ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರ ನೇತೃತ್ವದಲ್ಲಿ ರಚಿಸಲಾಗಿರುವ ಅನುಷ್ಠಾನ ಸಮಿತಿಗಳನ್ನು ರದ್ದುಪಡಿಸಲು ಆಗ್ರಹಿಸಿ ವಿಪಕ್ಷಗಳ ಸದಸ್ಯರು ನಡೆಸಿದ ಧರಣಿಗೆ ಕಲಾಪ ಬಲಿಯಾಯಿತು.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ಕಲಾಪ ಆರಂಭವಾಗುತ್ತಿದ್ದಂತೆಯೇ ನಿನ್ನೆ ಆರಂಭಿಸಿದ್ದ ಧರಣಿಯನ್ನು ಮುಂದುವರೆಸಿದ ಬಿಜೆಪಿ, ಜೆಡಿಎಸ್ ಶಾಸಕರು ಗ್ಯಾರಂಟಿ ಅನುಷ್ಠಾನ ಸಮಿತಿ ರದ್ದು ಮಾಡಬೇಕೆಂಬ ನಿಲುವಿಗೆ ಅಂಟಿಕೊಂಡರು.
ಸರ್ಕಾರ ಕೂಡ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರದ್ದು ಮಾಡಲು ಒಪ್ಪಲಿಲ್ಲ. ಈ ವಿಷಯವಾಗಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಈ ವೇಳೆ ಮಾತನಾಡಿದ ಸಭಾಧ್ಯಕ್ಷ ಯು ಟಿ ಖಾದರ್ ನಿನ್ನೆಯಿಂದಲೂ ಈ ವಿಚಾರ ಪದೇಪದೇ ಪ್ರಸ್ತಾಪವಾಗುತ್ತಿದೆ. ಇದರಿಂದ ಕಾರ್ಯಕಲಾಪಗಳಿಗೂ ಅಡ್ಡಿಯಾಗುತ್ತಿದೆ. ಸುಗಮವಾಗಿ ಕಾರ್ಯಕಲಾಪ ನಡೆಸಲು ಅನುಕೂಲವಾಗುವಂತೆ ಆಡಳಿತ ಮತ್ತು ಪ್ರತಿಪಕ್ಷದವರು ಸೇರಿ ಏನಾದರೂ ಪರಿಹಾರ ಕಂಡುಕೊಳ್ಳಿ. ಕಲಾಪ ನಡೆಯಲಿ ಎಂಬ ಸಲಹೆ ಮಾಡಿದರು.
ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಸದನ ನಡೆಯಬೇಕೆಂಬುದು ನಮ ಉದ್ದೇಶ. ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಸರ್ಕಾರದ ಖಜಾನೆ ಹಣ ನೀಡುವುದಕ್ಕೆ ವಿರೋಧವಿದೆ. ರಾಜ್ಯಸರ್ಕಾರ ಕಷ್ಟದಲ್ಲಿದೆ. ಹಣ ಹೊಂದಿಸಲಾಗದೆ ಪರದಾಡುತ್ತಿದೆ. ಅಂಗನವಾಡಿ ಕಾರ್ಯಕರ್ತರಿಗೆ, ಅತಿಥಿ ಉಪನ್ಯಾಸಕರಿಗೆ ಗೌರವಧನ ಸಕಾಲಕ್ಕೆ ನೀಡಲಾಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ ಶಾಸಕ ವಿ ಸುನಿಲ್ ಕುಮಾರ್ ಮಾತನಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರು, ಸದಸ್ಯರಿಗೆ ಜನರ ತೆರಿಗೆ ಹಣವನ್ನು ಏಕೆ ಕೊಡುತ್ತೀರಿ? ತಾಲ್ಲೂಕು ಪಂಚಾಯಿತಿ ನಿರ್ವಹಣಾಧಿಕಾರಿಗಳ ವೇತನ ಕಡಿತ ಮಾಡಿಕೊಡಿ, ನಾವು ಬೇಡ ಎನ್ನುವುದಿಲ್ಲ ಎಂದರು.
ಪರಿಸ್ಥಿತಿ ತಹಬಂದಿಗೆ ಬಾರದಿದ್ದನ್ನು ಗಮನಿಸಿದ ಸಭಾಧ್ಯಕ್ಷರು ಸುಗಮ ಕಲಾಪ ನಡೆಸಲು ಆಗುವುದಿಲ್ಲ ಎಂಬುದನ್ನು ಮನಗಂಡು ಸದನದ ಕಾರ್ಯಕಲಾಪವನ್ನು ಮಧ್ಯಾಹ್ನ 1.45 ಕ್ಕೆ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗಲೂ ಇದೇ ಪರಿಸ್ಥಿತಿ ಮುಂದುವರೆಯಿತು. ಧರಣಿ ಕೈ ಬಿಟ್ಟು ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಸಭಾಧ್ಯಕ್ಷರು ಮಾಡಿದ ಮನವಿಗೆ ಸ್ಪಂದಿಸಲಿಲ್ಲ.
ಇದರ ನಡುವೆ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ನೇಮಕದಿಂದ ಯಾವುದೇ ಶಾಸಕರ ಘನತೆಗೆ ಕುಂದುಂಟಾಗಿಲ್ಲ. ಈ ಬಗ್ಗೆ ಗಮನ ಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರ ನೇಮಕ ಕುರಿತಂತೆ ಪ್ರತಿ ಪಕ್ಷ ಶಾಸಕರಲ್ಲಿ ಗೊಂದಲ ಮತ್ತು ತಕರಾರುಗಳನ್ನು ಪರಿಹರಿಸಲು ಅಧಿವೇಶನ ಮುಗಿಯುತ್ತಿದ್ದಂತೆ ಶಾಸಕರ ಸಭೆ ಕರೆಯಲಾಗುವುದು ಎಂದರು.
ಅಧಿಕಾರಕ್ಕೆ ಬಂದಾಗ ಪಕ್ಷದ ಕಾರ್ಯಕರ್ತರಿಗೆ ಅಧಿಕಾರದಲ್ಲಿ ಅವಕಾಶ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನೆರೆಯ ಮಹಾರಾಷ್ಟ್ರದಲ್ಲಿ ಆಡಳಿತ ಪಕ್ಷದ ಎಲ್ಲಾ ಶಾಸಕರ ಕಚೇರಿಗೂ ಆರ್ ಎಸ್ ಎಸ್ ಕಾರ್ಯಕರ್ತರನ್ನು ನೇಮಿಸಿಕೊಳ್ಳುತ್ತಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ನೇಮಕದಿಂದ ತಾಲ್ಲೂಕುಗಳಲ್ಲಿ ಶಾಸಕರ ಘನತೆಗೆ, ಅಧಿಕಾರಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ. ಈ ಬಗ್ಗೆ ಎಲ್ಲಾ ಜಿಲ್ಲಾಡಳಿತಕ್ಕೂ ಸೂಚನೆ ನೀಡಲಾಗಿದೆ. ಈಗಾಗಲೇ ರಚಿತಗೊಂಡಿರುವ ರಾಜ್ಯ ಮತ್ತು ಜಿಲ್ಲಾ, ತಾಲ್ಲೂಕು ಗ್ಯಾರಂಟಿ ಜಾರಿ ಸಮಿತಿಗಳಲ್ಲಿ ಬದಲಾವಣೆ ಇಲ್ಲ ಎಂದರು.
ಇದರ ನಂತರವೂ ಧರಣಿ ಮುಂದುವರಿಸಿದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ನಾಳೆಗೆ ಮುಂದೂಡಿದರು.
ಇದರ ನಡುವೆ ವಿಧಾನಸೌಧದ ಪಶ್ಚಿಮದ್ವಾರದ ಬಳಿ ಇರುವ ಕೆಂಗಲ್ ಹನುಮಂತಯ್ಯರವರ ಪ್ರತಿಮೆ ಮುಂದೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಧರಣಿ ನಡೆಸಿ ಗ್ಯಾರಂಟಿ ಅನುಷ್ಠಾನ ಸಮಿತಿ ರದ್ದುಪಡಿಸಲು ಆಗ್ರಹಿಸಿದರು.
ನಂತರ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸೌಧದಿಂದ ರಾಜಭವನದವರೆಗೂ ಪಾದಯಾತ್ರೆಯಲ್ಲಿ ತೆರಳಿ ರಾಜಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.



