ಬೆಂಗಳೂರು: ರಸ್ತೆ ಗುಂಡಿಗಳಿಂದ ಸಾವು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಮತ್ತು ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸರ್ವ ಸಂಘಟನೆಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಬಿ.ಬಿ.ಎಂ.ಪಿ. ಕೇಂದ್ರ ಕಛೇರಿ ಆವರಣದಲ್ಲಿ ಅಣಕು ಶವಯಾತ್ರೆ ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಲಾಯಿತು .
ಪ್ರತಿಭಟನೆ ಉದ್ದೇಶಿಸಿ ಮಾತಾಡಿದ ಶಿವಕುಮಾರ ನಾಯಕ್, ರಸ್ತೆ ಗುಂಡಿಗಳಿಂದ ಹಲವು ನಾಗರಿಕರು ಮರಣ ಹೊಂದಿದ್ದಾರೆ. ಅವರ ಕುಟುಂಬಗಳು ಬೀದಿ ಪಾಲಾಗಿವೆ. ಗುಂಡಿ ಮುಚ್ಚಲು ಹೈಕೋರ್ಟ್ ಛೀಮಾರಿ ಹಾಕಿದರು ಬಿ.ಬಿ.ಎಂ.ಪಿ. ಬುದ್ಧಿ ಕಲಿತಿಲ್ಲ. ಗುಂಡಿ ಮುಚ್ಚದೇ ಹೋದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.
ಸರ್ವ ಸಂಘಟನೆ ಒಕ್ಕೂಟದ ವತಿಯಿಂದ ಬಿ.ಬಿ.ಎಂ.ಪಿ. ವಿಶೇಷ ಆಯುಕ್ತ ದಯಾನಂದ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ದಯಾನಂದ್, ಕಳೆದ ಎರಡು ವರ್ಷಗಳಿಂದ ಕೊರೋನ ಸಾಂಕ್ರಮಿಕ ರೋಗದ ಕಾರಣದಿಂದ ರಸ್ತೆಗಳಿಗೆ ಡಾಂಬರೀಕರಣ ಮಾಡಿಲ್ಲ ಹಾಗೂ ಬೆಂಗಳೂರಿನಲ್ಲಿ ಸತತ ಮಳೆಯಿಂದ ಗುಂಡಿ ಮುಚ್ಚಲು ಆಗಿಲ್ಲ. ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಮಳೆ ನಿಂತ ನಂತರ ರಸ್ತೆಗಳ ಗುಂಡಿ ಕೆಲಸ ಶೀಘ್ರದಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಿವಕುಮಾರನಾಯರ್, ರವಿಕುಮಾರ್, ಅಭಯಕೃಷ್ಣ, ರಾಜೇಶ್, ಸಂಜಯ್ ಗೌಡ, ವಿಜಿ, ಕೃಷ್ಣೇಗೌಡ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.



