ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನ ಪೀಠಿಕೆ ಓದು

2 years ago

#Read #Preamble #Constitution #WinterSession #UTKhader

ಬೆಳಗಾವಿ: ಇದೇ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಹೊಸ ಸಂಪ್ರದಾಯವನ್ನು ಆರಂಭಿಸಲಾಯಿತು. ಬೆಳಿಗ್ಗೆ ವಂದೇ ಮಾತರಂನೊಂದಿಗೆ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮೂಲಪ್ರತಿಯನ್ನು ಓದಲಾಗುತ್ತದೆಯೋ ಅಥವಾ ತಿದ್ದುಪಡಿ ಮಾಡಲಾದ ಮಾಹಿತಿಯನ್ನೋ ಎಂದು ಪ್ರಶ್ನೆ ಮಾಡಿದರು. ತಮಗೆ ಪ್ರಸ್ತಾವನೆಯ ಪ್ರತಿಯೇ ತಲುಪಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸಭಾಧ್ಯಕ್ಷರು, ನಾನು ಒದುತ್ತೇನೆ ಅದರಂತೆ ನೀವು ಪುನರುಚ್ಚಾರ ಮಾಡಿ ಎಂದು ಹೇಳಿದರು. ನಂತರ ಎಲ್ಲಾ ಸಚಿವರು ಮತ್ತು ಪಕ್ಷಾತೀತವಾಗಿ ಶಾಸಕರು ಎದ್ದುನಿಂತು ಸಂವಿಧಾನದ ಪೀಠಿಕೆ ಓದಿದರು.

ನಂತರ ವಿಧಾನಸಭೆ ಚಳಿಗಾಲದ ಅಧಿವೇಶನದ ಮೊದಲ ದಿನ ಇತ್ತೀಚೆಗೆ ಅಗಲಿದ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಡಿ.ಬಿ.ಚಂದ್ರೇಗೌಡ, ಮಾಜಿ ಶಾಸಕ ವಿಲಾಸಬಾಬು ಆಲಮೇಕರ್ ಸೇರಿದಂತೆ ಹಲವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಸಂತಾಪ ಸೂಚಕ ನಿರ್ಣಯ ಮಂಡಿಸಿದರು. ಮಾಜಿ ಸಚಿವ ಶ್ರೀರಂಗದೇವರಾಯಲು, ವಿಧಾನಸಭೆಯ ಮಾಜಿ ಸದಸ್ಯರಾದ ಸಿ.ವೆಂಕಟೇಶಪ್ಪ, ಶ್ರೀಕಾಂತ್ಶೆಟ್ಟಪ್ಪ ಭೀಮಣ್ಣವರ, ಈಶಾನ್ಯ ರಾಜ್ಯಗಳ ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯ, ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ಕೋರಿದರು.

ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನವೆಂಬರ್ 22ರಂದು ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಮಂಗಳೂರು ಜಿಲ್ಲೆಯ ಕ್ಯಾಪ್ಟನ್ ಎಂ.ಬಿ.ಪ್ರಾಂಜಲ್ ಸೇರಿದಂತೆ ಕ್ಯಾಪ್ಟನ್ ಶುಭನ್ ಗುಪ್ತಾ, ಹವಲ್ದಾರ್ ಅಬ್ದುಲ್ ಮಜಿದ್, ಲಾನ್ಸ್ನಾಯ್ಕ್ ಸಂಜಯ್ ಬಿಸ್ಟ್ ಮತ್ತು ಪಾರಾಟ್ರುಪರ್ ಸಚಿನ್ ಲಾರ್ ಸೇರಿದಂತೆ ಐದು ವೀರಯೋಧರು ಹುತಾತ್ಮರಾಗಿದ್ದಾರೆ ಎಂದು ಹೇಳಿದರು.

ಸಭಾದ್ಯಕ್ಷರ ನಿರ್ಣಯ ಬೆಂಬಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್, ಗೃಹ ಸಚಿವ ಡಾ.ಪರಮೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಚಿವರಾದ ಎಚ್.ಕೆ.ಪಾಟೀಲ್, ಶಿವರಾಜ್ ತಂಗಡಗಿ ಸೇರಿದಂತೆ ಹಲವರು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಸದನದಲ್ಲಿ 2 ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.

Leave a Reply