ಗ್ಯಾರಂಟಿ ಯೋಜನೆಗಳಿಂದ ಗುಳೆ ನಿಯಂತ್ರಣ: ಸಿಎಂ
ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ತೀವ್ರ ಬರಗಾಲ ಎದುರಿಸುತ್ತಿದ್ದು, ಯಾವುದೇ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ದನಗಳ ಮೇವಿಗೆ ತೊಂದರೆ ಆಗಬಾರದು. ಇದಕ್ಕೆ ಎಷ್ಟೇ ದುಡ್ಡು ಖರ್ಚಾದರೂ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ರಾಜ್ಯದ ಬರ ಪರಿಸ್ಥಿತಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು,ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಏನಾದರೂ ಸಮಸ್ಯೆಗಳಿದ್ದರೆ ಬಗೆಹರಿಸಬೇಕು ಎಂದು ನಿರ್ದೇಶನ ನೀಡಿದರು.
223 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಸುದ್ದಿಯಾಗುತ್ತಿದೆ. ನಾವು ಎಲ್ಲ ಕಾರ್ಯದರ್ಶಿಗಳು, ಡಿಸಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂದು ಹೇಳಿದ್ದೇವೆ. ಎಷ್ಟೇ ದುಡ್ಡು ಖರ್ಚಾದರೂ ಕೊಡುವುದಾಗಿ ತಿಳಿಸಲಾಗಿದೆ ಎಂದರು.
ಮುಂದಿನ ಮೂರು ತಿಂಗಳಲ್ಲಿ ಎದುರಾಗಬಹುದಾದ ತೀವ್ರ ಬರಗಾಲವನ್ನು ನಿಭಾಯಿಸಲು ಸರ್ಕಾರ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ ಎಂದರು.
ಅನಿವಾರ್ಯವಾದಾಗ ಮಾತ್ರ ಹೊಸ ಕೊಳವೆಬಾವಿಗಳನ್ನು ಕೊರೆಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದು, ಹೆಚ್ಚುವರಿಯಾಗಿ 140 ಕೋಟಿ ರೂ.ಗಳ ಜೊತೆಗೆ 70 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು.ಇದು ಸರ್ಕಾರದಿಂದ ನೀಡುವ ಅನುದಾನವಾಗಿದೆ ಎಂದರು.
ಕರ್ನಾಟಕದಲ್ಲಿ ಈ ವರ್ಷ ಬರಗಾಲವಿದ್ದು, 223 ತಾಲ್ಲೂಕುಗಳು ಬರಗಾಲ ಪೀಡಿತವಾಗಿದ್ದು, 194 ತೀವ್ರ ಬರಗಾಲ ಪೀಡಿತವಾಗಿವೆ. ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದು ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.
ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 854 ಕೋಟಿ ರೂ. ಲಭ್ಯವಿದೆ. ಪ್ರತಿ ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ಕರೆದು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸಿದೆ. ಈವರೆಗೆ 646 ಸಭೆಗಳನ್ನು ಇಲ್ಲಿಯವರೆಗೆ ನಡೆಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ 307 ಸಭೆಗಳಾಗಿವೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಿದೆ ಎಂದರು.
ಸಮಸ್ಯೆಯಿರುವ ಗ್ರಾಮ, ಜಿಲ್ಲೆಗಳಲ್ಲಿ ಅದಕ್ಕೆ ಮುಂಚಿತವಾಗಿ ಯೋಜನೆ ತಯಾರಿಸಬೇಕು. ಸದ್ಯ 98 ತಾಲ್ಲೂಕುಗಳ 412 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 175 ಗ್ರಾಮಗಳಿಗೆ 204 ಟ್ಯಾಂಕರ್ ಗಳಿಂದ 596 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಆಗುತ್ತಿದೆ ಎಂದರು.
ಇಂದಿನವರೆಗೆ 33.25 ಲಕ್ಷ ರೈತರಿಗೆ 631 ಕೋಟಿ ರೂ.ಗಳ ತಾತ್ಕಾಲಿಕ ಪರಿಹಾರವನ್ನು ನೀಡಲಾಗಿದೆ. ಸರ್ಕಾರ 600 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರ ಒದಗಿಸಲಾಗಿದೆ. ಇನ್ನೂ 800 ಕೋಟಿ ರೂ.ಗಳನ್ನು ಪಾವತಿಯಾಗುವ ನಿರೀಕ್ಷೆ ಇದೆ. ಮೇವಿಗೆ ಈವರೆಗೆ ತೊಂದರೆ ಇಲ್ಲ. ಆದರೂ ಮುಂಜಾಗ್ರತ ಕ್ರಮವಾಗಿ ಪಶುಸಂಗೋಪನೆ ಇಲಾಖೆಗೆ 40 ಕೋಟಿ ರೂ.ಗಳನ್ನು ಮೇವು ಬೆಳೆಯಲು ಒದಗಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಪ್ರತಿ.ಕುಟುಂಬಕ್ಕೆ 4-5 ಸಾವಿರ ರೂ. 1 ಕೋಟಿ 20 ಲಕ್ಷ ಕುಟುಂಬ ಗಳಿಗೆ 4.50 ಕೋಟಿ ಜನರಿಗೆ ಇದರ ಲಾಭ ದೊರೆತಿದೆ. ಈ ಕಾರಣದಿಂದ ಜನ ಗುಳೇ ಹೋಗುತ್ತಿಲ್ಲ ಎಂದರು.
ಸುಮಾರು 7408 ಹಳ್ಳಿಗಳಲ್ಲಿ , 1115 ವಾರ್ಡುಗಳಲ್ಲಿ ನೀರಿನ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟೂ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯೋಜನೆ ಸಿದ್ಧವಾಗಿದೆ. ಖಾಸಗಿ ಕೊಳವೆ ಬಾವಿಗಳೊಂದಿಗೆ ಒಪ್ಪಂದವಾಗಿದೆ. ಟ್ಯಾಂಕರ್ ಮೂಲಕ ನೀರು ಒದಗಿಸಲು ಕ್ರಮ ವಹಿಸಲಾಗಿದೆ ಎಂದರು.
ಬರಗಾಲ ಬಂದರೆ 150 ದಿನಗಳಿಗೆ ಮಾನವ ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಹೆಚ್ಚಿಸಿಲ್ಲ. ನರೇಗಾ ಯೋಜನೆಯಡಿ ಕೆಲಸದ ಹಣ ಪಾವತಿಯನ್ನೂ ಮಾಡಿಲ್ಲ. 18, 172 ಕೋಟಿ ರೂ.ಗಳ ಪರಿಹಾರ ಕೋರಿದ್ದರೂ ಒಂದು ಬಿಡಿಗಾಸು ಸಹ ಕೇಂದ್ರ ಸರ್ಕಾರ ನೀಡಿಲ್ಲ. ಬಿಜೆಪಿ ನೇತೃತ್ವದಲ್ಲಿಯೇ ನಿಯೋಗ ಹೋಗೋಣವೆಂದರೆ ಬಿಜೆಪಿ ನಾಯಕರ ಉತ್ತರವಿಲ್ಲ. ಕೇಂದ್ರ ಸರ್ಕಾರ ಜಪ್ಪಯ್ಯ ಅಂದರೂ ಒಂದು ರೂ.ನೀಡಿಲ್ಲ. ಪರಿಹಾರ ನೀಡಿಲ್ಲ ಎನ್ನಲೂ ನಮಗೆ ಸ್ವಾತಂತ್ರ್ಯವಿಲ್ಲವೇ? ಎಂದರು.




