ಪಾಳೆಗಾರಿಕೆ ಮನಸ್ಥಿತಿಯ ಕ್ರಿಮಿಗಳಿಗೆ ಕಠಿಣ ಶಿಕ್ಷೆಯಾಗಲಿ

5 years ago

ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ಜನರ ಗುಂಪೊಂದು ಮಹಿಳೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರ ಎಸಗಿದ ಪ್ರಕರಣ ಮಾಸುವ ಮುನ್ನವೇ ಮತ್ತೇ ಅಂತದ್ದೇ ಹೇಯ ಕೃತ್ಯ ಸುರಪುರ ತಾಲೂಕಿನ ಚೌಡೇಶ್ವರಿಹಾಳದಲ್ಲಿ ನಡೆದಿದೆ.

ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ಮಹಿಳೆಯರ ಮೇಲೆ ಇಂತಹ ಮೃಗೀಯ ವರ್ತನೆಗಳು ನಡೆಯುವುದು ವರದಿಯಾಗುತ್ತಿದ್ದವು. ಆದರೆ, ಈ ಹೇಯ ಕೃತ್ಯ ನಮ್ಮ ಜಿಲ್ಲೆಯಲ್ಲಿ ನಡೆದಿದೆ ಎನ್ನುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಅಳ್ಳಳ್ಳಿ ಗ್ರಾಮದ ಗಂಗಪ್ಪ, ಬಸ್ಸಪ್ಪ ಮತ್ತು ಇತರರು ಸೇರಿ ದಲಿತ ಮಹಿಳೆಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ್ದಾರೆ. ಇದಕ್ಕೆ ಆಕೆ ಪ್ರತಿರೋಧ ತೋರಿಸಿದಾಗ ಅವಳ ಮೇಲೆ ಪೆಟ್ರೋಲ್  ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ದುಷ್ಕೃತ್ಯವನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಖಂಡಿಸಬೇಕಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಪಾಳೇಗಾರಿಕೆ ಸಂಸ್ಕೃತಿ ತೀವ್ರವಾಗಿ ಬೆಳೆಯುತ್ತಿದೆ ಎನ್ನುವುದಕ್ಕೆ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣವೇ ಸಾಕ್ಷಿಯಾಗಿದೆ. ಈ ಪಾಳೇಗಾರಿಕೆ ಪದ್ದತಿಯಿಂದ ಸಾಮಾನ್ಯ ಜನ ಜೀವಭಯದಿಂದ ಬದುಕುವಂತಾಗಿದೆ.  ಇಂತಹ ಪಾಳೆಗಾರಿಕೆಯನ್ನು ಎಡೆಮುರಿ ಕಟ್ಟಬೇಕಾದ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ.

ಇನ್ನು ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆಯೇ ಅಥವಾ ಪಾಳೇಗಾರಿಕೆ ವ್ಯವಸ್ಥೆಯಲ್ಲಿದ್ದೇವೆಯೇ ಎನ್ನುವ ಸಂಶಯ ಕಾಡದೆ ಇರದು. ಪೈಶಾಚಿಕ ಕೃತ್ಯದ ಬಗ್ಗೆ ಪೋಲೀಸರು ದಕ್ಷತೆಯಿಂದ, ನಿಷ್ಪಕ್ಷಪಾತವಾಗಿ ನಡೆದುಕೊಂಡರೆ ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೆ ಇಲ್ಲ. ಆದರೆ ಇಲ್ಲಿಯೂ ರಾಜಕೀಯ ನುಸುಳಿದರೆ ಎಂಬ ಭಯ ನನ್ನನ್ನು ಕಾಡುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ನೀಚ ಕೃತ್ಯ ಎಸಗಿದ ಆರೋಪಿಗಳ ಪರ ಪ್ರಜ್ಞಾವಂತ ನಾಗರೀಕ ನಿಲ್ಲಲಾರನು.

ಭಾರತ ವಿಶ್ವಗುರುವಾಗುತ್ತದೆ ಎಂದು ಬೊಬ್ಬೆ ಹೊಡೆದು ಭಾಷಣ ಬಿಗಿಯುವ ರಾಜಕೀಯ ನಾಯಕರೆ, ಮೊದಲು ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಿ ಆಮೇಲೆ ವಿಶ್ವ ಗುರಿವಿನ ಕನಸು ಕಾಣೋಣ.

– ಆರ್.ಎಸ್. ಮಾಲಗತ್ತಿ, ಗ್ರಾ.ಪಂ. ಸದಸ್ಯರು

Leave a Reply