ಬೆಂಗಳೂರು: ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ಕೀಳುಮಟ್ಟದ ಪದಪ್ರಯೋಗ ಹೇಳಿಕೆ ಖಂಡಿಸಿ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ, ಹಿಂದುವಳಿ ವರ್ಗದ ಮುಖಂಡ ರಾಮಕೃಷ್ಣಪ್ಪ,ಬಶಾಂತಪ್ಪ, ಪ್ರಭಾವತಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರಾಮಚಂದ್ರಪ್ಪ ಮಾತನಾಡಿ ಬಡವರ ಬಂಧು, ಅನ್ನಭಾಗ್ಯದ ರೂವಾರಿ ಮತ್ತು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಮತ್ತು ಜಾತ್ಯತೀತ ಸಿದ್ಧಾಂತದ ನಾಯಕ ಸಿದ್ದರಾಮಯ್ಯರವರು ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದಂತೆ ಸಾಗಿ ಬಂದಿದ್ದಾರೆ ಎಂದರು.
ಮುಖ್ಯಮಂತ್ರಿಯಾಗಿ ಆಡಳಿತ ಅವಧಿಯಲ್ಲಿ ಜನತೆಗೆ ನೀಡಿದ 165 ಭರವಸೆಗಳನ್ನು ಈಡೇರಿಸಿದ ಮುಖ್ಯಮಂತ್ರಿಗಳು ಎಂದರೆ ಅದು ಸಿದ್ದರಾಮಯ್ಯ ಅವರು. ಇದು ದೇಶದಲ್ಲಿ ದಾಖಲೆಯಾಗಿದೆ ಎಂದರು.
ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಲಕ್ಷಾಂತರ ಜನ ಅಭಿಮಾನಿಗಳು, ಸ್ನೇಹಿತರು ಸೇರಿದ್ದಾರೆ. ಇದನ್ನ ಸಹಿಸದ ಸಿ.ಟಿ.ರವಿ ಅವರು ಹೇಗಾದರು ಸರಿ ಸುಳ್ಳು ಹೇಳಿ ಅಪಪ್ರಚಾರ ಮಾಡಬೇಕು ಎಂದು ಸಿದ್ದರಾಮಯ್ಯ ಅವರ ವಿರುದ್ಧ ಕೀಳು ಮಟ್ಟದ ಪದ ಪ್ರಯೋಗ ಮಾಡಿದ್ದಾರೆ ಎಂದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕೂಡಲೆ ಕ್ಷಮಾಪಣೆ ಕೋರಬೇಕು ಇಲ್ಲದೇ ಹೋದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.



