ಬೆಂಗಳೂರು: ಮಹಿಳಾ ಪೀಡಕರ ಕೂಟಕ್ಕೆ ಮಹಿಳಾ ರಕ್ಷಕರೇ ಅಪರಾಧಿಗಳಾಗಿ ಕಾಣುತ್ತಾರೆ ಎನ್ನುವುದಕ್ಕೆ ನಮ್ಮ ನಾಯಕರಾದ ರಾಹುಲ್ ಗಾಂಧಿಯವರಿಗೆ ನರೇಂದ್ರಮೋದಿ ಸರ್ಕಾರ ಪೊಲೀಸರ ಮೂಲಕ ನೀಡುತ್ತಿರುವ ಕಿರುಕುಳವೇ ಸಾಕ್ಷಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ರಾಹುಲ್ ಗಾಂಧಿಯವರ ಮೇಲೆ ದೆಹಲಿ ಪೊಲೀಸರು ನಡೆಸುತ್ತಿರುವ ವಿಚಾರಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸರುವ ಅವರು, ಕಾಶ್ಮೀರದಲ್ಲಿ ಮಹಿಳೆಯರೆಲ್ಲರೂ ಸುರಕ್ಷಿತರಾಗಿದ್ದಾರೆಯೇ? ಅವರ ಮೇಲೆ ಯಾವುದೇ ದೌರ್ಜನ್ಯಗಳು ನಡೆಯುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವ ಬದಲಿಗೆ ದೂರುದಾರರ ಬೆನ್ನು ಹತ್ತಿರುವ ಸರ್ಕಾರದ ದುರುದ್ದೇಶ ಅರ್ಥವಾಗದಷ್ಟು ದೇಶದ ಜನ ಮೂರ್ಖರಲ್ಲ.
ಉದ್ಯಮಿ ಅದಾನಿ ಹಗರಣಗಳ ಬಗ್ಗೆ ದನಿ ಎತ್ತಿದ ದಿನದಿಂದ ನರೇಂದ್ರ ಮೋದಿ ಅವರ ಸರ್ಕಾರ ರಾಹುಲ್ ಗಾಂಧಿಯವರ ಬೆನ್ನು ಹತ್ತಿದೆ ಎಂದರೆ ಆರೋಪದಲ್ಲಿ ಸತ್ಯ ಇದೆ ಎಂದರ್ಥ ಅಲ್ಲವೇ? ಕಳ್ಳರ ಮನಸ್ಸು ಹುಳ್ಳಗೆ…! ಎಂದಿದ್ದಾರೆ.
ಬಿಜೆಪಿಗೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ-ಗೌರವ ಇರುವುದಾಗಿದ್ದರೆ ಮೊದಲು ತಮ್ಮ ಪಕ್ಷದಲ್ಲಿ ಮಹಿಳಾ ಪೀಡನೆಯ ಆರೋಪ ಹೊತ್ತಿರುವವರ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಿ ಎಂದಿದ್ದಾರೆ.
ಆರೋಪಿಗಳ ಪಟ್ಟಿ ಉದ್ದ ಇದೆ.
ಭಾರತ್ ಜೋಡೊ ಯಾತ್ರೆಯ ಯಶಸ್ಸು ಆಡಳಿತಾರೂಢ ಬಿಜೆಪಿಯ ನಿದ್ದೆಗೆಡಿಸಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ಜನಪ್ರಿಯತೆ ಅವರಲ್ಲಿ ಅಸೂಯೆ ಹುಟ್ಟಿಸಿದೆ. ಇವರಿಗೆಲ್ಲ ನನ್ನ ಸಂತಾಪಗಳು. ರಾಹುಲ್ ಗಾಂಧಿಯವರ ಹೋರಾಟ ನಿಲ್ಲದು, ಇಡೀ ದೇಶ ಅವರ ಜೊತೆಗಿದೆ ಎಂದು ಹೇಳಿದ್ದಾರೆ.




