ಗುವಾಹಟಿ: ಹಲವು ದಶಕಗಳಿಂದ ವಾಸವಿದ್ದ 1,170 ಕುಟುಂಬಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಅಸ್ಸಾಂ ಸರ್ಕಾರ ನಡೆಸಿದ ಪೊಲೀಸ್ ಕಾರ್ಯಾಚರಣೆಯಲ್ಲಿ ಇಬ್ಬರು ಗುಂಡಿಗೆ ಬಲಿಯಾಗಿದ್ದ ದರ್ರಾಂಗ್ ಜಿಲ್ಲೆಯ ದಾಲ್‌ಪುರ ಪ್ರದೇಶದಲ್ಲಿ ಇತ್ತೀಚಿಗೆ ನಡೆದಿತ್ತು. ಈ ಸ್ಥಳಕ್ಕೆ ಎಐಕೆಎಸ್ ಹಾಗೂ ಎಐಎಡಬ್ಲ್ಯೂಯು ಹಾಗೂ ಎಐಎಲ್‌ಯು ಸಂಘದ ಮುಖಂಡರ ನಿಯೋಗ ಭೇಟಿ ನೀಡಿತ್ತು.
ಈ ಸಂದರ್ಭದಲ್ಲಿ ಮೃತರಾದ ವಾರಸುದಾರರಿಗೆ ಎಐಕೆಎಸ್ ನಿಂದ ತಲಾ ಒಂದು ಲಕ್ಷ ರೂ.ಗಳನ್ನು ನೀಡಲಾಯಿತು. ಘಟನೆಯಲ್ಲಿ ಗಾಯಗೊಂಡವರಿಗೂ ಕೂಡ ನೆರವು ಒದಗಿಸಲಾಯಿತು. ಗುಂಡಿನ ದಾಳಿ ಹಾಗೂ ಲಾಠಿ ಏಟಿಗೆ ವೃದ್ದರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ನಿಯೋಗದಲ್ಲಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಜಂಟಿ ಕಾರ್ಯದರ್ಶಿ ಹಾಗೂ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)- ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಡಾ. ವಿಜ್ಜುಕೃಷ್ಣನ್, ಅಖಿಲ ಭಾರತ ಕೃಷಿ ಕೂಲಿಕಾರರ ಸಂಘಟನೆ(ಎಐಎಡಬ್ಲ್ಯುಯು) ಜಂಟಿ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಸಂಸದ ಡಾ.ವಿ.ಶಿವದಾಸನ್, ಅಖಿಲ ಭಾರತ ಲಾಯರ್ಸ್ ಯೂನಿಯನ್ (ಎಐಎಲ್‌ಯು) ಅಧ್ಯಕ್ಷರು ಹಾಗೂ ರಾಜ್ಯಸಭೆ ಸಂಸದ ವಿಕಾಸ್ ರಂಜನ್ ಭಟ್ಟಾಚಾರ್ಯ, ಅಸ್ಸಾಂ ಕೃಷಿಕ್ ಸಭಾ ಅಧ್ಯಕ್ಷ ಗಜೆನ್ ಬರ್ಮಾನ್, ಖಜಾಂಚಿ ಮಸದ್ದಾರ್ ಹುಸೇನ್, ಅಸ್ಸಾಂ ಎಐಎಲ್‌ಯು ಕಾರ್ಯದರ್ಶಿ ಎ ಆರ್ ಸಿಕ್ದರ್ ಹಾಗೂ ಇತರರು ಭೇಟಿ ನೀಡಿದ್ದರು.
ದಶಕಗಳಿಂದ ವಾಸವಿದ್ದ ಇವರೆಲ್ಲರೂ ಸಂಬಂಧಿಸಿದ ದಾಖಲಾತಿಗಳನ್ನು ಇಟ್ಟುಕೊಂಡಿದ್ದು, ತೆರಿಗೆ ಪಾವತಿಸುತ್ತಿದ್ದರೂ, ತಮ್ಮ ದೈನಂದಿನ ಅಗತ್ಯಗಳಿಗಾಗಿ ಸರ್ಕಾರಿ ಶಾಲೆ, ಅಂಗನವಾಡಿ ಹಾಗೂ ರೇಷನ್ ಅಂಗಡಿಗಳನ್ನು ಕಟ್ಟಿಕೊಂಡಿದ್ದರೂ ಈಗ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ಇವರೆಲ್ಲರನ್ನೂ ಕಾನೂನು ಬಾಹಿರ ಒತ್ತುವರಿದಾರರು ಎಂದು ಹೇಳುತ್ತಿದೆ. ವಿಶೇಷವಾಗಿ ಮುಸ್ಲಿಂ ರೈತರೇ ಉಳುಮೆ ಮಾಡುತ್ತಿರುವ ಈ ಪ್ರದೇಶದಲ್ಲಿ ಈ ರೀತಿ ಒಕ್ಕಲೆಬ್ಬಿಸುವಿಕೆ ಪ್ರಯತ್ನ ಕೋಮು ಧ್ರುವೀಕರಣ ಉಂಟು ಮಾಡುವ ದುರುದ್ದೇಶ ಎಂದು ಕಾಣುತ್ತಿದೆ. ಬೇರೆ ಇತರೆ ಪ್ರದೇಶಗಳಲ್ಲಿ ಅದಿವಾಸಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ರೈತರ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಬಹುದೊಡ್ಡ ಪಿತೂರಿಯ ಭಾಗವಾಗಿದೆ. ಆಳುವ ಸರ್ಕಾರದ ಇಂತಹ ಕ್ರಮವನ್ನು ಒಗ್ಗಟ್ಟಿನಿಂದ ಎಲ್ಲಾ ವಿಭಾಗದ ರೈತರು ಇದನ್ನು ಪ್ರತಿರೋಧಿಸಬೇಕು ಎಂದು ಇದೇ ಸಂದರ್ಭದಲ್ಲಿ ಕರೆ ನೀಡಲಾಯಿತು.
ಯಾವುದೇ ಸಮರ್ಪಕ ನೋಟೀಸ್ ನೀಡಿರಲಿಲ್ಲ ಮತ್ತು ಕೆಲವರಿಗೆ ಮನೆ ಧ್ವಂಸವಾದ ನಂತರ ನೋಟೀಸ್ ನೀಡಿದ್ದಾರೆ. ಎಲ್ಲರ ಮನೆಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ. ನಾಲ್ಕು ಪೂಜಾ ಸ್ಥಳಗಳನ್ನು ಕೂಡ ದ್ವಂಸ ಮಾಡಿರುವುದು ವರದಿಯಾಗಿದೆ. ಇವರೆಲ್ಲರನ್ನೂ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸ ಮಾಡುವಂತೆ ಹಾಗೂ ಮಳೆಯಲ್ಲಿ ತೋಯ್ಯುವಂತೆ ಮಾಡಲಾಗಿದೆ. ಮುಂಬರುವ ಚಳಿಗೆ ಒದ್ದಾಡಬೇಕಾದ ದುಸ್ಥಿತಿಯಿಂದ ಇವರ ಬದುಕು ನರಳುವಂತಾಗಿದೆ ಮಾತ್ರವಲ್ಲ, ಕೊರೊನಾ ಪಿಡುಗು ಹಾಗೂ ಇನ್ನಿತರೆ ಸಾಂಕ್ರಾಮಿಕ ರೋಗಗಳಿಗೂ ಗುರಿಯಾಗುವಂತಾಗಿದೆ. ಇಷ್ಟೆಲ್ಲಾ ಆದರೂ ಬಿಜೆಪಿ ಸರ್ಕಾರ ಯಾವುದೇ ನೆರವಿಗೆ ಧಾವಿಸಿಲ್ಲ ಎಂಬ ಅಂಶವನ್ನು ನಿಯೋಗದ ಭೇಟಿಯ ಸಂದರ್ಭದಲ್ಲಿ ತಿಳಿದು ಬಂದಿದೆ ಎಂದು ಭೇಟಿ ನೀಡಿದ ತಂಡ ಹೇಳಿದೆ.
ನಿಯೋಗವು ಅಸ್ಸಾಂ ರಾಜ್ಯದ ದರ್ರಾಂಗ್ ಜಿಲ್ಲೆಯ ದಾಲ್‌ಪುರ ಘಟನೆಯನ್ನು ಗುವಾಹಟಿ ಹೈ ಕೋರ್ಟ್ ನ ಹಾಲಿ ನ್ಯಾಯಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಕೊಲೆಗೆ ಕಾರಣವಾಗಿರುವ ಪೊಲೀಸ್ ಅಧಿಕಾರಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದೆ. ಅಲ್ಲದೆ, ಅವರ ಭೂಮಿ ಹಕ್ಕು ಹಾಗೂ ಉಳುಮೆ ಹಕ್ಕು ಖಾತರಿಪಡಿಸುವುದು ಒಳಗೊಂಡಂತೆ ತತ್ ಕ್ಷಣ ಸರ್ಕಾರ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು. ಕೊಲೆಗೀಡಾದ ಕುಟುಂಬಕ್ಕೆ ತಲಾ 25 ಲಕ್ಷ ರೂ., ಹಾಗೂ ಗಾಯಗೊಂಡವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲಿನ ಜನರಿಗೆ ಕನಿಷ್ಠ 6 ತಿಂಗಳ ತನಕ ಆಹಾರ ಧಾನ್ಯಗಳು ಸೇರಿದಂತೆ ಉಚಿತ ರೇಷನ್ ಒದಗಿಸಬೇಕು. ಎಲ್ಲಾ ಕುಟುಂಬಗಳಿಗೆ ಮನೆ ಒದಗಿಸಬೇಕು ಎಂದು ಸಹ ನಿಯೋಗ ಆಗ್ರಹಿಸಿದೆ.
ಇಲ್ಲಿನ ಪ್ರದೇಶದಲ್ಲಿರುವ ಶಾಲೆಗಳು, ಅಂಗನವಾಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪುನಾರರಾಂಭಿಸಬೇಕು. ಈ ಎಲ್ಲಾ ವಿಷಯವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಷ್ಟ್ರಪತಿಗಳ ಗಮನಕ್ಕೆ ತರಲಾಗುವುದು, ನೊಂದ ಎಲ್ಲರಿಗೂ ಕಾನೂನು ನೆರವು ಒದಗಿಸಲಾಗುವುದು ಎಂದು ನಿಯೋಗವು ಅಲ್ಲಿನ ಜನರಿಗೆ ಧೈರ್ಯ ನೀಡಿದೆ.



