ಆಪ್ ಪೊರಕೆ ಹಿಡಿದ ನಟಿ ಆರೋಹಿತ

4 years ago

ಬೆಂಗಳೂರು: ಕರ್ನಾಟಕ ಹಾಗೂ ದೇಶದೆಲ್ಲೆಡೆ ಯುವಜನತೆಯು ಬದಲಾವಣೆ ಬಯಸುತ್ತಿರುವುದನ್ನು ಗಮನಿಸುತ್ತಿದ್ದೇನೆ ಎಂದು ನಟಿ ಆರೋಹಿತ ಹೇಳಿದರು.

ಬೆಂಗಳೂರಿನಲ್ಲಿ ಆಪ್ ಸೇರ್ಪಡೆಯಾದ ನಂತರ ಪ್ರತಿಕ್ರಿಯೆ ನೀಡಿದ ಅವರು, ಬದಲಾವಣೆ ಸಾಧ್ಯವಾಗಬೇಕಾದರೆ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ದೆಹಲಿಯಲ್ಲಿ ಆಪ್ ಸರ್ಕಾರಿ ಶಾಲೆಗಳಲ್ಲಿ ಅದ್ಭುತ ಬದಲಾವಣೆ ತಂದಿದೆ. ಸ್ವಚ್ಛ ಹಾಗೂ ಗುಣಮಟ್ಟದ ಆಡಳಿತದಿಂದ ಮಾತ್ರ ಇದು ಸಾಧ್ಯ. ಕರ್ನಾಟಕದಲ್ಲೂ ಅಂತಹ ಆಡಳಿತ ಬರಬೇಕು ಎಂಬ ಉದ್ದೇಶದಿಂದ ಆಪ್ ಸೇರಿದ್ದೇನೆ ಎಂದರು.

ಆರೋಹಿತ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ಆರೋಹಿತರಂತಹ ಪ್ರತಿಭಾವನ್ವಿತರು ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಛಲದೊಂದಿಗೆ ಎಎಪಿ ಸೇರುತ್ತಿರುವುದನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಇಂತಹ ನಿಪುಣ ಹಾಗೂ ಪ್ರಬಲ ವ್ಯಕ್ತಿತ್ವಗಳನ್ನು ಆಮ್ ಆದ್ಮಿ ಪಾರ್ಟಿ ಮಾತ್ರ ಆಕರ್ಷಿಸಿ, ಕರ್ನಾಟಕದಲ್ಲಿ ಬದಲಾವಣೆ ತರಬಲ್ಲದು ಎಂದರು.

ಆಪ್ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ತಮ್ಮ ಸ್ವಂತ ವಾರ್ಡ್ ವಸಂತ ನಗರದಿಂದ ಆರೋಹಿತ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಬಯಸಿರುವುದು ಸಂತಸ ತಂದಿದೆ. ಅವರು ಅಲ್ಲಿ ಜಯಗಳಿಸಿ ನವ ಬೆಂಗಳೂರು ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಕರ್ನಾಟಕದ ಅನೇಕ ಗಣ್ಯ ಹಾಗೂ ಪ್ರಾಮಾಣಿಕ ವ್ಯಕ್ತಿಗಳು ಭ್ರಷ್ಟಾಚಾರ ಹಾಗೂ ಒಡೆದು ಆಳುವ ನೀತಿಯಿಂದ ಬೇಸತ್ತು ಆಪ್ ಸೇರುತ್ತಿದ್ದಾರೆ. ಈಗ ಈ ಸಾಲಿಗೆ ನಟಿ ಆರೋಹಿತ ಸೇರ್ಪಡೆಯಾಗಿದ್ದು, ಸ್ವಚ್ಛ ರಾಜಕೀಯವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಎಂದರು.

ಬೆಂಗಳೂರಿನ ವಸಂತ ನಗರ ನಿವಾಸಿಯಾಗಿರುವ ಆರೋಹಿತ ಬಿ.ಕಾಂ., ಪದವಿ ಪಡೆದಿದ್ದಾರೆ. ಕರಾಟೆ ಪಟು ಕೂಡ ಆಗಿರುವ ಇವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿ ಸಾಧನೆ ಮೆರೆದಿದ್ದಾರೆ. ಅಭಿನಯ ತರಂಗ ಸಂಸ್ಥೆಯಲ್ಲಿ ನಾಟಕದಲ್ಲಿ ನಾಟಕ ತರಬೇತಿ ಪಡೆದಿರುವ ಇವರು, ಆಟಗಾರ, ರಾಜರಾಜೇಂದ್ರ, ಜಗ್ಗಿ, ಭಾಗ್ಯ ರಾಜ್, ಕಿರಿಕ್ ಪಾರ್ಟಿ, ಗೌಡ್ರು ಹೋಟೆಲ್, ಕಾವೇರಿ, ಆಯುಷ್ಮಾನ್ ಭವ ಮೊದಲಾದ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಛಾಪು ಮೂಡಿಸಿದ್ದಾರೆ.

Leave a Reply