರತಿನಿಗಳು, ಮಧ್ಯವರ್ತಿಗಳು ಅಥವಾ ಏಜೆಂಟ್ಗಳು ಫಲಾನುಭವಿಗಳಿಂದ ಹಣ ಕೇಳಿದರೆ ಸಹಾಯವಾಣಿಗಳಿಗೆ ದೂರು ನೀಡಬಹುದು. ಹಣ ಕೇಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಜಾಪ್ರತಿನಿಗಳಾಗಲು ಯಾವುದೇ ಸ್ವಯಂಸೇವಕರು ಮುಂದೆ ಬರಬಹುದು. ಅವರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಪ್ರಜಾಪ್ರತಿನಿಗಳು ಮನೆಯ ಬಾಗಿಲಿಗೆ ಹೋಗಿ ಫಲಾನುಭವಿಗಳನ್ನು ನೋಂದಣಿ ಮಾಡಲಿದ್ದಾರೆ ಎಂದು ತಿಳಿಸಿದರು.
ಸೇವಾ ಕೇಂದ್ರಗಳಿಗೆ ಡಾಟಾ ಎಂಟ್ರಿಗೆ 10 ರೂ. ಮುದ್ರಣಕ್ಕೆ 2 ರೂ.ನಂತೆ ಸರ್ಕಾರ ಶುಲ್ಕ ನೀಡುತ್ತದೆ. ಹೀಗಾಗಿ ಫಲಾನುಭವಿಗಳು ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ. ನೋಂದಣಿ ಪ್ರಕ್ರಿಯೆ ಅಂಗೀಕಾರಗೊಂಡರೆ ಸ್ಥಳದಲ್ಲೇ ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು
ಸದ್ಯಕ್ಕೆ ಸೇವಾ ಕೇಂದ್ರಗಳು ಅಥವಾ ಪ್ರಜಾಪ್ರತಿನಿಗಳ ಬಳಿ ನೋಂದಣಿ ಮಾಡಿಕೊಳ್ಳಬಹುದು. ಸದ್ಯಕ್ಕೆ ನೇರವಾಗಿ ಫಲಾನುಭವಿಗಳೇ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಲ್ಲ. ಒಂದು ವೇಳೆ ಫಲಾನುಭವಿಗಳ ಸಂಖ್ಯೆ ಹೆಚ್ಚಾದರೆ ಮುಕ್ತ ನೋಂದಣಿಗೆ ಅವಕಾಶ ಮಾಡಿಕೊಡಲಾಗುವುದು. ಈ ಯೋಜನೆಯಲ್ಲಿ ಅನರ್ಹ ಫಲಾನುಭವಿಗಳು ನೋಂದಣಿಯಾಗಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಆಧಾರ್ ಕಾರ್ಡ್ ಲಿಂಕ್ ಇಲ್ಲದ ಖಾತೆಗೆ ಹಣ ಹಾಕಬೇಕಾದರೆ ಬದಲಿ ಬ್ಯಾಂಕ್ ಪಾಸ್ಬುಕ್ನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಪಾಸ್ಬುಕ್ನ್ನು ಸಾಫ್ಟ್ವೇರ್ಗೆ ಅಪ್ಲೋಡ್ ಮಾಡಲಾಗುವುದು. ಅದು ಸಿಡಿಪಿಒ ಲಾಗಿನ್ಗೆ ಹೋಗುತ್ತದೆ. ಅದನ್ನು ತಹಸೀಲ್ದಾರ್, ಉಪತಹಸೀಲ್ದಾರ್ ಮತ್ತು ಸಿಡಿಪಿಒಗಳು ಪರಿಶೀಲನೆ ನಡೆಸಲಿದ್ದಾರೆ. ಬ್ಯಾಂಕ್ ಖಾತೆ ಮತ್ತು ಪಡಿತರ ಚೀಟಿಯಲ್ಲಿರುವ ಹೆಸರು ಹೊಂದಾಣಿಕೆಯಾದರೆ ಅದು ಅಂಗೀಕಾರಗೊಳ್ಳುತ್ತದೆ. ಬಳಿಕ ಫಲಾನುಭವಿಗಳಿಗೆ ಅಂಗನವಾಡಿ ಕಾರ್ಯಕರ್ತರ ಮೂಲಕ ಯೋಜನೆಯ ಪ್ರಮಾಣಪತ್ರವನ್ನು ತಲುಪಿಸಲಾಗುವುದು ಎಂದರು.
ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಬೇಕೆಂದಾದರೆ ಬದಲಿ ಪಾಸ್ಬುಕ್ನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಫಲಾನುಭವಿಗಳ ನೋಂದಣಿಗಾಗಿ ಸಮಯ ಮತ್ತು ದಿನಾಂಕವನ್ನು ನಿಗದಪಡಿಸಿ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. ಒಂದು ವೇಳೆ ನಿಗದಿತ ಸಮಯಕ್ಕೆ ಹೋಗಲಾಗದೆ ಇದ್ದರೆ ಸಂಜೆ 5 ಗಂಟೆ ಬಳಿಕ ಅದೇ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು. ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಬೇಕೆಂದಾದರೆ ಬದಲಿ ಪಾಸ್ಬುಕ್ನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಫಲಾನುಭವಿಗಳ ನೋಂದಣಿಗಾಗಿ ಸಮಯ ಮತ್ತು ದಿನಾಂಕವನ್ನು ನಿಗದಪಡಿಸಿ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. ಒಂದು ವೇಳೆ ನಿಗದಿತ ಸಮಯಕ್ಕೆ ಹೋಗಲಾಗದೆ ಇದ್ದರೆ ಸಂಜೆ 5 ಗಂಟೆ ಬಳಿಕ ಅದೇ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಒಂದು ವೇಳೆ ಫಲಾನುಭವಿಗಳನ್ನು ಬದಲಾವಣೆ ಮಾಡಬೇಕಾದರೆ ಪಡಿತರ ಚೀಟಿಯಲ್ಲಿ ಮನೆಯ ಮುಖ್ಯಸ್ಥರ ಹೆಸರನ್ನು ತಿದ್ದುಪಡಿ ಮಾಡಿಸಬೇಕಾಗುತ್ತದೆ ಎಂದು ತಿಳಿಸಿದರು.




