ಡಿ.ಕೆ.ಸುರೇಶ್ ಮನೆ ಮುಂದೆ ಪ್ರತಿಭಟನೆ: ಪೊಲೀಸರನ್ನು ಕಂಡು ಪೇರಿಕಿತ್ತ ಪ್ರತಿಭಟನಾಕಾರರು

2 years ago

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತ್ಯೇಕ ರಾಷ್ಟ್ರದ ಕುರಿತು ಮಾತನಾಡಿದ್ದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ವಿರುದ್ಧ ಬಿಜೆಪಿ ಬೀದಿ ಹೋರಾಟಕ್ಕೆ ಚಾಲನೆ ನೀಡಿದೆ.

ಪ್ರತ್ಯೇಕ ರಾಷ್ಟ್ರ ಹೇಳಿಕೆ ವಿರೋಧಿಸಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಸುರೇಶ್ ಅವರ ಮನೆಗೆ ಬಿಜೆಪಿ ಕಾರ್ಯಕರ್ತರು ನುಗ್ಗಿ ಮುತ್ತಿಗೆ ಹಾಕಲು ಯತ್ನಿಸುವ ಮೂಲಕ ಕೆಲವು ಗಂಟೆಗಳ ಕಾಲ ಆ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಬೆಳಗ್ಗೆ ಅರಮನೆ ಮೈದಾನದ ಕಡೆಯಿಂದ ಬಳ್ಳಾರಿ ರಸ್ತೆಯನ್ನು ಏಕಾಏಕಿ ದಾಟಿ 50ಕ್ಕೂ ಹೆಚ್ಚು ಯುವ ಕಾರ್ಯಕರ್ತರು ಡಿ.ಕೆ.ಸುರೇಶ್ ಅವರ ಮನೆಯತ್ತ ನುಗ್ಗಿದರು. ಸಂಸದರ ನಿವಾಸದ ಪಕ್ಕದಲ್ಲಿಯೇ ಡಿಸಿಎಂ ಶಿವಕುಮಾರ್ ಅವರ ನಿವಾಸ ಇರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಸಂಸದ ಸುರೇಶ್ ವರ ನಿವಾಸಕ್ಕೆ ಮುತ್ತಿಗೆ ಹಾಕಲು ಬಳ್ಳಾರಿ ರಸ್ತೆ ದಾಟಿ ಬಂದ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಉಳಿದವರು ಓಡಲಾರಂಭಿಸಿದರು. ಪೊಲೀಸರು ಅವರ ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದುಕೊಂಡರು. ಆರಂಭದಲ್ಲೇ ಡಿ.ಕೆ.ಸುರೇಶ್ ಅವರ ಮನೆಯೊಳಗೆ ನುಗ್ಗಿದ ಕೆಲವರು ಧರಣಿ ನಡೆಸಿ ಜೈಶ್ರೀರಾಮ್ ಘೋಷಣೆ ಕೂಗಿದರು.

ಈ ದಿಢೀರ್ ಪ್ರತಿಭಟನೆಯಿಂದ ಕೆಲವು ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಪರದಾಡಿದರು. ಡಿ.ಕೆ.ಶಿವಕುಮಾರ್ ಅವರ ಮನೆಗೆ ದಿನನಿತ್ಯ ಆಗಮಿಸುವ ಜನಸಂದಣಿ ನಿಯಂತ್ರಿಸಲು ಪೊಲೀಸ್ ಭದ್ರತೆ ಇತ್ತು. ಹೀಗಾಗಿ ನುಗ್ಗಿ ಬರುತ್ತಿದ್ದ ಕಾರ್ಯಕರ್ತರನ್ನು ತಡೆಯಲು ಸಾಧ್ಯವಾಗಿದೆ. ಇಲ್ಲವಾಗಿದ್ದರೆ ದಿಢೀರ್ ನಡೆದ ಪ್ರತಿಭಟನೆ ಬೇರೆ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇತ್ತು.

ಈ ನಡುವೆ ಬಿಜೆಪಿ ನನ್ನ ಹೇಳಿಕೆಯನ್ನು ತಿರುಚಿ ಪ್ರತಿಭಟನೆ ನಡೆಸುತ್ತಿದೆ ಎಂದು ಕಿಡಿಕಾರಿರುವ ಸಂಸದ ಡಿ.ಕೆ.ಸುರೇಶ್, ದೇಶ ವಿಭಜನೆಯಾಗಬೇಕು ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಮನೆ ಬಳಿ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ನಡೆಸುವ ಹಾಗೂ ಮಾತನಾಡುವ ಸ್ವಾತಂತ್ರ್ಯವಿದೆ. ಅದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ ಎಂದರು.

ಬಿಜೆಪಿಯವರ ಹೋರಾಟಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡುತ್ತದೆ. ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದರಲ್ಲಿ ತಪ್ಪೇನು ಇಲ್ಲ. ನನ್ನ ಮನೆ ಬಳಿ ಬಂದವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.

ನನ್ನ ನಿಲುವು ಮತ್ತು ಹೇಳಿಕೆ ಅತ್ಯಂತ ಸ್ಪಷ್ಟವಾಗಿದೆ. ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ನಾನು ಮಾತನಾಡಿದ್ದೇನೆ. ಬಿಜೆಪಿಯವರು ಅದನ್ನು ತಿರುಚಿ ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಎಲ್ಲಿಯೂ ದೇಶ ವಿಭಜನೆಯ ಮಾತನಾಡಿಲ್ಲ. ಇದು ಉದ್ದೇಶಪೂರ್ವಕವಾದ ಅಪಪ್ರಚಾರ. ರಾಜಕಾರಣದಲ್ಲಿ ಬೇರೆ ಬೇರೆ ಆಯಾಮವಿರುತ್ತದೆ. ಬಿಜೆಪಿಯವರು ಚುನಾವಣೆಯ ಕಾರಣಕ್ಕೆ ನಾನಾ ರೀತಿಯ ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ ಎಂದರು.

Leave a Reply