ಅಚ್ಛೇದಿನದ ನಶೆ ಹತ್ತಿಸಿ ವಿಪಕ್ಷಗಳ ಮೇಲೆ ಆರೋಪಿಸಿಲು ನಾಚಿಕೆಯಾಗುವುದಿಲ್ಲವೇ?: ರಾಮಲಿಂಗಾರೆಡ್ಡಿ

5 years ago

ಬೆಂಗಳೂರು: ನಳಿನ್ ಕಟೀಲ್ ಅವರೇ, ದೇಶಕ್ಕೆ ಅಚ್ಛೇ ದಿನದ ನಶೆ ಹತ್ತಿಸಿ, ಜನಸಾಮಾನ್ಯರಿಗೆ ಮಂಕುಬೂದಿ ಎರಚಿ ಈಗ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಸೇರಿದಂತೆ ವಿರೋಧ ಪಕ್ಷದ ನಾಯಕರ ಮೇಲೆ ಈ ರೀತಿಯ ಆರೋಪ ಮಾಡಲು ನಾಚಿಕೆಯಾಗುವುದಿಲ್ಲವೇ? ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವ ಹಾಗಿದೆ ನಿಮ್ಮ ಬಿಜೆಪಿ ಕರ್ನಾಟಕದ ವರಸೆ ಎಂದು ಕೆಪಿಸಿಸಿ ರಾಮಲಿಂಗಾರೆಡ್ಡಿ ನಳಿನ್ ಕುಮಾರ್ ಕಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಮತ್ತು ಪೆಡ್ಲರ್ ಎಂದು ಆರೋಪಿಸಿದ್ದರು. ಈ ಕುರಿತು ಸಾಮಾಜಿಕಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ರಾಮಲಿಂಗಾರೆಡ್ಡಿ, ಮಾದಕ ವ್ಯಸನಿಗಳು, ಅತ್ಯಾಚಾರಿಗಳು ಸೇರಿದಂತೆ ಧರ್ಮ – ಸಂಸ್ಕೃತಿ ಹೆಸರನ್ನು ಹೇಳಿಕೊಂಡು  ಮಾಡಬಾರದ ಕೆಲಸಗಳನ್ನು ಮಾಡುವವರು ಬಿಜೆಪಿಯಲ್ಲೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕುಲದೀಪ್ ಸೆಂಗರ್, ಸ್ವಾಮಿ ಚಿನ್ಮಯಾನಂದ, ಭೋಜಪಾಲ್ ಸಿಂಗ್, ವಿಜಯ್ ಜಾಲಿ, ಕಾಶಿಮಿರಾ ಅನಿಲ್ ಬೋಸ್ಲೇ, ವೆಂಕಟೇಶ್ ಮೌರ್ಯ, ಹಮೀದ್ ಸರ್ದಾರ್, ನಿಹಾಲ್ ಚಂದ್, ಪ್ರಮೋದ್ ಗುಪ್ತ ಮತ್ತು ಕರ್ನಾಟಕದ ಹಲವಾರು ಬಿಜೆಪಿಯ ರಾಷ್ಟ್ರೀಯ ನಾಯಕರು ಅತ್ಯಾಚಾರ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಈಗಾಗಲೇ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಪಟ್ಟಿಯನ್ನೇ ಕೊಟ್ಟಿದ್ದಾರೆ.

ಇನ್ನು ಸಿಡಿ ಮತ್ತು ಡ್ರಗ್ಸ್ ವಿಷಯಕ್ಕೆ ಬಂದರೆ ಸಾಲು ಸಾಲು ಬಿಜೆಪಿ ನಾಯಕರು ಪೊಲೀಸರಿಗೆ ಸಿಕ್ಕಿಬಿದ್ದು ದೇಶದ ಜನರ ಮುಂದೆ ಬೆತ್ತಲಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸರಿಯಾದ ಔಷಧಿ, ಆಮ್ಲಜನಕ ಪೂರೈಸದೆ ಲಕ್ಷಾಂತರ ಜನರ ಸಾವಿಗೆ ಕಾರಣವಾದವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಹೇಳಿಕೊಂಡು ಎಲ್ಲರನ್ನು ನಾಶ ಮಾಡುವ ಜೊತೆಗೆ ತಪ್ಪುಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಅಪಪ್ರಚಾರಗಳನ್ನು ಮಾಡುತ್ತ ಜನರ ದಿಕ್ಕು ತಪ್ಪಿಸುತ್ತಿರುವುದು ನಿಮ್ಮ ಬಿಜೆಪಿಯವರಲ್ಲವೇ? ನಿಮ್ಮ ಕರ್ನಾಟಕ ಬಿಜೆಪಿಯ ಎಲುಬಿಲ್ಲದ ನಾಲಿಗೆಯ ಸಂಸ್ಕಾರವನ್ನು ಇನ್ನಾದರೂ ಬದಲಿಸಿಕೊಳ್ಳಿ ಎಂದು ಅವರು ಕಿಡಿಕಾರಿದ್ದಾರೆ.

Leave a Reply