ನರೇನಹಳ್ಳಿ ಅರುಣ್‌ ಕುಮಾರ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗರಿ

3 years ago

ಚಿತ್ರದುರ್ಗ: ಪತ್ರಕರ್ತ, ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ, ಕಾರ್ಯನಿರತ ಪತ್ರಕರ್ತ ಸಂಘಟನೆಯ ರಾಜ್ಯಸಮಿತಿ ಮಾಜಿ ಸದಸ್ಯ, ಅಲೆಮಾರಿ ಸಮುದಾಯದ ಸಂಘಟನೆಗಳಿಗೆ ಸಾಮಾಜಿಕ ಕಾರ್ಯಕರ್ತರಾಗಿ ಶ್ರಮಿಸಿರುವ ನರೇನಹಳ್ಳಿ ಅರುಣ್‌ ಕುಮಾರ್‌ ಅವರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕಳೆದ ಎರಡು ದಶಕಗಳಿಗೂ ಹೆಚ್ಚುಕಾಲ ಪತ್ರಕರ್ತರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಹಾಗೂ ಕಾರ್ಯನಿರತ ಪತ್ರಕರ್ತ ಸಂಘಟನೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ನರೇನಹಳ್ಳಿ ಅರುಣ್ ಕುಮಾರ್ ಅವರು ಕಳೆದ ನಾಲೈದು ವರ್ಷಗಳಿಂದ ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹಿಸಿದಂತಾಗಿದೆ.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಕೊಡಮಾಡಲ್ಪಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮಾಧ್ಯಮ ಕ್ಷೇತ್ರದಲ್ಲಿ ಎರಡೂವರೆ ದಶಕಗಳಿಂದ ಜನಮುಖಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನರೇನ್‌ಹಳ್ಳಿ ಅರುಣ್‌ ಕುಮಾರ್ ಅವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಅರ್ಹರಿಗೆ ಸಂದ ಪ್ರಶಸ್ತಿಯಾಗಿದೆ ಎಂದು ಸಾಮಾಜಿಕ ವಲಯ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಕಳೆದು ಎರಡು ಮೂರು ದಶಕಗಳಿಂದ ಸಾಮಾಜಿಕ, ಮಾಧ್ಯಮ ಮತ್ತು ಪತ್ರಕರ್ತರ ಸಂಘಟನೆಯಲ್ಲಿ ತಮ್ಮನ್ನು ತಾವು ಅವಿರತವಾಗಿ ತೊಡಗಿಸಿಕೊಂಡಿರುವ ನರೇನಹಳ್ಳಿ ಅರುಣ್‌ ಕುಮಾರ್‌ ಅವರು ಸಮಾಜಮುಖಿ ಪತ್ರಿಕೋದ್ಯಮವನ್ನು ರೂಢಿಸಿಕೊಂಡವರು. ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು, ಶೋಷಿತ ಸಮುದಾಯಗಳ ಪರವಾಗಿ ಬದುಕು ಮತ್ತು ಬರಹ ಹಾಗೂ ಸಮಾಜಮುಖಿ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾದವರು. ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಾಹಿತ್ಯ, ಪತ್ರಿಕೋದ್ಯಮ, ಇತಿಹಾಸ ನಿರ್ಮಾಣದ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸಿರುವ ಇವರು ತಮ್ಮ ಇಡೀ ಬದುಕಿನುದ್ದಕ್ಕೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.

ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಸಂಸ್ಥಾಪಕ ಹೋರಾಟ ಸಮಿತಿ ಸಂಚಾಲಕರಾಗಿ, ರೈಲ್ವೆ ಹೋರಾಟ ಸಂಚಾಲಕರಾಗಿ ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೇ ಹೋರಾಟವನ್ನು ರೂಪಿಸಿದವರು. ಇವರ ಜನಪರ ಹೋರಾಟಗಳನ್ನು ಗುರುತಿಸಿ ಜಿಲ್ಲಾಡಳಿತ ಮಾಧ್ಯಮ ಸೇವೆಗಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ದಿನಾಂಕ: 01-11-2022 ರಂದು ಮಂಗಳವಾರ ನೀಡಿ ಗೌರವಿಸಿ ಸನ್ಮಾನಿಸಿದೆ.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಜನಮುಖಿಯಾಗಿ ಕಾರ್ಯನಿರ್ವಹಿಸಿದ ಫಲವಾಗಿ ಜಿಲ್ಲಾಡಳಿತ ಮತ್ತು ಸರ್ಕಾರ ಗುರುತಿಸಿರುವುದು ವಿಶೇಷವಾಗಿದ್ದು, ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಅರ್ಹರನ್ನು ಗುರುತಿಸಿ ಅಭಿನಂಧಿಸಿರುವುದು ವಿಶೇಷವಾಗಿದ್ದು, ಇದೇ ಪ್ರವೃತ್ತಿ ಮುಂದಿನ ದಿನಗಳಲ್ಲೂ ಹಾಗೆಯೇ ಮುಂದುವರೆದರೆ ಸಮಾಜಕ್ಕೆ ಸೇವೆ ಸಲ್ಲಿಸಿದಂತಹ ಮಹನೀಯರನ್ನು ಗುರುತಿಸಿದಂತಾಗುತ್ತದೆ ಎಂಬ  ಅಭಿಪ್ರಾಯ ವ್ಯಕ್ತವಾಗಿದೆ.

ಪತ್ರಿಕೋದ್ಯಮ, ಸಾಮಾಜಿಕ ಕ್ಷೇತ್ರ, ಮಹಿಳಾಪರ ಹೋರಾಟ, ಮಕ್ಕಳ ಪರ ಹೋರಾಟ ಹಾಗೂ ನೀರಾವರಿ, ರೈಲ್ವೆ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಎರಡು ಮೂರು ದಶಕಗಳಿಂದ ಶ್ರಮಿಸಿದ ನರೇನಹಳ್ಳಿ ಅರುಣ್‌ ಕುಮಾರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಸಮಾಜಮುಖಿ ಚಿಂತನೆಗಳಿಗೆ ಗೌರವಿಸಿದಂತಹ ಮಹತ್ಕಾರ್ಯವಾಗಿದೆ ಎಂದು ಸ್ಥಳಿಯರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply