ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭ

3 years ago

ಬಿ.ಬಿ.ಎಂ.ಪಿ. ಕನ್ನಡ ಸಂಘ: ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಹಾಗೂ ನಗರ ದೇವತೆ ಅಣ್ಣಮ್ಮದೇವಿ ಉತ್ಸವ ಮತ್ತು ಸಾಧಕರಿಗೆ ಪುನೀತ್ ರಾಜ್‌ಕುಮಾ‌ರ್ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿತು.

ನಗರ ದೇವತೆ ಅಣ್ಣಮ್ಮ ದೇವಿಗೆ ಪುಷ್ಪ ನಮನವನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದರವರು, ನಿರ್ದೇಶಕರಾದ ರಾಜೇಂದ್ರಸಿಂಗ್ ಬಾಬು, ಹಿರಿಯ ಹಾಸ್ಯ ನಟ ದೊಡ್ಡಣ್ಣ, ವಿಶೇಷ ಆಯುಕ್ತ ರಂಗಪ್ಪ, ಪ್ರಧಾನ ಕಾರ್ಯದರ್ಶಿ ಎ.ಅಮೃತ್ ರಾಜ್ ರವರು ಉದ್ಘಾಟನೆ ನೇರವೆರಿಸಿದರು.

ತುಷಾರ್ ಗಿರಿನಾಥ್ ಮಾತನಾಡಿ, ಹೋರಾಟಗಳಿಂದ ಕನ್ನಡ ಭಾಷೆ ಶಿಕ್ಷಣಕ್ಕೆ ಕಡ್ಡಾಯ ಮಾಡುವಂತಾಯಿತು. ಬಿ.ಬಿ.ಎಂ.ಪಿ. ಕನ್ನಡ ಭಾಷೆಯಲ್ಲಿ ಆಡಳಿತ ನಡೆಸುತ್ತದೆ. ನಮ್ಮ ವಿಚಾರವನ್ನು ತಿಳಿಸಲು ಭಾಷೆ ಪ್ರಧಾನವಾಗಿರುತ್ತದೆ. ಸ್ಥಳೀಯ ಭಾಷೆಯಲ್ಲಿ ಮಾತನಾಡಿದಾಗ ಸಂಸ್ಕೃತಿ ಬಗ್ಗೆ ಅರಿವು ಮೂಡುತ್ತದೆ. ಕನ್ನಡ ಭಾಷೆ ಸುಂದರವಾದ ಭಾಷೆಯಾಗಿದೆ ಎಂದರು.

ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ, ಮೂರು ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ ಒಂದು. ಕನ್ನಡ ಭಾಷೆ ಕಾವೇರಿ, ಗೋದಾವರಿ, ತ್ರಯಂಭಕೇಶ್ವರವರೆಗೆ ಇತ್ತು. ಕನ್ನಡ ಭಾಷೆ ಕಸ್ತೂರಿಯಂತೆ ಸಂಗೀತಮಯವಾಗಿದೆ. ಕಲಿಯುವುದು ಸುಲಭವಾಗಿದೆ. ಪುನೀತ್ ನಗುಮೊಗದ ಒಡೆಯ, ಪುನೀತ್ ಕನ್ನಡ ಚಲನಚಿತ್ರ ರಂಗದ ರಾಜಕುಮಾರ ಎಂದರು.

ಸಾ.ರಾ.ಗೋವಿಂದು ಮಾತನಾಡಿ, ಕನ್ನಡ ಭಾಷೆ, ಕನ್ನಡಿಗರಿಗೆ ಅನ್ಯಾಯವಾದರೆ ಸರ್ಕಾರಿ ಮತ್ತು ಬಿ.ಬಿ.ಎಂ.ಪಿ. ನೌಕರರ ಸಂಘ ನಮ್ಮ ಹೋರಾಟಕ್ಕೆ ಕೈ ಜೋಡಿಸುತ್ತಿದ್ದರು. ಸಾಧನೆ ಮಾಡಿದವರಿಗೆ ಮಾತ್ರ ಪ್ರಶಸ್ತಿ ಹುಡುಕಿಕೊಂಡು ಬರುತ್ತದೆ. ಡಾ‌.ರಾಜ್ ಕುಮಾರ್ ಕುಟುಂಬಕ್ಕೆ ಬೆಂಗಳೂರು ಮಹಾನಗರ ಪಾಲಿಕೆಗೆ ನಡುವೆ ಅವಿನಾಭಾವ ಸಂಭಂದವಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಆಡಳಿತ ಭಾಷೆ ಕನ್ನಡವಾಗಿತ್ತು ಎಂದರು.

ಷಡಕ್ಷರಿರವರು ಮಾತನಾಡಿ, ಪುನೀತ್ ರಾಜ್ ಕುಮಾರ್ ರವರ ಪುತ್ಥಳಿಯನ್ನ ಬಿ.ಬಿ.ಎಂ.ಪಿ. ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಿ ರಾಜ್ಯ ಸರ್ಕಾರಿ ನೌಕರರು ಗೌರವ ಸಲ್ಲಿಸಿದ್ದಾರೆ. ಸರ್ಕಾರಿ ಮತ್ತು ಬಿ.ಬಿ.ಎಂ.ಪಿ. ನೌಕರರು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಆಡಳಿತ ಭಾಷೆಯಾಗಿ ಬಳಸುತ್ತಾರೆ ಎಂದರು.

ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿಯನ್ನ ಕನ್ನಡ ಪರ ಹೋರಾಟಗಾರರಾದ ಅಶ್ವಿನಿ, ಕೊ.ನಾ.ನಾಗರಾಜ್, ಅರುಣ ಬಾಲರಾಜ್, ಹಿರಿಯ ಚಿತ್ರನಟಿ ಜಯಲಕ್ಷ್ಮೀ, ಹಿನ್ನೆಲೆ ಗಾಯಕ ಶಶಿಧರ ಕೋಟೆ, ಎಸಿಪಿ ರವಿಕುಮಾರ್, ಪತ್ರಕರ್ತರಾದ ಕೆರೆ ಮಂಜುನಾಥ್ ಅವಿನಾಶ್, ಸೋಮಣ್ಣ ಮಾಚಿಮಾಡ, ಅರವಿಂದ್ ಸಾಗರ್, ನಾಗಪ್ಪರವರಿಗೆ ಮತ್ತು ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರಿಗೆ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Leave a Reply