ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ಪಾಸಿಟಿವ್ ಲೀಡ್ ಸಿಕ್ಕಿದ್ದು, ಆರೋಪಿಯ ಹತ್ತಿರಕ್ಕೆ ಹೋಗಿದ್ದು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಗೃಹ ಸಚಿವ ಜಿ. ಪರಮೇಶ್ವರ್ ವ್ಯಕ್ತಪಡಿಸಿದ್ದಾರೆ.
ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಪ್ರತ್ಯೇಕವಾಗಿ ಎನ್ಐಎ ಕೂಡ ತನಿಖೆ ನಡೆಸುತ್ತಿದ್ದು,ಕೃತ್ಯ ನಡೆಸಿದ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಬಾಂಬ್ ಸ್ಫೋಟ ಸೇರಿದಂತೆ ಕಾನೂನುಬಾಹಿರ ಚಟುವಟಿಕೆ ಕುರಿತು ರಾಜ್ಯ ಗುಪ್ತಚರ ಇಲಾಖೆಯು ಮಾಹಿತಿ ಕಲೆ ಹಾಕಿದಂತೆ ಎನ್ಐಎ, ಐಬಿ ಸಹ ಅವರದ್ದೇ ಆದ ಜಾಲದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎಷ್ಟೋ ಬಾರಿ ಕೇಂದ್ರ ತನಿಖಾ ಸಂಸ್ಥೆಗಳು ನಮ್ಮ ಬಳಿ ಮಾಹಿತಿ ಹಂಚಿಕೊಂಡಿವೆ. ಅದರಂತೆ ತನಿಖಾ ತಂಡಕ್ಕೆ ಸಿಕ್ಕಿರುವ ಮಾಹಿತಿ ಆಧಾರದ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದರು.
ಪ್ರೋಟಾನ್ ಕಂಪನಿಗೆ ಪತ್ರ: ಬಾಂಬ್ ಇಡುವುದಾಗಿ ಸಂದೇಶ ಕಳುಹಿಸಿರುವ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇಮೇಲ್ ಸಂದೇಶ ಕಳುಹಿಸಿರುವ ಬಗ್ಗೆ ಪ್ರೋಟಾನ್ ಕಂಪನಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.
ಸಂದೇಶ ಕಳುಹಿಸಿದ ಅನಾಮಿಕರ ವಿವರ ನೀಡುವಂತೆ ಕೇಳಲಾಗಿದೆ. ಇದುವರೆಗೂ ಕಂಪನಿಯಿಂದ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕೇಂದ್ರ ಸರ್ಕಾರಕ್ಕೂ ಪ್ರೋಟಾನ್ ಇಮೇಲ್ ನಿಷೇಧಿಸುವ ಬಗ್ಗೆ ಪತ್ರ ಬರೆಯಲಿದ್ದೇವೆ. ಈ ಹಿಂದೆ ನಗರದ 35ಕ್ಕಿಂತ ಹೆಚ್ಚು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಗಳು ಸಂದೇಶ ಕಳುಹಿಸಿದ್ದರು. ಇಂತಹ ಘಟನೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.




