ಕೃಷಿ ಕ್ಷೇತ್ರದ ಬಲವರ್ಧನೆಗೆ ಶೀಘ್ರ ಆರ್ಥಿಕ ಸಹಕಾರ ಒದಗಿಸಿ: ಚಲುವರಾಯಸ್ವಾಮಿ

1 year ago

ಬೆಂಗಳೂರು: ರಾಜ್ಯದ ಕೃಷಿ ಕ್ಷೇತ್ರದ ಬಲವರ್ಧನೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪೂರಕವಾಗಿ ಬೇಕಾಗಿರುವ ವಿವಿಧ ಸಹಾಯ ಮತ್ತು ಆರ್ಥಿಕ ಸಹಕಾರವನ್ನು ಶೀಘ್ರ ಒದಗಿಸುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕಂದಾಯ ಸಚಿವ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಕೇಂದ್ರ ಕೃಷಿ, ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು,  ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕೃಷಿ ಇಲಾಖೆ ಶೇಕಡಾ 99ರಷ್ಟು ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆ ಮಾಡಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳಲ್ಲೂ ಶೇಕಡಾ 124ರಷ್ಟು ಅನುದಾನ ಬಳಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಭಾರಿಯೂ ಇದೆ ರೀತಿ ಹಣಕಾಸಿನ ನೆರವು ಒದಗಿಸಬೇಕು ಎಂದು ಕೋರಿದರು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಿಂದ ರೈತರಿಗೆ ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಈ ಭಾರಿ ಇನ್ನಷ್ಟು ಅಧಿಕ ಆರ್ಥಿಕ ನೆರವು ಒದಗಿಸುವಂತೆ ಮನವಿ ಮಾಡಿದ ಅವರು, ಆನೇಕಲ್ ತಾಲ್ಲೂಕಿನ, ಕಾಚನಾಯಕನಹಳ್ಳಿ ಗ್ರಾಮದಲ್ಲಿ ಗುರುತಿಸಲಾಗಿರುವ 20 ಎಕರೆ ಪ್ರದೇಶದಲ್ಲಿ ಪೆಸ್ಟಿಸೈಡ್ಸ್ ಫಾರ್ಮುಲೇಷನ್ ಟೆಕ್ನಾಲಜಿ ಸಂಸ್ಥೆ ಪ್ರಾರಂಭಕ್ಕೆ ಅನುಮೋದನೆ ಒದಗಿಸುವಂತೆ ಕೋರಿದರು.

ಸಾವಯವ, ಸಿರಿಧಾನ್ಯ ಉತ್ಪಾದನೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಮತ್ತು ಮಾರಾಟದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು ಇದನ್ನು ಇನ್ನಷ್ಟು ಉತ್ತಮಪಡಿಸಲು ಕೇಂದ್ರ ಸರ್ಕಾರದ ನೆರವು ಮತ್ತು ಪ್ರೋತ್ಸಾಹದ ಅಗತ್ಯವಿದೆ ಎಂದರು.

ಹಿಂಗಾರು ಜೋಳಕ್ಕೆ ನೀಡಲಾಗುತ್ತಿರುವ ಬೆಂಬಲ ಬೆಲೆ ಸೌಲಭ್ಯವನ್ನು ಮುಂಗಾರಿನಿಂದಲೇ ಅನುಷ್ಠಾನಗೊಳಿಸಲು ನಿರ್ದೇಶನ ನೀಡಬೇಕು. ರಾಗಿ, ಜೋಳಗಳಂತೆ ಇತರೆ ಸಿರಿಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂದು ಮನವಿ ಮಾಡಿದರು.

ಈ ಹಿಂದೆ  ಜಾರಿಗೆ ಬಂದ ಆತ್ಮ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಆದರೆ ರಾಜ್ಯದಲ್ಲಿ ನಂತರ  ಹೆಚ್ಚುವರಿಯಾಗಿ 59 ತಾಲ್ಲೂಕುಗಳು ರಚನೆಯಾಗಿರುವುದರಿಂದ ಹೊಸದಾಗಿ 177 ಸಹಾಯಕ ತಾಂತ್ರಿಕ ನಿರ್ವಾಹಕರು ಅಗತ್ಯವಿದ್ದು ಅದಕ್ಕೆ ಮಂಜೂರಾತಿಯೊಂದಿಗೆ ಅನುದಾನ ಒದಗಿಸುವಂತೆ  ಕೋರಿದರು.

ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವುದು, ಬೀಜ ಕಾಯ್ದೆಯಡಿ ದಂಡ ಮತ್ತು ಪರವಾನಿಗೆ ಶುಲ್ಕ ಹೆಚ್ಚಳ ಕುರಿತು ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಪಿ.ಎಂ.ಕೆ.ಎಸ್.ವೈ – ಪಿ.ಡಿ.ಎಂ.ಸಿ ವ್ಯವಸ್ಥೆಗಳ ಸುಧಾರಣೆಗಳ ಬಗ್ಗೆ  ಕೇಂದ್ರ ಸಚಿವರ ಗಮನ ಸೆಳೆದರು. 

ಅಲ್ಲದೇ ಜಲಾನಯನ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈಗಾಗಲೇ ವಿಶ್ವಬ್ಯಾಂಕ್ ನೆರವಿನೊಂದಿಗೆ ರೂ.567.98 ಕೋಟಿಗಳ ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಿದೆ. ರಾಜ್ಯದಲ್ಲಿ ಇನ್ನೂ 59.69 ಹೆಕ್ಟೇರ್ ಪ್ರದೇಶವನ್ನು ಜಲಾನಯನ ಅಭಿವೃದ್ಧಿ ಯೋಜನೆಯ ವ್ಯಾಪ್ತಿಗೆ ಸೇರಿಸಬೇಕಾಗಿದ್ದು, ಹೊಸದಾಗಿ 92 ಯೋಜನೆಗಳ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ಮತ್ತು ಅನುದಾನ ಒದಗಿಸುವಂತೆ ಮನವಿ ಮಾಡಿದರು.

ಚರ್ಚೆ ನಡೆಸಿದ ನಂತರ ಮಾತನಾಡಿದ ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ   ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಒಟ್ಟಾಗಿ ಕಾರ್ಯನಿರ್ವಹಿಸೋಣ, ರಾಜ್ಯಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನು ಒದಗಿಸಲು ಕೇಂದ್ರ ಸರ್ಕಾರ ಸಿದ್ದವಿದೆ ಎಂದರು.

ಆರ್ಥಿಕ ವರ್ಷ ಕೊನೆಯಾಗುತ್ತಿದ್ದು, ಒದಗಿಸುವ ಅನುದಾನವನ್ನು ಸಂಪೂರ್ಣವಾಗಿ ವೆಚ್ಚ ಮಾಡಿ ಹಣ ಸದ್ಭಳಕೆ ಪ್ರಮಾಣ ಪತ್ರವನ್ನು ನೀಡಿದ ಕೂಡಲೇ ಕೃಷಿ ಹಾಗೂ ಇತರೆ ಇಲಾಖೆಗಳಿಗೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಆತ್ಮ ಯೋಜನೆಯಡಿ ಅಗತ್ಯ ಪ್ರಮಾಣದ ಸಿಬ್ಬಂದಿಯನ್ನು ಸಹ ಒದಗಿಸಲಾಗುವುದು ಎಂದು ಭರವಸೆ ಕೊಟ್ಟರು.

Leave a Reply