ಗೃಹ ಲಕ್ಷ್ಮಿ ಯೋಜನೆಗೆ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲಾಗಿದೆ:   ಲಕ್ಷ್ಮಿ ಹೆಬ್ಬಾಳ್ಕರ್

3 years ago

#separate #app #prepared #GrihaLakshmi #Yojana #LakshmiHebbalkar

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆಗೆ ಫಲಾನುಭವಿಗಳ ನೊಂದಣಿ ಸೇರಿ ಇತರೆ  ಚಟುವಟಿಕೆಗಳಿಗೆ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲಾಗಿದೆ. ಫಲಾನುಭವಿಗಳ ನೊಂದಣಿಯ ದಿನಾಂಕ ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಧಾನಪರಿಷತ್ ನಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಹೇಮಲತಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈವರೆಗೆ ಗೃಹಲಕ್ಷ್ಮಿ ಯೋಜನೆ ಕಾರ್ಯಗತವಾಗಿಲ್ಲ. ಎರಡು ದಿನದಲ್ಲಿ ಪತ್ರಿಕಾಗೋಷ್ಠಿ ಕರೆದು ಅರ್ಜಿಯನ್ನು ಯಾವ ದಿನಾಂಕದಿಂದ ಸಲ್ಲಿಸಬೇಕು ಎಂಬುದರ ಕುರಿತು ಮಾಹಿತಿಯನ್ನು ನೀಡಲಿದ್ದೇನೆ. ನಾಲ್ಕೈದು ದಿನಗಳಲ್ಲಿ ಇದರ ಆ್ಯಪ್ ಬಿಡುಗಡೆಗಡೆಯಾಗಲಿದೆ ಎಂದರು.

ಈ ಯೋಜನೆಯ ಮೂಲಕ ಪ್ರತಿ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2000 ರೂಪಾಯಿ  ಆರ್ಥಿಕ ನೆರವು ನೀಡಲಾಗುವುದು. ಆಗಸ್ಟ್ 17ರಿಂದ ಫಲಾನುಭವಿಗಳ ಖಾತೆಗೆ ನೇರ ಹಣ ಪಾವತಿಯಾಗಲಿದೆ. ಉದ್ಘಾಟನೆ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿ ನಿಗದಿಪಡಿಸುತ್ತೇವೆ. ಇದಕ್ಕಾಗಿ ಅಗತ್ಯ ಸಿದ್ದತೆಗಳು ಪೂರ್ಣಗೊಂಡಿವೆ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ ಒಟ್ಟು 30 ಸಾವಿರ ಕೋಟಿ ಖರ್ಚು ತಗಲುವ ಅಂದಾಜಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 17,500 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಚುನಾವಣಾ ಪೂರ್ವ ನಾವು ಜನತೆಗೆ ಏನೆಲ್ಲ ಆಶ್ವಾಸನೆ ನೀಡಿದ್ದೇವೋ ಅದರಂತೆ ನಡೆದುಕೊಳ್ಳಲಿದ್ದೇವೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದರು.

ನಾವು ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಅವರ ಖಾತೆಗೆ ಹಾಕುತ್ತೇವೆ ಎಂದು ವಾಗ್ದಾನ ಮಾಡಿದ್ದೆವು. ಈಗ ಇದನ್ನು ಕೆಲವರು ಯಜಮಾನಿಗೂ ಕೊಡಬೇಕು, ಸೊಸೆಗೂ ಕೊಡಬೇಕೋ ಎಂಬ ಗೊಂದಲ ಸೃಷ್ಟಿಸಿದ್ದಾರೆ. ನಾವು ಮನೆಯ ಒಡತಿಗೆ ಕೊಡುತ್ತೇವೆ. ಇದರಲ್ಲಿ ಗೊಂದಲ ಬೇಡ ಎಂದು ಹೇಳಿದರು.

ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಸ್ವಾಭಿಮಾನ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಲು ಇದೊಂದು ಸರ್ಕಾರದಿಂದ ಸಣ್ಣ ನೆರವು. ಕುಟುಂಬದ ನಿರ್ವಹಣೆಗೆ ಇದು ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿಯೇ ಜಾರಿ ಮಾಡಿದ್ದೇವೆ. ಅಲ್ಲದೆ ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 109 ಸಹಾಯವಾಣಿಗೆ ಅನೇಕರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡುವುದಾಗಿ ಹೇಳಿದರು.

Leave a Reply