ದಾಖಲೆ ಸಹಿತ ಬಹಿರಂಗ ಚರ್ಚೆ ನಡೆಸಲು ಸಿದ್ದ: ಎಚ್.ಡಿ.ಕುಮಾರಸ್ವಾಮಿ

2 years ago

#Ready #conduct #opendiscussion #records #DKShivakumar #Ramanagara #Kanakapura #HDKumaraswamy

ಬೆಂಗಳೂರು: ಅಭಿವೃದ್ಧಿ ಯೋಜನೆಗಳ ಕುರಿತಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಕಿರುವ ಸವಾಲನ್ನು ಸ್ವೀಕರಿಸಿದ್ದೇನೆ. ದಾಖಲೆ ಸಹಿತ ಬಹಿರಂಗ ಚರ್ಚೆ ನಡೆಸಲು ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಂಥಾಹ್ವಾನ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಷ್ಟೇ ಅಲ್ಲ ಅಧಿಕಾರಿಗಳ ವರ್ಗಾವಣೆಯಲ್ಲಿ ಲಂಚ ಸೇರಿದಂತೆ ಇತರೆ ಭ್ರಷ್ಟಾಚಾರ ಆರೋಪದ ಕುರಿತಾಗಿ ಧರ್ಮಸ್ಥಳ, ಚಾಮುಂಡೇಶ್ವರಿ ಸೇರಿದಂತೆ ಯಾವುದೇ ದೇವಾಲಯದಲ್ಲಿ ನಮ್ಮ ಕುಟುಂಬದೊಂದಿಗೆ ಪ್ರಮಾಣಕ್ಕೆ ಸಿದ್ದ ಸಿಎಂ ಹಾಗೂ ಸಚಿವರು ಇದಕ್ಕೆ ಸಿದ್ದರಿದ್ದಾರೆಯೇ ಎಂದು ಸವಾಲು ಹಾಕಿದರು.

ವಿಧಾನಸಭೆ ಅಧಿವೇಶನ ಕರೆದರೆ ಅಲ್ಲಿ ದಾಖಲೆಗಳ ಸಹಿತ ನನ್ನ ಆಡಳಿತಾವಧಿ, ಅವರ ಆಡಳಿತಾವಧಿಯ ವಿಚಾರಗಳ ಚರ್ಚೆ ನಡೆಸಲು ಸಿದ್ದ. ಅವರು ಎಲ್ಲಿಗೆ ಕರೆದರೂ ಅಲ್ಲಿಗೆ ಹೋಗಿ ಚರ್ಚೆ ನಡೆಸಲು ಸಿದ್ದವಿರುವುದಾಗಿ ಹೇಳಿದರು.

ಗಾಳಿಯಲ್ಲಿ ಗುಂಡು ಹೊಡೆಯುವುದಿಲ್ಲ. ದಾಖಲೆಗಳ ಸಹಿತ ವಿಧಾನಸಭೆಯಲ್ಲಿ ಮುಕ್ತವಾಗಿ ಚರ್ಚೆ ಮಾಡೋಣ. ಮಾಡುವ ಎಲ್ಲ ಆರೋಪಗಳಿಗೂ ದಾಖಲೆಗಳಿವೆ. ನಿಮ್ಮಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ನಮ್ಮ ಮೈತ್ರಿಯ ಬಗ್ಗೆ ಪಾಠ ಹೇಳುತ್ತೀರಿ ಎಂದು ಟೀಕಿಸಿದರು.

ಯಾವ್ಯಾವ ಗುತ್ತಿಗೆದಾರರ ಬಳಿ ಎಷ್ಟು ವಸೂಲಿ ಮಾಡಿದ್ದೀರಿ? ಎಂಬುದನ್ನು ಸದನದಲ್ಲೇ ಪ್ರಸ್ತಾಪ ಮಾಡುತ್ತೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿದ್ದು ಯಾರು? ಎಂದು ಪ್ರಶ್ನಿಸಿದರು.

ಹೋಟೆಲ್ನಲ್ಲಿದ್ದು ಅಧಿಕಾರ ಮಾಡಿದರು ಎಂದು ಸಿದ್ದರಾಮಯ್ಯ ಹೇಳುತ್ತಾ ಇದ್ದಾರೆ. ಹೋಟೆಲ್ನಲ್ಲಿದ್ದರೂ ಏನು ಕಾರ್ಯಕ್ರಮ ಮಾಡಿದ್ದೀನಿ ಎಂಬುದಕ್ಕೆ ದಾಖಲೆ ನೀಡುತ್ತೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸುವುದಾಗಿ ಹೇಳಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. 2013ರಿಂದ 2018ರವಗಿನ ಅವರ ಆಡಳಿತ ಸೇರಿದಂತೆ ಮೈತ್ರಿ ಸರ್ಕಾರ ಮತ್ತು ಬಿಜೆಪಿ ಆಡಳಿತದಲ್ಲಿ ಆರ್ಥಿಕ ಶಿಸ್ತಿನ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಗಾಳಿಯಲ್ಲಿ ಗುಂಡು: ಇದಕ್ಕೂ ಮುನ್ನ ಮಾತನಾಡಿದ ಉಪ ಮುಖ್ಯಮಂತ್ರಿ ಶಿವಕುಮಾರ್, ನಾನು ಏನು ಮಾಡಿದ್ದೇನೆ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಬಹಿರಂಗ ಚರ್ಚೆ ಮಾಡೋಣ. ಅವರು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಹೇಳಿದರು.

ಯಾರು ಏನೇನು ಮಾಡಿದ್ದಾರೆ ಎಂದು ಎಲ್ಲವನ್ನೂ ಬಿಚ್ಚಿ ಮಾತನಾಡೋಣ. ಬಹಿರಂಗ ಚರ್ಚೆ ಮಾಡಲು ನಾನೂ ಸಿದ್ಧ. ಮೂರು ದಿನಗಳ ನಂತರ ಯಾವಾಗ ಬೇಕಾದರೂ ಸಮಯ ನಿಗದಿ ಮಾಡಿ ಎಂದು ಸವಾಲೆಸೆದರು.

Leave a Reply