ಸಾಧ್ಯವಾದಷ್ಟು ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಗಿಡುವುದು ಪ್ರಭುತ್ವದ ನೀತಿ

4 years ago

ಈ ಭೂತ ಇನ್ನೇನು ಬಂತು ಬಂದೇಬಿಟ್ಟಿತು ಎಂದು ಆತಂಕದಿಂದ ಕ್ಷಣಗಣನೆ ಮಾಡುತ್ತಿರುವಾಗಲೇ ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಅವರು ರಾಜ್ಯ ವಿಶ್ವವಿದ್ಯಾಲಯಗಳಿಗೆ, ಖಾಸಗಿ, ಡೀಮ್ಡ್ ವಿವಿಗಳಿಗೆ ‘ನೀವು ಸಹ ಕೇಂದ್ರೀಯ ವಿವಿಯ ರೀತಿ ಪದವಿ ವ್ಯಾಸಂಗ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಅಳವಡಿಸಿಕೊಳ್ಳಿ’ ಎಂದು ಸೂಚಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಕೆಲ ಕೇಂದ್ರೀಯ ವಿವಿಗಳು ತಮ್ಮೊಳಗೆ ಒಪ್ಪಂದ ಮಾಡಿಕೊಂಡು ಪದವಿ ವ್ಯಾಸಂಗಕ್ಕೆ ಈ ಸಿಯುಸಿಇಟಿಯನ್ನು ಅಳವಡಿಸಿಕೊಂಡಾಗ ಶಿಕ್ಷಣದ ಭಾಗೀದಾರರು ಮೌನವಾಗಿದ್ದರು. ಮೊನ್ನೆ ಎಲ್ಲಾ 45 ಕೇಂದ್ರೀಯ ವಿವಿಗಳಿಗೂ ಸಿಯುಸಿಇಟಿಯನ್ನು ಕಡ್ಡಾಯಗೊಳಿಸಿದಾಗ ಶಿಕ್ಷಣದ ಭಾಗೀದಾರರು ಇದರ ಸಾಧಕ ಬಾಧಕಗಳ ಕುರಿತು ಚರ್ಚೆ ಮಾಡಲಿಲ್ಲ.

ಈಗ ಕೇಂದ್ರ ಶಿಕ್ಷಣ ಇಲಾಖೆಯು ಎಲ್ಲಾ ರಾಜ್ಯ ವಿವಿಗಳಿಗೂ ಇದನ್ನು ಕಡ್ಡಾಯಗೊಳಿಸಿ ಎಂದು ಆದೇಶ ಕೊಡುತ್ತಿದ್ದಾರೆ. ಅಂದರೆ ಇಲ್ಲಿನ ಶಿಕ್ಷಣದ ಭಾಗೀದಾರರಿಗೆ ಇದು ಸಮ್ಮತವೇ?

ಶಿಕ್ಷಣವೆಂದರೆ ಪರೀಕ್ಷೆ ನಡೆಸುವುದು, ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದು ಮತ್ತು ಪರೀಕ್ಷೆ ನಡೆಸುವುದರ ಮೂಲಕ  ಅದನ್ನು ಕಗ್ಗಂಟುಗೊಳಿಸಿ ಸಾಧ್ಯವಾದಷ್ಟು ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಗಿಡುವುದು ಎನ್ನುವ ಪ್ರಭುತ್ವದ ನೀತಿ ಈ ಭಾಗೀದಾರರಿಗೆ ಒಪ್ಪಿಗೆಯೇ?

ಅಸಮಾನ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿಪಡಿಸಿ ಸಮಾನ ಶಿಕ್ಷಣ ಜಾರಿಗೊಳಿಸದೆ ಈ ರೀತಿ ಏಕಪಕ್ಷೀಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇರುವುದರಿಂದ ಗ್ರಾಮೀಣ ಭಾಗದ ಮಕ್ಕಳು, ವಂಚಿತ ಸಮುದಾಯಗಳು  ಶಿಕ್ಷಣದಿಂದ ಸಂಪೂರ್ಣವಾಗಿ ಹೊರಗುಳಿಯುವುದು ಖಚಿತ ಎಂಬುದು ಸಹ ಭಾಗೀದಾರರಿಗೆ ಸಮ್ಮತವೇ?

ಪದವಿ ವ್ಯಾಸಂಗ ಪ್ರವೇಶಕ್ಕೆ ಈ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಕಡ್ಡಾಯಗೊಳಿಸುವುದರಿಂದ ಅದು ಸಹಜವಾಗಿ 10+2/ಪಿಯುಸಿ ಶಿಕ್ಷಣವನ್ನು ನಾಮಕಾವಸ್ತೆಗಿಳಿಸುತ್ತದೆ ಮತ್ತು ಖಾಸಗಿ ಕೋಚಿಂಗ್ ಕೇಂದ್ರಗಳು ನಾಯಿಕೊಡೆಗಳಂತೆ ಬೆಳೆದು ಸಂಪೂರ್ಣವಾಗಿ ತಮ್ಮ ಅಧಿಪತ್ಯ ಸ್ಥಾಪಿಸುತ್ತವೆ ಮತ್ತು ಸಹಜವಾಗಿ ಶಿಕ್ಷಣ ದುಬಾರಿಯಾಗಿ ಕೆಲವು ಸಾವಿರ ರೂಪಾಯಿಗಳಲ್ಲಿ ಮುಗಿಯಬಹುದಾಗಿದ್ದು ಕೊನೆಗೊಂಡು ಪಿಯುಸಿ ವ್ಯಾಸಂಗವು ಲಕ್ಷಾಂತರ ರೂ.ಗಳ ಬಾಬತ್ತಾಗುವುದು ಮತ್ತು ಇದನ್ನು ಭರಿಸಲಾಗದ ಶೇ. 66 ಪ್ರಮಾಣದ ಬಡ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ಹೊರಗುಳಿಯುವುದು ಭಾಗೀದಾರರಿಗೆ ಸಮ್ಮತವೇ?

ಶಿಕ್ಷಣವೆಂದರೆ ವಿವಿಧ ಜ್ಞಾನ ಶಾಖೆಗಳ ಕಲಿಕೆ, ಆಳವಾದ ಒಳನೋಟ ಪಡೆದುಕೊಳ್ಳುವುದು, ವಿಸ್ತ್ರತವಾದ ಅದ್ಯಯನ ಮತ್ತು ವಿದ್ಯಾರ್ಥಿಗಳು ‘ಸಹ ನಿರ್ಮಾತೃಗಳಾಗುವುದು’ ಎನ್ನುವ ಆಶಯವೇ ಕೊನೆಗೊಂಡು multiple questions tick ಮಾಡುವುದನ್ನು ಕಂಠಪಾಠ ಮಾಡುವ ದುಸ್ಥಿತಿಗೆ ತಲುಪುವುದು ಭಾಗೀದಾರರಿಗೆ ಸಮ್ಮತವೇ?

ಈ ಸಾಮಾನ್ಯ ಪ್ರವೇಶ ಪರೀಕ್ಷೆ ವೈದ್ಯಕೀಯ ಶಿಕ್ಷಣಕ್ಕಿದೆ, ಮಾನವಿಕ ಶಿಕ್ಷಣಕ್ಕೆ ಯಾಕೆ ಬೇಡ ಎನ್ನುವ ಪ್ರಶ್ನೆಗೆ ಉತ್ತರವಾಗಿ ಈಗಾಗಲೇ ಈ ನೀಟ್ ಕುರಿತು ಅನೇಕ ವಿವಾದ, ಗೊಂದಲಗಳಿವೆ. ಗ್ರಾಮೀಣ ಭಾಗದ ಮಕ್ಕಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅದೇ ಫಲಿತಾಂಶ ಈಗ ಮಾನವಿಕ ವಲಯಕ್ಕೂ ಅನ್ವಯಿಸುತ್ತದೆ.

ಇದರ ದುಷ್ಪರಿಣಾಮವೆಂದರೆ ದಲಿತ, ತಳ ಸಮುದಾಯದ ಮೊದಲ ತಲೆಮಾರಿನ ಮಕ್ಕಳು ಪದವೀಧರರಾಗುತ್ತಿರುವುದೇ ಕೊನೆಗೊಳ್ಳುತ್ತದೆ. ಇದು ಶಿಕ್ಷಣದ ಭಾಗೀದಾರರಿಗೆ ಸಮ್ಮತವೇ? ಮತ್ತು ಮುಖ್ಯವಾಗಿ ಎರಡು ವರ್ಷಗಳ ಹಿಂದೆ ಎನ್ ಇಪಿ 2020ನಲ್ಲಿ ಇದನ್ನು ಶಿಫಾರಸ್ಸು ಮಾಡಿದಾಗಲೇ ಪ್ರಶ್ನಿಸಿ ಅದನ್ನು ಜಾರಿಗೊಳಿಸದಂತೆ ಜನಾಂದೋಲನ ರೂಪಿಸಲು ವಿಫಲವಾಗಿರುವ ಶಿಕ್ಷಣದ ಭಾಗೀದಾರರಿಗೆ ಈಗ ಎಲ್ಲಾ ಮುಗಿದ ಕತೆ ಅಂತ ವ್ಯಥೆ ಏನಾದರೂ????

– ಬಿ.ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply